

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗಿಂತಲೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡೆ-ನುಡಿ ಬಿಜೆಪಿ ಪಾಳೆಯದಲ್ಲಿ ಕುತೂಹಲ ಮೂಡಿಸಿದೆ. ನಿಗೂಢತೆ ಕಾಯ್ದುಕೊಳ್ಳುವಲ್ಲಿ ಬಿಜೆಪಿ ವರಿಷ್ಠರದು ಸದಾ ಎತ್ತಿದ ಕೈ. ಆದರೆ ಈ ವಿಷಯದಲ್ಲಿ ದೆಹಲಿ ನಾಯಕರೊಂದಿಗೆ ಬೊಮ್ಮಾಯಿ ಪೈಪೋಟಿಗೆ ಇಳಿದಂತಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕೇಂದ್ರ ಸಚಿವರ ಭೇಟಿ ನೆಪದಲ್ಲಿ ದೆಹಲಿ ಯಾತ್ರೆ ಕೈಗೊಳ್ಳುವುದು, ಕಾಲಾವಕಾಶ ನೀಡಿದರೆ ವರಿಷ್ಠತ್ರಯರೊಂದಿಗೆ ರ್ಚಚಿಸುವುದು ಇಲ್ಲವೇ ಬರಿಗೈಲಿ ವಾಪಸಾಗುವುದು. ಕಳೆದ ಕೆಲವು ತಿಂಗಳಿಂದ ಈ ಪ್ರಹಸನ ನಡೆದೇ ಇದೆ. ದೆಹಲಿಗೆ ಹೋದಾಗಲೆಲ್ಲ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮುನ್ನೆಲೆಗೆ ಬರುತ್ತದೆ. ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿರುವೆ ಎಂದು ಬೊಮ್ಮಾಯಿ ಹೇಳುವುದು ವಾಡಿಕೆಯಾಗಿದೆ. ಆದರೆ ಶುಕ್ರವಾರದ ದೆಹಲಿ ಭೇಟಿ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹೋದದ್ದೇಕೆ?: ಶುಕ್ರವಾರ ವಿಧಾನಸೌಧದಲ್ಲಿ ಎಸ್ಸಿ, ಎಸ್ಟಿ ಅಭಿವೃದ್ಧಿ ಪರಿಷತ್ ಸಭೆ ನಡೆಸುತ್ತಿರುವಾಗ ದೆಹಲಿಯಿಂದ ಕರೆ ಬಂತು. ಹೀಗಾಗಿ ಅವರು ದೆಹಲಿಗೆ ತೆರಳಿದರು ಎಂದು ಸಿಎಂ ಕಚೇರಿ ಮೂಲಗಳು ತಿಳಿಸಿವೆ. ರಾತ್ರಿ ಬಹು ಹೊತ್ತು ಕಾದು ಪ್ರಯತ್ನಿಸಿದ್ದು, ಅಮಿತ್ ಷಾ ದೆಹಲಿಯಲ್ಲಿದ್ದರೂ ಭೇಟಿಗೆ ಕಾಲಾವಕಾಶ ಸಿಕ್ಕಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಪೂರ್ವ ನಿಗದಿತ ಜೈಪುರ ಪ್ರವಾಸದಲ್ಲಿದ್ದರು ಎನ್ನಲಾಗಿದೆ.
ಅಮಿತ್ ಷಾ ಅವರೊಂದಿಗೆ ಮೊಬೈಲ್ನಲ್ಲಿ ಮಾತನಾಡಿದೆ. ಅವರ ಸೂಚನೆ ಪ್ರಕಾರ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ರನ್ನು ಭೇಟಿ ಮಾಡಿ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಸಂಬಂಧ ರ್ಚಚಿಸಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಸಚಿವ ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆ ಬಗ್ಗೆ ರ್ಚಚಿಸಿಲ್ಲವೆಂಬುದು ಅವರ ಹೇಳಿಕೆ. ಹಾಗಿದ್ದರೆ ಅವರನ್ನು ಆಹ್ವಾನಿಸಿದವರು ಯಾರು ? ದೆಹಲಿಗೆ ಹೋದದ್ದೇಕೆ ? ಎಂಬ ಪ್ರಶ್ನೆಗಳು ಸಂಶಯಕ್ಕೆ ಪುಷ್ಟಿ ನೀಡಿವೆ. ಪಕ್ಷದ ದೆಹಲಿ ನಾಯಕರು ಮತ್ತು ಬೊಮ್ಮಾಯಿ ಮಧ್ಯೆ ‘ಸಂವಹನ ಕೊರತೆ’ ಉಂಟಾಗಿದೆ. ಜತೆಗೆ ಎಲ್ಲವೂ ಸರಿಯಿಲ್ಲವೆಂಬ ಸಂದೇಶ ರವಾನಿಸಿದಂತಾಗಿದೆ ಎಂದು ಪಕ್ಷದ ಮೂಲಗಳು ಅಸಹನೆ ವ್ಯಕ್ತಪಡಿಸಿವೆ.
ಇಂದು ದಾವೋಸ್ಗೆ ಪ್ರಯಾಣ: ಏತನ್ಮಧ್ಯೆ ಬೊಮ್ಮಾಯಿ ಭಾನುವಾರ ಬೆಳಗ್ಗೆ ಆರ್ಥಿಕ ಶೃಂಗದಲ್ಲಿ ಪಾಲ್ಗೊಳ್ಳಲು ಸಿಟ್ಜರ್ಲ್ಯಾಂಡ್ನ ದಾವೋಸ್ಗೆ ಪ್ರಯಾಣ ಬೆಳೆಸಲಿದ್ದಾರೆ. ದಾವೋಸ್ ಶೃಂಗಕ್ಕೆ ಆಹ್ವಾನ ಪಡೆದ ಕರ್ನಾಟಕ ಮತ್ತು ತೆಲಂಗಾಣ ಮುಖ್ಯಮಂತ್ರಿಗಳಿಗೆ ರಾಜತಾಂತ್ರಿಕ ಅನುಮತಿ ತಕ್ಷಣವೇ ದೊರೆತಿತ್ತು. ಸಿಎಂ ಬೊಮ್ಮಾಯಿ, ಅವರ ಪತ್ನಿ ಹಾಗೂ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಮತ್ತು ಅವರ ಪತ್ನಿಗೆ ವಿಮಾನದ ಟಿಕೆಟ್ ಕೂಡ ಕಾದಿರಿಸಲಾಯಿತು. ಭಾನುವಾರ ಬೆಳಗ್ಗೆ 10.35ಕ್ಕೆ ಪ್ರಯಾಣ ಬೆಳೆಸಲಿದ್ದು, ಮೇ 26ರ ಬೆಳಗ್ಗೆ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.
ಇನ್ವೆಸ್ಟ್ ಕರ್ನಾಟಕಕ್ಕೆ ಉಪಯುಕ್ತ: ಈ ಸಮಾವೇಶದಲ್ಲಿ ಪ್ರತ್ಯೇಕವಾಗಿ ಕರ್ನಾಟಕದ ಪೆವಿಲಿಯನ್ ತೆರೆಯಲಾಗಿದೆ. ವಿಶ್ವದ ದಿಗ್ಗಜ ಕಂಪನಿಗಳು ಸೇರಿ ಬಹುರಾಷ್ಟ್ರೀಯ ಉದ್ಯಮಪತಿಗಳು ಹಾಗೂ ತಜ್ಞರೊಂದಿಗೆ ಚರ್ಚೆ, ವಿಚಾರ-ವಿನಿಯಮವಾಗಲಿದೆ. ನವೆಂಬರ್ನಲ್ಲಿ ಇನ್ವೆಸ್ಟ್ ಕರ್ನಾಟಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ದಾವೋಸ್ ಶೃಂಗ ಉಪಯುಕ್ತವಾಗಲಿದೆ. ಬಂಡವಾಳ ಹೂಡಿಕೆ, ಉದ್ಯಮಗಳನ್ನು ನೆಲೆಗೊಳಿಸುವ ಅವಕಾಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಆಹ್ವಾನಿಸಲಾಗುವುದು ಎಂದರು. ಐಟಿ-ಬಿಟಿ ಸಚಿವ ಡಾ.ಅಶ್ವತ್ಥ ನಾರಾಯಣ ಈಗಾಗಲೇ ದಾವೋಸ್ಗೆ ಪ್ರಯಾಣ ಬೆಳೆಸಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಿಎಂ ಬೊಮ್ಮಾಯಿ ಜತೆ ತೆರಳಲಿದ್ದಾರೆ.
ರಾಜ್ಯದ ಸಾಧನೆ, ಸಾಮರ್ಥ್ಯ ಅನಾವರಣ: ದಾವೋಸ್ನಲ್ಲಿ ಮೇ 22 ರಿಂದ 26 ರವರೆಗೆ ವಿಶ್ವ ಆರ್ಥಿಕ ವೇದಿಕೆಯು ಶೃಂಗ ಸಭೆ ಆಯೋಜಿಸಿದ್ದು, ರಾಜ್ಯದ ಸಾಧನೆ, ಸಾಮರ್ಥ್ಯ ಹಾಗೂ ವಿಪುಲ ಅವಕಾಶಗಳ ಲಭ್ಯತೆ ಅನಾವರಣಗೊಳ್ಳಲಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ ದಾವೋಸ್ ಪ್ರವಾಸ ವಿವರಿಸಿದರು. ದಾವೋಸ್ ಶೃಂಗ ಸಭೆಯ ಮುಖ್ಯ ಅಧಿವೇಶನದಲ್ಲಿ ಎರಡು ಅವಧಿಗೆ ಮಾತನಾಡುವ ಅವಕಾಶ ದೊರೆತಿದೆ. ಪರಿಸರ ಮತ್ತು ಆರ್ಥಿಕ ವಿಷಯಗಳ ಮೇಲೆ ವಿಚಾರ ಮಂಡಿಸುವೆ ಎಂದರು.