

ನಾಪೋಕ್ಲು: ಕಕ್ಕಬೆಯಲ್ಲಿ ಯುವಕರು ಬೆಟ್ಟಿಂಗ್ ಕಟ್ಟಿಕೊಂಡು ಸೇತುವೆಯಿಂದ ಹೊಳೆಗೆ ಹಾರಿದ ಘಟನೆಗೆ ಸಂಬಂಧಿಸಿದಂತೆ ಯುವಕನ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡಿದ್ದಾರೆ.
ಕುಂಜಲ ಗ್ರಾಮದ ನಿವಾಸಿ ಎಂ.ಕೆ.ನಾಸಿರ್ ಅವರ ಪುತ್ರ ಎಂ.ಎನ್.ಸಲ್ಮಾನ್ (ಚೆಲ್ಲು) ಎಂಬ ಯುವಕನ ವಿರುದ್ಧ ಸೋಮವಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಮಾಜದ ಸ್ವಾಸ್ಥ್ಯ ಕದಡುವ ಕೃತ್ಯ ಎಂಬ ಹಿನ್ನೆಲೆಯಲ್ಲಿ ಹಾಗೂ ಯಾವುದೇ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದೆ ಹೊಳೆಗೆ ಜಿಗಿಯುತ್ತಿರುವ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಇತರರಿಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಕ್ಕಬೆ ಪೇಟೆಯಲ್ಲಿರುವ ಸೇತುವೆ ಮೇಲೆಯಿಂದ ಕಕ್ಕಬ್ಬೆ ಹೊಳೆಗೆ ಜಿಗಿಯುವ ಸಂಬಂಧ ಸಮೀಪದ ಕುಂಜಿಲ ಗ್ರಾಮದ ಯುವಕರು 5000 ರೂ. ಚಾಲೆಂಜ್ ಕಟ್ಟುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ ಯುವಕ ಜೀವದ ಹಂಗು ತೊರೆದು ಸೇತುವೆ ಮೇಲಿಂದ ಸುಮಾರು 10 ಅಡಿ ಪ್ರವಾಹದ ನೀರಿಗೆ ಜಿಗಿದಿದ್ದು, ಬಳಿಕ ಈಜಿ ದಡ ಸೇರಿದ್ದ. ಈ ಹುಚ್ಚು ಸಾಹಸದ ಬಗ್ಗೆ ಸಾರ್ವಜನಿಕರಲ್ಲಿ ಪರ, ವಿರೋಧಗಳ ಚರ್ಚೆಗಳಿಗೆ ಗ್ರಾಸವಾಗಿತ್ತು.