ಸರ್ಕಾರದ ಸಬ್ಸಿಡಿ ಹಾಗೂ ಸಲಕರಣೆ ವಿತರಣೆ ಸ್ಥಗಿತ; ಅನ್ನದಾತನಿಗೆ ಸಿಗದ ನೆರವು ; ವ್ಯವಸ್ಥೆ ವಿರುದ್ಧ ರೈತರ ಬೇಸರ

ಆನೇಕಲ್ ತಾಲೂಕಿನ ಗುಡ್ಡನಹಳ್ಳಿಯಲ್ಲಿ ರಾಗಿ ಬಣವೆಗೆ ಹರಿದ ಟಾರ್ಪಲ್ ಹೊದಿಸಿರುವುದು.
ಆನೇಕಲ್ ತಾಲೂಕಿನ ಗುಡ್ಡನಹಳ್ಳಿಯಲ್ಲಿ ರಾಗಿ ಬಣವೆಗೆ ಹರಿದ ಟಾರ್ಪಲ್ ಹೊದಿಸಿರುವುದು.
Published on

ಬೆಂಗಳೂರು ಗ್ರಾಮಾಂತರ ಆನೇಕಲ್: ರಾಜ್ಯ ಸರ್ಕಾರ, ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ನೀಡುತ್ತಿದ್ದ ಸಬ್ಸಿಡಿ ಹಾಗೂ ಸಲಕರಣೆ ವಿತರಣೆಯನ್ನು ಮೂರು ವರ್ಷಗಳಿಂದ ಸ್ಥಗಿತಗೊಳಿಸಿದೆ. ಇದರಿಂದ ಅನ್ನದಾತರು ಕೃಷಿಯಿಂದ ವಿಮುಖವಾಗುವಂತಾಗಿದೆ.

ತಾಲೂಕಿನ ಬಹುತೇಕ ರೈತರು ಕೃಷಿಯನ್ನೇ ನಂಬಿ ಬದುಕುತ್ತಿದ್ದು, ಕೈಗಾರಿಕೆಗಳಿಗೆ ಭೂಮಿ ಕಳೆದುಕೊಂಡ ನಂತರವೂ ಸಾಕಷ್ಟು ರೈತರು, ರಾಗಿ ಬೆಳೆಯಲು ಆದ್ಯತೆ ನೀಡಿದ್ದಾರೆ.

ರೈತರಿಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಮೂಲಕ ನೀಡುತ್ತಿದ್ದ ಸಬ್ಸಿಡಿ ತಡೆಹಿಡಿಯಲಾಗಿದೆ.

ಗೊಬ್ಬರ, ಔಷಧ ಸಿಂಪಡಿಸುವ ಪಂಪ್, ದ್ವಿದಳ ಧಾನ್ಯ, ಟಾರ್ಪಾಲ್, ಚಾರ್ಜಿಂಗ್ ಪಂಪ್, ಎರೆಹುಳು ಗೊಬ್ಬರ, ರೋಗ ತಗುಲದಂತೆ ನೀಡುತ್ತಿದ್ದ ಔಷಧ, ಕೃಷಿ ಹೊಂಡಕ್ಕೆ ನೆರವು, ಸಬ್ಸಿಡಿಯಲ್ಲಿ ಟ್ರ್ಯಾಕ್ಟರ್, ನೇಗಿಲು ಸೇರಿ ಎಲ್ಲ ರೀತಿಯ ಕೃಷಿ ಬಳಕೆಯ ಸಲಕರಣೆ ಹಾಗೂ ಸಹಾಯಧನವನ್ನು ಸಂಪೂರ್ಣವಾಗಿ ಸ್ಥಗಿತ ಮಾಡಿರುವುದು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಮರು ಚಾಲನೆಗೆ ಮನವಿ: ತೋಟಗಾರಿಕೆ ಇಲಾಖೆಯಿಂದ ನೀಡುತ್ತಿದ್ದ ಸ್ಪಿಂಕ್ಲರ್, ಡ್ರಿಪ್ಪಿಂಗ್ ಲೈನ್, ಔಷಧ, ಗ್ರೀನ್ ಹೌಸ್ ಸಬ್ಸಿಡಿ, ಸಸಿ ವಿತರಣೆಯೂ ಸ್ಥಗಿತವಾಗಿದೆ. ಇದರಿಂದಾಗಿ ಬಹುತೇಕ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲು ಹಿಂದು ಮುಂದು ನೋಡುವಂತಾಗಿದೆ. ರಾಜ್ಯ ಸರ್ಕಾರ, ಕೃಷಿ ಇಲಾಖೆಯಿಂದ ರೈತರಿಗೆ ನೀಡುತ್ತಿದ್ದ ಯೋಜನೆಗಳನ್ನು ಮರು ಪ್ರಾರಂಭಿಸಬೇಕು. ಇಲ್ಲವಾದರೆ ರೈತರು ಭೂಮಿ ಮಾರಾಟ ಮಾಡಿ ಕೃಷಿಯಿಂದ ವಿಮುಖವಾಗುವಂತಾಗುತ್ತದೆ ಎಂದು ಸಿಂಗಸಂದ್ರದ ರೈತ ಮಲ್ಲಿಕಾರ್ಜುನ್ ವಿಜಯವಾಣಿಯೊಂದಿಗೆ ಅಳಲು ತೋಡಿಕೊಂಡರು.

ಕೃಷಿಭಾಗ್ಯ ಯೋಜನೆಯಡಿ ನೀಡುತ್ತಿದ್ದ ಯೋಜನೆಗಳನ್ನು ಸ್ಥಗಿತ ಮಾಡಿದ್ದು, ಕೃಷಿ ಇಲಾಖೆಗೆ ಎಷ್ಟೇ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ರಾಜ್ಯ ಸರ್ಕಾರದ ಮೇಲೆ ಬೊಟ್ಟು ಮಾಡಿ ಕೈಚೆಲ್ಲಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದೇವೆ.

| ತಿಮ್ಮರಾಯಪ್ಪ, ಗುಡ್ಡನಹಳ್ಳಿ ರೈತ

ಸರ್ಕಾರಕ್ಕೆ ರೈತರ ಮೇಲೆ ಕಾಳಜಿ ಇಲ್ಲವಾಗಿದೆ. ನಾವು ಒಂದೂವರೆ ಎಕರೆಯಲ್ಲಿ ರಾಗಿ ಬೆಳೆದಿದ್ದೇವೆ. ಒಕ್ಕಣೆಗೆ ಟಾರ್ಪಾಲ್ ಕೇಳಿದರೆ ಕೃಷಿ ಇಲಾಖೆಯಲ್ಲಿ ಲಭ್ಯವಿಲ್ಲ ಎನ್ನುತ್ತಾರೆ. ಇದರಿಂದ ರಾಗಿ ಒಕ್ಕಣೆಗೆ ಸಮಸ್ಯೆಯಾಗಿದೆ.

| ರುದ್ರಮ್ಮ, ರೈತ ಮಹಿಳೆ

ಕೃಷಿ ಭಾಗ್ಯ ಯೋಜನೆಯಲ್ಲಿ ಹೊಂಡ ನಿರ್ಮಿಸಿಕೊಂಡವರಿಗೆ ಟಾರ್ಪಾಲ್ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಈ ಯೋಜನೆಯನ್ನು ಸ್ಥಗಿತ ಮಾಡಲಾಗಿದೆ. ಕೆಲವೇ ರೈತರಿಗೆ ಟಾರ್ಪಾಲ್ ನೀಡಿದ್ದೇವೆ.

| ಧನಂಜಯ್, ಸಹಾಯಕ ಕೃಷಿ ನಿರ್ದೇಶಕ, ಆನೇಕಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net