ಪೋಕ್ಸೋ ಪ್ರಕರಣದಲ್ಲಿ ಹೊರಬಂದಿದ್ದ ಯುವಕ ಅನುಮಾನಾಸ್ಪದ ಸಾವು

mng--crime
Published on

ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಂದಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.

ಸಂಪಂಗಿರಾಮನಗರದ ಸತ್ಯ (20) ಮೃತ ಯುವಕ. ಶುಕ್ರವಾರ ಬೆಳಗ್ಗೆ ಮಿಷನ್ ರಸ್ತೆಯ ಕಟ್ಟಡದ ಮೆಟ್ಟಿಲ ಕೆಳಗೆ ಸತ್ಯನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಶವವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಸಂಬಂಧ ಅಸಹಜ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಸತ್ಯ, ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದ. ಕಳೆದ ವರ್ಷ ಅಪ್ರಾಪ್ತೆ ಪಾಲಕರಿಗೆ ಗೊತ್ತಾಗಿ ಸತ್ಯನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಜಾಮೀನು ಪಡೆದು ಸತ್ಯ ಜೈಲಿನಿಂದ ಹೊರಬಂದಿದ್ದ.

ಕೆಲ ದಿನಗಳ ಹಿಂದೆ ಸತ್ಯ ಮತ್ತೆ ಅಪ್ರಾಪ್ತೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಈ ವಿಚಾರ ಅಪ್ರಾಪ್ತೆ ಮನೆಯವರಿಗೆ ಗೊತ್ತಾಗಿ ಸತ್ಯನ ಜತೆಗೆ ಗಲಾಟೆ ಮಾಡಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಸತ್ಯನ ಶವ ಪತ್ತೆಯಾಗಿದೆ. ಬಾಲಕಿ ಮನೆಯವರೇ ಮಗನನ್ನು ಕೊಲೆ ಮಾಡಿದ್ದಾರೆ ಎಂದು ಸತ್ಯನ ಪಾಲಕರು ದೂರು ನೀಡಿದ್ದಾರೆ. ಈ ಸಂಬಂಧ ಸಂಪಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net