ಜನಸ್ನೇಹಿ ಪೊಲೀಸಿಂಗ್​ಗೆ ಸ್ವದೇಶಿ ಟಚ್

ವಿಜಯವಾಣಿ-3
Published on

ಸ್ವಾತಂತ್ರ್ಯ ನಂತರವೂ ಅಸ್ತಿತ್ವದಲ್ಲಿರುವ ಬ್ರಿಟಿಷ್ ಕಾಯ್ದೆಗಳಿಗೆ ಭಾರತೀಯತೆಯ ಸ್ಪರ್ಶ ನೀಡುವ ಮೂಲಕ ನಮ್ಮದೇ ನೆಲದ ಕಾನೂನನ್ನು ಜನಸ್ನೇಹಿ ಆಗಿಸಲು ಭಾರತೀಯ ದಂಡ ಸಂಹಿತೆಯನ್ನು (ಐಪಿಸಿ) ಭಾರತೀಯ ನ್ಯಾಯ ಸಂಹಿತೆಯಾಗಿ ಬದಲಿಸಲಾಗಿದೆ. ಇದೇ ರೀತಿ ಸಿಆರ್​ಪಿಸಿ ಸೆಕ್ಷನ್​ಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ ಎಂದು ಮಾರ್ಪಡಿಸ ಲಾಗಿದೆ. ಈ ಹೊಸ ನಿಯಮಗಳು ಪೊಲೀಸಿಂಗ್​ಗೆ ಹೆಚ್ಚಿನ ಅನುಕೂಲ ವಾಗಲಿದ್ದು, ಪೊಲೀಸರು ಹಾಗೂ ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸಲಿದೆ. ಇತ್ತೀಚೆಗಷ್ಟೇ ಜಾರಿಗೆ ಬಂದಿರುವ ಈ ನಿಯಮಗಳ ಬಗ್ಗೆ ಸಿಐಡಿ ವಿಭಾಗದ ಡಿಜಿಪಿ ಡಾ.ಎಂ.ಎ. ಸಲೀಂ ಹಾಗೂ ಸಿಐಡಿ ಅಭಿಯೋಜಕ ಮತ್ತು ಕಾನೂನು ಸಲಹೆಗಾರ ಮಹೇಶ್ ವೈದ್ಯ ವಿಜಯವಾಣಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡು ಮಾಹಿತಿ ನೀಡಿದ್ದಾರೆ.

ದೇಶದ ಗೃಹ ಹಾಗೂ ಆರಕ್ಷಣಾ ವಿಭಾಗದಲ್ಲಿ ಕ್ರಾಂತಿಕಾರಕ ಬದಲಾವಣೆ ಎಂದು ಹೇಳಲಾಗಿರುವ ಹೊಸ ಸೆಕ್ಷನ್​ಗಳನ್ನು ಒಳಗೊಂಡ ಭಾರತೀಯ ನ್ಯಾಯ ಸಂಹಿತೆ ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ-2 ಜನಸ್ನೇಹಿ ಪೊಲೀಸ್ ಆಡಳಿತ ನೀಡಲಿದೆ ಎಂದು ಸಿಐಡಿ ವಿಭಾಗದ ಡಿಜಿಪಿ ಡಾ. ಎಂ.ಎ. ಸಲೀಂ ಹೇಳಿದ್ದಾರೆ.

ವಿಜಯವಾಣಿ ಸಂವಾದದಲ್ಲಿ ಪಾಲ್ಗೊಂಡ ಅವರು ಹೊಸ ಕಾನೂನು, ನಿಯಮಗಳ ಬಗ್ಗೆ ಹೇಳಿದ್ದಿಷ್ಟು:

1860ರಲ್ಲಿ ಭಾರತೀಯ ದಂಡ ಸಂಹಿತೆ ಮತ್ತು 1872ರಲ್ಲಿ ಭಾರತೀಯ ಸಾಕ್ಷ್ಯ ಸಂಹಿತೆ ಆರಂಭ ಆಗಿದ್ದು, 164 ವರ್ಷಗಳ ಹಳೆಯ ಕಾನೂನು ಬಳಕೆ ಮಾಡಲಾಗುತ್ತಿತ್ತು. ಈ ಕಾನೂನು ರಚನೆ ಆದಾಗ ಬ್ರಿಟಿಷ್ ಆಡಳಿತವಿತ್ತು. ವಿದೇಶಿಯರ ಶಕ್ತಿ ಮತ್ತು ಹಿಡಿತ ಸಾಧಿಸಲು ರೂಪಿಸಲಾಗಿತ್ತು. 1947ರಲ್ಲಿ ಸ್ವಾತಂತ್ರ್ಯ ಬಂದ ಮೇಲೂ ಮುಂದುವರಿಸಿಕೊಂಡು ಬಂದಿದ್ದು, ಕಾಲಕಾಲಕ್ಕೆ ತಿದ್ದುಪಡಿ ತರಲಾಗಿದೆ. ಈ ನಡುವೆ ಶೇಕಡ 100 ಹೊಸ ಸ್ವರೂಪ ಕೊಡಬೇಕೆಂದು 2020ರಲ್ಲಿ ಕೇಂದ್ರ ಸರ್ಕಾರದ ಸಮಿತಿ ರಚನೆಯಾಗಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ-2023 ರಚನೆ ಮಾಡಲಾಗಿದೆ. ರಾಜಶಾಹಿ ಹೋಗಿ ನಾಗರಿಕಶಾಹಿ ಆಗಿ ಬದಲಾಗಿದ್ದು, ಪೀನಲ್ ಹೋಗಿ ನ್ಯಾಯ ಬಂದಿದೆ. ಶೇ.90 ಹಳೆಯ ಸ್ವರೂಪವೇ ಇದೆ.

ಇಂಡಿಯನ್ ಪೀನಲ್ ಕೋಡ್​ನಲ್ಲಿ 511 ಸೆಕ್ಷನ್​ಗಳು ಇದ್ದವು. ಈಗ ಅವುಗಳನ್ನು 357 ಸೆಕ್ಷನ್​ಗಳಿಗೆ ಇಳಿಸಲಾಗಿದೆ. ಇದರಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪಗಳ ಅನ್ವಯ ಸಿಆರ್​ಪಿಸಿಗೆ ತಿದ್ದುಪಡಿ ತರಲಾಗಿದ್ದು, ಇದೀಗ ಹೊಸ ಕಾಯ್ದೆಯಲ್ಲಿ ಸೇರಿಸಲಾಗಿದೆ. ಹೊಸ ಕಾನೂನು ಜುಲೈ 1ರಿಂದ ಜಾರಿಗೆ ಬಂದಿದ್ದು, ಒಂದು ತಿಂಗಳು ಮಾತ್ರ ಪೂರ್ಣಗೊಳಿಸಿದೆ. ರಾಜ್ಯದಲ್ಲಿ ಅನುಷ್ಠಾನ ಮಾಡುವ ಜವಾಬ್ದಾರಿ ಸಿಐಡಿಗೆ ದೊರೆತಿದ್ದು, 6 ತಿಂಗಳು ಕಾಲಾವಕಾಶ ನೀಡಲಾಗಿತ್ತು. ಆದರೆ, ಒಂದೇ ತಿಂಗಳಲ್ಲಿ 82 ಸಾವಿರ ಪೊಲೀಸರಿಗೆ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್​ಗಳಿಗೆ ತರಬೇತಿ ನೀಡಲಾಗಿದೆ. ಕನ್ನಡದಲ್ಲಿ ಕೈಪಿಡಿ ಮಾಡಿ ಪ್ರತಿ ಠಾಣೆಗೆ ತಲುಪಿಸಲಾಗಿದೆ. ಸಿಸಿಟಿಎನ್​ಎಸ್ (ಪೊಲೀಸ್ ಐಟಿ) ವಿಭಾಗ ಜುಲೈ 1ಕ್ಕೆ ಕಾರ್ಯ ನಿರ್ವಹಿಸುವಂತೆ ಮೇಲ್ದರ್ಜೆಗೆ ಏರಿಸಲಾಗಿದೆ.

ತೊಂಬತ್ತು ದಿನಗಳಲ್ಲಿ ಮಾಹಿತಿ

ಅಪರಾಧ ನಡೆದಾಗ ಕೇವಲ ಪೊಲೀಸ್ ಮತ್ತು ಆರೋಪಿ ನಡುವೆ ಮುಂದಿನ ಕಾನೂನು ಕ್ರಮ ನಡೆಯುತ್ತಿತ್ತು. ಸಂತ್ರಸ್ತರಿಗೆ ನ್ಯಾಯದಾನಕ್ಕೆ ಪ್ರಾಮುಖ್ಯ ನೀಡಿರಲಿಲ್ಲ. ಹೊಸ ಕಾಯ್ದೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಂತ್ರಸ್ತರಿಂದ ದೂರು ಪಡೆದ ದಿನದಿಂದ ತನಿಖೆ, ಆರೋಪಪಟ್ಟಿ ಮತ್ತು ನ್ಯಾಯದಾನದವರೆಗೂ ಡಿಜಿಟಲ್ ಆಗಿರುತ್ತದೆ. ಉಚಿತವಾಗಿ ಎಫ್​ಐಆರ್ ಪಡೆಯುವ ಹಕ್ಕು ಸಂತ್ರಸ್ತರಿಗಿದೆ. 90 ದಿನಗಳಲ್ಲಿ ತನಿಖೆ ಪ್ರಗತಿಯ ಮಾಹಿತಿ, ದಾಖಲೆಯನ್ನು ಸಂತ್ರಸ್ತರಿಗೆ ಹಸ್ತಾಂತರಿಸುವುದು ತನಿಖಾಧಿಕಾರಿಯ ಜವಾಬ್ದಾರಿ. ಪೊಲೀಸರ ತನಿಖೆ ಮೇಲೆ ವಿಶ್ವಾಸ ಬಾರದಿದ್ದರೆ ಕೋರ್ಟ್​ಗೆ ಹೋಗಿ ಆದೇಶ ತರಬಹುದು. ಸಾಕ್ಷ್ಯ ಒದಗಿಸಬಹುದು. ಸಂತ್ರಸ್ತರಿಗೆ ಮಾಹಿತಿ, ಹಾನಿಗಳಿಗೆ ಪರಿಹಾರ ಪಡೆಯುವ ಹಕ್ಕು ನೀಡಲಾಗಿದ್ದು, ದಂಡಕ್ಕಿಂತ ನ್ಯಾಯ ಒದಗಿಸುವುದು ಮುಖ್ಯವಾಗಿದೆ.

ಡಿಜಿಟಲ್ ಸಾಕ್ಷ್ಯಕ್ಕೆ ಆದ್ಯತೆ

ಭಾರತೀಯ ಸಾಕ್ಷ್ಯ ಅಧಿನಿಯಮ-2023ರಲ್ಲಿ ಹೆಚ್ಚಿನ ಬದಲಾವಣೆ ಆಗಿಲ್ಲ. ಡಿಜಿಟಲ್ ಸಾಕ್ಷ್ಯ ಗಳಿಗೆ ಹೆಚ್ಚಿನ ಒತ್ತು ಕೊಟ್ಟಿರುವ ಪರಿಣಾಮ ತನಿಖೆಗೆ ಶಕ್ತಿ ತುಂಬಿದಂತೆ ಆಗಿದೆ. 7 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ಹೊಂದಿರುವ ಪ್ರಕರಣಗಳಲ್ಲಿ ಫೋರೆನ್ಸಿಕ್ಸ್, ವಿಡಿಯೋ, ಆಡಿಯೋ ಮಹಜರ್ ಕಡ್ಡಾಯವಾಗಿದೆ. ಇದರಿಂದ ಸಾಕ್ಷ್ಯ ಸಂಗ್ರಹದಲ್ಲಿ ಹೆಚ್ಚಿನ ಬಲಬಂದಂತೆ ಆಗಿದೆ. ಪೊಲೀಸ್ ಶೋಧ ಪ್ರಕ್ರಿಯೆಯ ದೃಶ್ಯ ಚಿತ್ರೀಕರಣ, ಅತ್ಯಾಚಾರ ಸಂತ್ರಸ್ತರ ಇ-ಹೇಳಿಕೆ, ವರ್ಚುವಲ್ ಮೂಲಕ ಕೋರ್ಟ್​ಗೆ ಹಾಜರು ಹೀಗೆ ತಂತ್ರಜ್ಞಾನದ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮತ್ತಷ್ಟು ಪಾರದರ್ಶಕ ತನಿಖೆ ಸಾಧ್ಯವಾಗಲಿದೆ. ದೇಶದಲ್ಲಿಯೇ 206 ಸ್ಕ್ರೀನ್ ಆಫ್ ಕ್ರೖೆಂ ಆಫೀಸರ್ ನೇಮಕ ಮಾಡಿಕೊಂಡಿರುವ ಮೊದಲ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ಯಾವುದೇ ಅಪರಾಧ ಪ್ರಕರಣ ನಡೆದಾಗ ಪೊಲೀಸರೊಂದಿಗೆ ಸ್ಕ್ರೀನ್ ಆಫ್ ಕ್ರೖೆಂ ಆಫೀಸರ್ ಸ್ಥಳಕ್ಕೆ ಬಂದು ಸಾಕ್ಷ್ಯಾಧಾರ ಸಂಗ್ರಹಿಸುತ್ತಾರೆ.

ಮಾಹಿತಿಗಾಗಿ ಸಂಚಯ ಆಪ್

ಐಪಿಸಿ ಮತ್ತು ಬಿಎನ್​ಎಸ್ ಕಾಯ್ದೆ ಮಾಹಿತಿ ನೀಡುವ ಸಲುವಾಗಿ ‘ಸಂಚಯ’ ಹೆಸರಿನಲ್ಲಿ ಮೊಬೈಲ್ ಆಪ್ ಹೊರತರಲಾಗಿದೆ. ಈಗಾಗಲೇ 72 ಸಾವಿರ ಜನರು ಈ ಆಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಪ್ರತಿದಿನ 2 ಗಂಟೆಗಳ ಕಾಲ ಆನ್​ಲೈನ್ ತರಗತಿ ಕೂಡ ನಡೆಸಲಾಗುತ್ತಿದೆ. ಹೊಸ ಕಾಯ್ದೆ ಜಾರಿಗೆ ಬಂದರೂ 20 ವರ್ಷಗಳ ಕಾಲ ಐಪಿಸಿ ಸೆಕ್ಷನ್​ಗಳು ಇರುವ ಸಾಧ್ಯತೆ ಇದೆ. ಅಂದರೆ ಜುಲೈ 1ಕ್ಕಿಂತ ಮೊದಲು ನಡೆದಿರುವ ಹಳೆಯ ಪ್ರಕರಣಗಳು ಮುಗಿಯುವವರೆಗೂ ಐಪಿಸಿ ಸೆಕ್ಷನ್​ಗಳು ಮುಂದುವರಿಯಲಿವೆ. ಹೊಸ ಕಾಯ್ದೆಯಿಂದ ಜನಸ್ನೇಹಿ ಪೊಲೀಸಿಂಗ್​ಗೆ ಹೆಚ್ಚಿನ ಅನುಕೂಲವಾಗಿದೆ.

ವಿದ್ಯುನ್ಮಾನವಾಗಿ ದೂರು ಸಲ್ಲಿಕೆ

ಇ-ಮೇಲ್, ಫ್ಯಾಕ್ಸ್, ವಾಟ್ಸ್​ಆಪ್ ಸೇರಿ ವಿದ್ಯುನ್ಮಾನ ಮೂಲಕ ಯಾವುದೇ ಪೊಲೀಸ್ ಠಾಣೆಗೆ ದೂರು ಸಲ್ಲಿಸಬಹುದು. ದೂರು ಸಲ್ಲಿಸಲು ಠಾಣಾ ಗಡಿ ಅಡ್ಡಿಯಾಗದು. ದೂರು ಸ್ವೀಕರಿಸಿದ ತನಿಖಾಧಿಕಾರಿ ಶೂನ್ಯ ಎಫ್​ಐಆರ್ ದಾಖಲಿಸಿಕೊಂಡು ಪ್ರಾಥಮಿಕ ತನಿಖೆ ಶುರು ಮಾಡುತ್ತಾರೆ. ಮೂರು ದಿನಗಳೊಳಗಾಗಿ ದೂರುದಾರ ಸಂಬಂಧಪಟ್ಟ ಠಾಣೆಗೆ ಖುದ್ದು ಹಾಜರಾಗಿ ಹೇಳಿಕೆ ನೀಡಿದರೆ ಎಫ್​ಐಆರ್ ದಾಖಲಿಸಿ ಅಪರಾಧ ನಡೆದ ವ್ಯಾಪ್ತಿ ಗಮನಿಸಿ ಪ್ರಕರಣ ವರ್ಗಾವಣೆ ಮಾಡುವ ಜನಸ್ನೇಹಿ ಕ್ರಮ ಕಾಯ್ದೆಯಲ್ಲಿದೆ.

ಡಿಜಿಟಲ್ ದೂರು ಸ್ಪಷ್ಟತೆ ಇರಲಿ

ಇ-ಮೇಲ್, ವಾಟ್ಸ್​ಆಪ್, ಟೆಲಿಗ್ರಾಮ್ ಎಕ್ಸ್, ಫೋನ್ ಕರೆ ಸೇರಿ ಜಾಲತಾಣದಲ್ಲೂ ದೂರು ಸಲ್ಲಿಸಲು ಅವಕಾಶವಿದೆ. ದೂರು ಕೊಡುವವರ ಗುರುತು, ಅಪರಾಧ ಕೃತ್ಯದ ಸ್ಥಳ, ಸಮಯ, ವಿಶ್ವಾಸ ಅರ್ಹತೆ ಇದ್ದರೆ ಠಾಣಾಧಿಕಾರಿ ದೂರು ಸ್ವೀಕರಿಸಿ ಶೂನ್ಯ ಎಫ್​ಐಆರ್ ದಾಖಲಿಸಿಕೊಳ್ಳಲಿದ್ದಾರೆ. ಬಳಿಕ 3 ದಿನಗಳ ಒಳಗಾಗಿ ಖುದ್ದು ಠಾಣಾಧಿಕಾರಿ ಮುಂದೆ ಹಾಜರಾಗಿ ಹೇಳಿಕೆ ನೀಡಿದರೆ ಎಫ್​ಐಆರ್ ದಾಖಲಾಗಲಿದೆ ಎಂದು ಸಿಐಡಿ ವಿಶೇಷ ಅಭಿಯೋಜಕ ಮಹೇಶ್ ವೈದ್ಯ ತಿಳಿಸಿದರು.

ಸಂವಾದದಲ್ಲಿ ಮಹೇಶ್ ವೈದ್ಯ ಹೇಳಿದ್ದಿಷ್ಟು:

ಜನರಿಗೂ ಅಧಿಕಾರ

ಕಾಗ್ನಿಜೆಬಲ್ ಅಪರಾಧ ನಡೆದಾಗ ಆರೋಪಿಗಳನ್ನು ಬಂಧಿಸುವ ಅಧಿಕಾರ ಪೊಲೀಸರಿಗೆ ಮಾತ್ರ ನೀಡಿಲ್ಲ. ಜತೆಗೆ ನಾಗರಿಕರಿಗೂ ನೀಡಲಾಗಿದೆ. ಅಪರಾಧ ಕೃತ್ಯ ನಡೆದಾಗ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಬಹುದು. ತನಿಖಾಧಿಕಾರಿ, ಕೋರ್ಟ್ ಮುಂದೆ ಹೇಳಿಕೆ ನೀಡಬಹುದು. ವಾರಂಟ್​ನ್ನು ಖುದ್ದು ಪೊಲೀಸರು ಅಥವಾ ಕೋರ್ಟ್ ಸಿಬ್ಬಂದಿ ನೀಡಬೇಕೆಂದೇನೂ ಇಲ್ಲ. ಡಿಜಿಟಲ್ ರೂಪದಲ್ಲಿ ಅಥವಾ ಜನರ ಮೂಲಕವೂ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ಕೆಲಸ ಜನರು ಮಾಡದೆ ಇರುವ ಕಾರಣಕ್ಕೆ ಪೊಲೀಸರಿಗೆ ಅಧಿಕಾರ ನೀಡಲಾಗಿದೆ.

ಗೈರುಹಾಜರಿಯಲ್ಲೂ ಟ್ರಯಲ್

ವಿದೇಶದಲ್ಲಿ ಮತ್ತು ಅಜ್ಞಾತಸ್ಥಳದಿಂದ ಅಪರಾಧ ಎಸಗುವ ಆರೋಪಿಗಳ ಗೈರುಹಾಜರಿಯಲ್ಲಿ ನ್ಯಾಯಾಲಯ ವಿಚಾರಣೆ ನಡೆಸುತ್ತಿರಲಿಲ್ಲ. ಸಂತ್ರಸ್ತರಿಗೆ ನ್ಯಾಯದಾನದಲ್ಲಿ ವಿಳಂಬ ಮತ್ತು ಕೋರ್ಟ್​ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳ ಆಗುತ್ತಿತ್ತು. ಹೊಸ ಕಾಯ್ದೆಯಲ್ಲಿ ಆರೋಪಿಗಳ ಗೈರು ಆದರೂ ಸಾಕ್ಷ್ಯಾಧಾರ ಗಳ ಚೌಕಟ್ಟಿನಲ್ಲಿ ವಿಚಾರಣೆ ನಡೆಸಿ ಘೋಷಿತ ಅಪರಾಧಿಗೆ 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ/ಜೀವಾವಧಿ ಶಿಕ್ಷೆ ವಿಧಿಸಲು ಅವಕಾಶವಿದೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರವಿದೆ. ಅಂತಹ ಅಪರಾಧಿ 3 ವರ್ಷಗಳ ಕಾಲಮಿತಿಯಲ್ಲಿ ಖುದ್ದು ಆಗಮಿಸಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಪ್ರಾದೇಶಿಕತೆಗೆ ತಕ್ಕಂತೆ ತಿದ್ದುಪಡಿ

ಪ್ರಾದೇಶಿಕತೆ ನೋಡಿಕೊಂಡು ತಿದ್ದುಪಡಿ ತರಲು ಅವಕಾಶವಿದೆ. ನಾನ್ ಕಾಗ್ನಿಜೆಬಲ್ ಪ್ರಕರಣ ಸಂಬಂಧ ತಿದ್ದುಪಡಿ ತರಲು ಅವಕಾಶವಿದೆ. ಕಾನೂನು ಇಲಾಖೆ ಅದರ ಬಗ್ಗೆ ನಿರಂತರವಾಗಿ ಕೆಲಸ ಮಾಡಲಿದೆ.

ಪ್ರಾಸಿಕ್ಯೂಷನ್ ಅನುಮತಿಗೆ 120 ದಿನ ನಿಗದಿ

ಸರ್ಕಾರಿ ನೌಕರರ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿ ಸಕ್ಷಮ ಪ್ರಾಧಿಕಾರಕ್ಕೆ ಕೋರಿಕೆ ಸಲ್ಲಿಸಿದಾಗ ಇಂತಿಷ್ಟೇ ದಿನದಲ್ಲಿ ಉತ್ತರಿಸಬೇಕೆಂಬ ಕಾನೂನು ಇರಲಿಲ್ಲ. ಬಿಎನ್​ಎಸ್ ಪ್ರಕಾರ ಕೋರಿಕೆ ಸಲ್ಲಿಸಿದ 120 ದಿನಗಳ ಒಳಗಾಗಿ ಅನುಮತಿ ನೀಡಬೇಕು ಅಥವಾ ನಿರಾಕರಿಸಬೇಕು. ಇಲ್ಲವಾದರೆ, ಅನುಮತಿ ಲಭ್ಯವಾಗಿದೆ ಎಂದು ತಿಳಿದು ತನಿಖೆ ನಡೆಸಲು ಅವಕಾಶ ನೀಡಲಾಗಿದೆ. ಇದಲ್ಲದೆ, ಖಾಸಗಿ ದೂರನ್ನು ಕೋರ್ಟ್ ನಲ್ಲಿ ಸಲ್ಲಿಸಿದಾಗ ಸಮನ್ಸ್ ಜಾರಿಯಾದ ಮೇಲೆ ಆತನಿಗೆ ತಿಳಿಯುತ್ತಿತ್ತು. ಬಿಎನ್​ಎಸ್​ನಲ್ಲಿ ಖಾಸಗಿ ದೂರು ದಾಖಲಾದ ಕೂಡಲೇ ಸಮನ್ಸ್ ಜಾರಿ ಮಾಡಿ ಕಾಗ್ನಿಜೆಬಲ್ ಕೇಸ್ ತೆಗೆದುಕೊಳ್ಳಬೇಕೇ ಇಲ್ಲವೆ ಎಂಬ ಉತ್ತರ ಆತನಿಂದ ಪಡೆದು ಮುಂದುವರಿಸಬೇಕಾಗಿದೆ. ಮೇಲಾಧಿಕಾರಿಯಿಂದ ಸಾಕ್ಷ್ಯ ಪಡೆದು ಕೇಸ್ ದಾಖಲಿಸಿ ತನಿಖೆ ಕೈಗೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net