ಅಮೆರಿಕದಲ್ಲಿ ಸಂಶಯಾಸ್ಪದ ಸಾವು,ಪಾರ್ಥಿವ ಶರೀರ ತರಲು ಕ್ರಮ: ಕೃಷ್ಣ ಬೈರೇಗೌಡ

Published on

ಬೆಂಗಳೂರು: ಅಮೆರಿಕದಲ್ಲಿ ಸಂಶಯಾಸ್ಪದ ಸಾವಿಗೀಡಾಗಿರುವ ದಾವಣಗೆರೆ ಜಿಲ್ಲೆಯ ಹಾಲೇಕಲ್ ಗ್ರಾಮದವರಾದ ಯೋಗೇಶ್, ಪತ್ನಿ ಪ್ರತಿಭಾ ಹಾಗೂ ಪುತ್ರ ಯಶ್ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಸಂಬಂಧ ನಿರಾಪೇಕ್ಷಣಾ ಪತ್ರ ಪಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ಎಂಜಿನಿಯರ್ ಆಗಿದ್ದ ಯೋಗೇಶ್ ಕುಟುಂಬದೊಂದಿಗೆ 9 ವರ್ಷದಿಂದ ಅಮೆರಿಕದ ಬಾಲ್ಟಿಮೋರ್‌ನಲ್ಲಿ ನೆಲೆಸಿದ್ದರು. ಬಾಲ್ಟಿಮೋರ್‌ನ ಪೊಲೀಸರು ಶನಿವಾರ ಮೃತರ ಕುಟುಂಬಕ್ಕೆ ಕರೆ ಮಾಡಿದ್ದು ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ. ಈ ಪ್ರಕರಣದ ಸಂಬಂಧ ಅಮೆರಿಕದ ರಾಯಭಾರ ಕಚೇರಿ, ಹೂಸ್ಟನ್ ಕಾನ್ಸುಲೇಟ್ ಜನರಲ್ ಹಾಗೂ ಕೇಂದ್ರ ವಿದೇಶಾಂಗ ಸಚಿವಾಲಯ ಹಿರಿಯ ಅಧಿಕಾರಿಗಳ ಜತೆಗೂ ನಿರಂತರ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಕುಟುಂಬ-ಸಂಬಂಧಿಕರ ಜತೆಗೂ ಸಂಪರ್ಕ ಸಾಧಿಸಲಾಗಿದ್ದು, ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಡಳಿತಕ್ಕೂ ಸೂಚನೆ ನೀಡಲಾಗಿದೆ. ಸ್ವತಃ ನಾನೂ ಸಹ ನಿರಂತರವಾಗಿ ಪ್ರಕರಣದ ಮಾಹಿತಿ ಪಡೆಯುತ್ತಿದ್ದೇನೆ.

ಮೃತರ ಶರೀರವನ್ನು ಭಾರತಕ್ಕೆ ತರುವ ಕುರಿತು ಕುಟುಂಬ ಸದಸ್ಯರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು. ಈ ಸಂಬಂಧ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net