ಪಾಕಿಸ್ತಾನಕ್ಕೆ ಹೊರಟಿದ್ದ ಕ್ವಾಜಾ!

State 2
Published on

ಬೆಂಗಳೂರು: ಕರ್ನಾಟಕ, ದೆಹಲಿ, ಗುಜರಾತ್ ಹಾಗೂ ತಮಿಳುನಾಡಿನಲ್ಲಿ ಬಂಧಿತರಾದ ಆಲ್ ಉಮ್ಮಾ ಹಾಗೂ ಐಸಿಸ್​ನ ಶಂಕಿತ ಉಗ್ರರಿಂದ ದಿನಕ್ಕೊಂದು ಸ್ಪೋಟಕ ಮಾಹಿತಿ ಬಹಿರಂಗವಾಗುತ್ತಿದೆ. ಶಂಕಿತ ಉಗ್ರ ಮೊಯಿದ್ದೀನ್ ಕ್ವಾಜಾ ಪಾಕಿಸ್ತಾನಕ್ಕೆ ತೆರಳಿ ಅಲ್ಲಿಂದ ಭಾರತದಲ್ಲಿ ದಕ್ಷಿಣ ಭಾರತದಲ್ಲಿ ‘ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆಂಡ್ ಸಿರಿಯಾ’(ಐಸಿಸ್) ಬಲಪಡಿಸಲು ಪ್ಲಾ್ಯನ್ ಮಾಡಿದ್ದ. ಪಾಕ್​ನಿಂದ ನೀಡುವ ಸೂಚನೆಗಳನ್ನು ಕಾರ್ಯಗತ ಮಾಡಲು ಮತ್ತೊಬ್ಬ ಶಂಕಿತ ಉಗ್ರ ಮೆಹಬೂಬ್ ಪಾಷಾನನ್ನು ಕಮಾಂಡರ್ ಆಗಿ ನೇಮಕ ಮಾಡಿದ್ದ ಎಂಬುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಹಿಂದು ಮುಖಂಡರ ಹತ್ಯೆ ಉದ್ದೇಶಕ್ಕೆ ತಮಿಳುನಾಡಿನಲ್ಲಿ ಸ್ಥಾಪನೆಗೊಂಡಿದ್ದ ಅಲ್ ಉಮ್ಮಾ ಸಂಘಟನೆ ಜತೆ ಮೊಯಿದ್ದೀನ್ ಕ್ವಾಜಾ ಗುರುತಿಸಿಕೊಂಡಿದ್ದ. ದೇಶದಲ್ಲಿ ಅಲ್ ಉಮ್ಮಾ ನಿಷೇಧದ ಬಳಿಕವೂ ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದ. ವಿದೇಶಿ ಉಗ್ರರ ಜತೆ ಸಂಪರ್ಕ ಹೊಂದಿದ್ದ. ದಕ್ಷಿಣ ಭಾರತದಲ್ಲಿ ಐಸಿಸ್ ಬಲಪಡಿಸಲು ತಮಿಳುನಾಡು, ಕರ್ನಾಟಕ ಮತ್ತು ಕೇರಳದಲ್ಲಿ ಸುತ್ತಾಡಿ ನೇಮಕಾತಿ ಶುರು ಮಾಡಿ ಆಯಾ ರಾಜ್ಯಕ್ಕೆ ಕಮಾಂಡರ್​ಗಳನ್ನು ನೇಮಿಸಿದ್ದ.

2019ರ ಡಿಸೆಂಬರ್​ನಲ್ಲಿ ತಮಿಳುನಾಡಿನ ‘ಹಿಂದು ಮಕ್ಕಳ ಕಚ್ಚಿ’ ಸಂಘಟನೆ ಕೆ.ಸಿ. ಸುರೇಶ್ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಬಿಡುಗಡೆಯಾಗಿದ್ದ. ಈ ಕೊಲೆ ಪ್ರಕರಣದಲ್ಲಿ ಸೈದ್ಧಾಂತಿಕ ಹಿನ್ನೆಲೆ ಇರುವ ಶಂಕೆ ಮೇಲೆ ಕೇಂದ್ರ ತನಿಖಾ ಸಂಸ್ಥೆಗಳು ಮತ್ತು ತಮಿಳುನಾಡಿನ ಕ್ಯೂ ತಂಡ ಕ್ವಾಜಾ ಮೇಲೆ ನಿಗಾವಹಿಸಿತ್ತು. ಕ್ವಾಜಾ ಇನ್ನೂ ಹೆಚ್ಚು ದಿನ ದೇಶದಲ್ಲಿದ್ದರೆ ಐಸಿಸ್ ಸಂಘಟನೆ ಬಲಪಡಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ ಪಾಕಿಸ್ತಾನಕ್ಕೆ ಹೋಗಿ ಅಲ್ಲಿಂದ ದೇಶದ ಒಳಗಿನ ಸಹಚರರಿಗೆ ತರಬೇತಿ, ಸ್ಪೋಟಕ ಮತ್ತು ಧನ ಸಹಾಯ ಮಾಡಬೇಕೆಂದು ಪ್ಲಾ್ಯನ್ ಮಾಡಿದ್ದ.

ಇದಕ್ಕೂ ಮುನ್ನ ಸುರೇಶ್ ಹತ್ಯೆ ಮಾಡಿದ್ದ ಸಹಚರರು ಬೆಂಗಳೂರಿನಲ್ಲಿ ಮೆಹಬೂಬ್ ಪಾಷಾ ಅಶ್ರಯ ಪಡೆದಿದ್ದರು. ಇವರನ್ನು ಭೇಟಿ ಮಾಡಿ ಹೋಗಬೇಕೆಂದು ಬೆಂಗಳೂರಿಗೆ ಬಂದಿದ್ದ. ಮೆಹಬೂಬ್ ಪಾಷಾ ಮತ್ತು ಇನ್ನಿತ್ತರ ಸಹಚರರ ಜತೆ ಗುರಪ್ಪನಪಾಳ್ಯದಲ್ಲಿ ಸಭೆ ನಡೆಸಿದ್ದ. 10ಕ್ಕೂ ಅಧಿಕ ವಿವಿಧ ಕಂಪನಿಯ ಮೊಬೈಲ್ ಸಿಮ್ ಪಡೆದು ಪೊಲೀಸರಿಗೆ ಸುಳಿವು ಸಿಗದಂತೆ ಸಂಭಾಷಣೆ ನಡೆಸುತ್ತಿದ್ದ.

ಬೆಂಗಳೂರಿನಿಂದ ಇನ್ನೋವಾ ಕಾರಿನಲ್ಲಿ ಕ್ವಾಜಾ ಸಹಚರರಾದ ಇಮ್ರಾನ್ ಮತ್ತು ಹನೀಫ್ ಜತೆ ರಸ್ತೆ ಮಾರ್ಗವಾಗಿ ಆಂಧ್ರಪ್ರದೇಶ, ಒಡಿಶಾ ಮಾರ್ಗವಾಗಿ ಪಶ್ಚಿಮ ಬಂಗಾಳ ತಲುಪಿ ಬುರ್ಧ್ವಾನ್ ರೈಲು ನಿಲ್ದಾಣಕ್ಕೆ ತಲುಪಿದ್ದ. ಅಲ್ಲಿಂದ ನೇಪಾಳಕ್ಕೆ ತೆರಳಿ ಪಾಕಿಸ್ತಾನಕ್ಕೆ ತಲುಪಲು ಮುಂದಾಗಿದ್ದ. ಜೈಲಿನಿಂದಲೇ ಬೆನ್ನತ್ತಿದ್ದ ತಮಿಳುನಾಡು ಮತ್ತು ಕೇಂದ್ರ ತನಿಖಾ ಸಂಸ್ಥೆ ಅಧಿಕಾರಿಗಳು ಬೆಂಗಳೂರಿನಲ್ಲಿ ಮೂವರನ್ನು ಬಂಧಿಸಿದರೆ, ಮಾರನೇ ದಿನ ಡಿ.9ರಂದು ಮೊಯಿದ್ದೀನ್ ಕ್ವಾಜಾ, ಇಮ್ರಾನ್ ಮತ್ತು ಹನೀಫ್​ನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಸ್ವಲ್ಪ ಯಾಮಾರಿದ್ದರೇ ಕ್ವಾಜಾ ಪಾಕಿಸ್ತಾನ ತಲುಪಿ ಉಗ್ರ ಸಂಘಟನೆ ಜತೆ ಕೈ ಜೋಡಿಸಿ ದೇಶದಲ್ಲಿನ ತನ್ನ ಸಹಚರರಿಗೆ ಹಣ ಮತ್ತು ಸ್ಪೋಟಕ ವಸ್ತುಗಳ ಪೂರೈಕೆ ಮಾಡುತ್ತಾ ವಿಧ್ವಂಸಕ ಕೃತ್ಯ ನಡೆಸುತ್ತಿದ್ದ ಎಂದು ಕೇಂದ್ರ ತನಿಖಾ ಸಂಸ್ಥೆಗಳ ಮೂಲಗಳು ತಿಳಿಸಿವೆ.

ಉಗ್ರ ಸಂಘಟನೆ ಅಂತಿಮ ಹಂತಕ್ಕೆ

ತಮಿಳುನಾಡಿನ ಮೊಯಿದ್ದೀನ್ ಕ್ವಾಜಾ, ಕೋಲಾರದ ಸಲೀಂ ಮೂಲಕ ಮೆಹಬೂಬ್ ಪಾಷಾನನ್ನು ಪರಿಚಯ ಮಾಡಿಕೊಂಡು ಆತನಿಗೆ ತನ್ನ ಮನೆಯನ್ನೇ ತಾತ್ಕಾಲಿಕ ಕಾರ್ಯಸ್ಥಾನ ಮಾಡಿಕೊಂಡಿದ್ದ. ಮೆಹಬೂಬ್ ಪಾಷಾನ ಮುಂದಾಳತ್ವದಲ್ಲಿ ಅಲ್ ಹಿಂದ್ ಎಂಬ ಟ್ರಸ್ಟ್ ಆರಂಭಿಸಿದ್ದ. ಧಾರ್ವಿುಕ ಬೋಧನೆ ಮತ್ತು ಸಾಮಾಜಿಕ ಕಾರ್ಯಗಳನ್ನು ಆಯೋಜಿಸಿ ಐಸಿಸ್ ಸಂಘಟನೆಗೆ ಹೊಸ ಸದಸ್ಯರ ನೇಮಕಾತಿಗೆ ಸೂಚಿಸಿದ್ದ. ಮುಂಬೈಯಿಂದ ಬೆಂಗಳೂರಿಗೆ ಸ್ಪೋಟಕ ಮತ್ತು ಶಸ್ತ್ರಾಸ್ತ್ರ ಸಾಗಾಟಕ್ಕೆ ಶಂಕಿತ ಮನ್ಸೂರ್ ಖಾನ್​ಗೆ ಡ್ರೖೆವಿಂಗ್ ಕೆಲಸ ಕೊಡಿಸಿದ್ದ. ಚನ್ನಪಟ್ಟಣದಲ್ಲಿ ಅನೀಸ್, ರಾಮನಗರದಲ್ಲಿ ಅಜರ್ ಪಾಷ, ಜಬೀವುಲ್ಲಾ ಮತ್ತು ಮುಸಾವೀರ್ ಹುಸೈನ್​ನನ್ನು ಸಂಘಟನೆಗೆ ನೇಮಿಸಿಕೊಂಡಿದ್ದ. ಕ್ವಾಜಾ ಸೂಚನೆ ಮೇರೆಗೆ ಪಾಷ, ಚಾಮರಾಜನಗರದ ಗುಂಡ್ಲಪೇಟೆಯಲ್ಲಿ ಉಗ್ರ ತರಬೇತಿ ಶಿಬಿರ ಆರಂಭಿಸಲು 50 ಎಕರೆ ಜಮೀನು ಖರೀದಿಗೂ ಮುಂದಾಗಿದ್ದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net