ಶಂಕಿತರ ರಂಪಾಟ, ವಾರಿಯರ್ಸ್​ಗೆ ಪೀಕಲಾಟ

mandya
Published on

ಮಂಡ್ಯ: ಕರೊನಾ ವಾರಿಯರ್ಸ್ ಮೇಲಿನ ದೌರ್ಜನ್ಯಗಳು ರಾಜ್ಯಾದ್ಯಂತ ಮರುಕಳಿಸುತ್ತಲೇ ಇದ್ದು, ಬುಧವಾರ ಮಂಡ್ಯ ಜಿಲ್ಲೆಯಲ್ಲೂ ಇಂತಹದೇ ಒಂದು ಪ್ರಕರಣ ವರದಿಯಾಗಿದೆ. ಕ್ವಾರಂಟೈನ್​ನಲ್ಲಿರುವ ವ್ಯಕ್ತಿಗಳ ಶುಶ್ರೂಷೆಗೆ ತೆರಳಿದ ವೈದ್ಯೆಯೊಬ್ಬರ ಮುಖಕ್ಕೆ ಮಹಿಳೆ ಉಗಿದಿರುವುದು ವೈದ್ಯಕೀಯ ಸಿಬ್ಬಂದಿ ಆತ್ಮಸ್ಥೈರ್ಯ ಕುಗ್ಗುವಂತೆ ಮಾಡಿದೆ.

ತಾಲೂಕಿನ ಸಂತೆಕಸಲಗೆರೆ ಮುರಾರ್ಜಿ ವಸತಿ ಶಾಲೆಯಲ್ಲಿ ಕ್ವಾರಂಟೈನ್​ನಲ್ಲಿ ಇರುವವರನ್ನು ಪರೀಕ್ಷಿಸಲು ವೈದ್ಯೆಯೊಬ್ಬರು ತೆರಳಿದ್ದಾರೆ. ಅಲ್ಲಿ ಮಹಿಳೆಯೊಬ್ಬರು ಕೆಟ್ಟ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ. ಆಗ ವೈದ್ಯರು ಸರ್ಕಾರ ಕಲ್ಪಿಸಿರುವ ಸೌಲಭ್ಯವನ್ನು ನಾವು ಕೊಡುತ್ತೇವೆ ಎಂದುತ್ತರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳೆ, ಡಾಕ್ಟರ್ ಮುಖಕ್ಕೆ ಉಗಿದು ‘ನೀನು ಊಸರವಳ್ಳಿ, ಅಂಥವಳು, ಇಂಥವಳು’ ಎಂದು ನಿಂದಿಸಿದ್ದಾರೆ. ಇದರಿಂದ ಆಘಾತಕ್ಕೆ ಒಳಗಾದ ವೈದ್ಯೆ ಕಣ್ಣೀರು ಸುರಿಸುತ್ತ, ಜಿಲ್ಲಾ ಆರೋಗ್ಯ ಇಲಾಖೆಗೆ ಘಟನೆ ಬಗ್ಗೆ ವಿವರಿಸಿದ್ದಾರೆ. ನಂತರ ಇಬ್ಬರು ಅಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡಿ, ತಿಳಿ ಹೇಳಿ ಬಂದಿದ್ದಾರೆ. ಇನ್ನೂ ಕೆಲವರು ನೀವು ಕೊಡುವ ಊಟ ಬೇಡ, ನಮಗೆ ಮನೆ ಊಟ ಬೇಕು ಎಂದು ಆಗ್ರಹಿಸುತ್ತಿದ್ದರೆ, ಕೆಲವರು ನಮಗೆ ಮದ್ಯ ಬೇಕು. ತರಿಸಿಕೊಡಿ, ಇಲ್ಲ ನಮ್ಮನ್ನು ಹೊರಗೆ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕ್ವಾರಂಟೈನ್​ನಲ್ಲಿರುವ ವ್ಯಕ್ತಿಯೊಬ್ಬ ತನಗೆ ಹವಾನಿಯಂತ್ರಿತ ಕೊಠಡಿಯೇ ಬೇಕು. ಇಲ್ಲದಿದ್ದರೆ ಹೊರಗೆ ಬಿಡಿ ಎಂದು ಗಲಾಟೆ ಮಾಡುತ್ತಿದ್ದಾರೆ. ಇದರಿಂದ ಏನು ಮಾಡಬೇಕೆಂದು ಅಧಿಕಾರಿಗಳಿಗೆ ದಿಕ್ಕು ತೋಚದಂತಾಗಿದೆ.

ಪ್ರಾಣದ ಹಂಗು ತೊರೆದು ಸೇವೆ

ಯಾವುದೋ ಬೇರೆ ಗ್ರಾಮದ ವ್ಯಕ್ತಿಗೆ ಸೋಂಕು ಬಂದಿದೆ ಎಂಬ ಕಾರಣಕ್ಕೆ ಇಡೀ ಗ್ರಾಮವನ್ನೇ ಜನರು ತಪ್ಪು ಭಾವನೆಯಿಂದ ನೋಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕರೊನಾ ಸೈನಿಕರು, ಪಾಸಿಟಿವ್ ಬರುವ ಸಾಧ್ಯತೆಗಳಿರುವ ವ್ಯಕ್ತಿಗಳಿಗೆ ಹಾಗೂ ಸೋಂಕಿತರ ಪ್ರಥಮ, ದ್ವಿತೀಯ ಸಂಪರ್ಕದಲ್ಲಿರುವವರಿಗೆ ಪ್ರಾಣದ ಹಂಗು ತೊರೆದು ಊಟ, ಚಿಕಿತ್ಸೆ ನೀಡುತ್ತಿದ್ದಾರೆ. ಅಂಥವರಿಗೆ ಸಹಕಾರ ನೀಡುವ ಬದಲಿಗೆ ಬೈಯ್ಯುವುದು, ಗಲಾಟೆ ಮಾಡುವುದು, ಉಗಿಯುವುದು ಮಾಡುತ್ತಿರುವ ವುದು ಆತಂಕಕಾರಿ ಬೆಳವಣಿಗೆ. ಪ್ರಮುಖವಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಚಿಕಿತ್ಸೆ ನೀಡುವುದಿಲ್ಲ ಎಂದು ವಿಮುಖವಾದರೆ ಬೀದಿ ಬೀದಿಯಲ್ಲಿ ಹೆಣ ಬೀಳುತ್ತವೆ ಎಂಬ ಸಾಮಾನ್ಯ ಜ್ಞಾನ ಇಲ್ಲದಿರುವುದು ವಿಪರ್ಯಾಸ.

ಕ್ವಾರಂಟೈನ್ ಸೆಂಟರ್ ಧ್ವಂಸ

ಶಿವಮೊಗ್ಗ: ಇಲ್ಲಿನ ಬಾಪೂಜಿನಗರದ ಪ್ರೊ.ಬಿ.ಕೃಷ್ಣಪ್ಪ ಹಾಸ್ಟೆಲ್​ನಲ್ಲಿ ಕರೊನಾ ಶಂಕಿತರನ್ನು ಕ್ವಾರಂಟೈನ್​ನಲ್ಲಿ ಇರಿಸುವುದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಕಚೇರಿ ಪೀಠೋಪಕರಣ ಧ್ವಂಸ ಮಾಡಿ ಗೇಟ್ ಮುರಿದು ಒಳನುಗ್ಗಲು ಯತ್ನಿಸಿದವರ ಮೇಲೆ ಪೊಲೀಸರು ಲಘು ಲಾಠಿಚಾರ್ಜ್ ಮಾಡಿದ್ದಾರೆ.

ಎಲ್ಲರ ಆಸೆಗಳನ್ನು ಪೂರೈಸಲು ಸಾಧ್ಯವಿಲ್ಲ. ಅವಶ್ಯಕತೆ ಇರುವುದನ್ನು ಮಾತ್ರ ಕಲ್ಪಿಸಲು ಸರ್ಕಾರದಿಂದ ಸಾಧ್ಯ.ಕ್ವಾರಂಟೈನ್ ನಲ್ಲಿರುವವರು ಸಂಯಮದಿಂದ ವರ್ತಿಸಿ, ಸಹಕರಿಸಬೇಕು.

| ಡಾ.ಎಂ.ವಿ.ವೆಂಕಟೇಶ್ ಮಂಡ್ಯ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net