

ಹಾವೇರಿ: ಕಲಬುರಗಿಯಲ್ಲಿ ಇನ್ನೋರ್ವರಿಗೆ ಕರೊನಾ ವೈರಸ್ ತಗುಲಿರುವ ಬೆನ್ನಲ್ಲೇ ಹಾವೇರಿಯಲ್ಲಿ ಇಬ್ಬರಲ್ಲಿ ಶಂಕಿತ ಕರೊನಾ ವೈರಸ್ ಕಾಣಿಸಿಕೊಂಡಿದೆ.
60 ವರ್ಷದ ವೃದ್ಧ ಹಾಗೂ ಮೊಮ್ಮಗನಲ್ಲಿ ಕರೊನಾ ಲಕ್ಷಣಗಳು ಕಂಡುಬಂದಿದ್ದು, ಇಬ್ಬರ ರಕ್ತ ಮತ್ತು ಗಂಟಲಿನ ದ್ರವ ಮಾದರಿಯನ್ನು ಶಿವಮೊಗ್ಗದ ಲ್ಯಾಬೋರೇಟರಿಗೆ ಕಳಿಸಲಾಗಿದೆ. ಈ ಬಗ್ಗೆ ಡಿಎಚ್ಒ ಡಾ. ರಾಜೇಂದ್ರ ದೊಡ್ಡಮನಿ ಮಾಹಿತಿ ನೀಡಿದ್ದಾರೆ.
ಇವರಿಬ್ಬರೂ ಹಾನಗಲ್ ಪಟ್ಟಣದ ನಿವಾಸಿಗಳಾಗಿದ್ದಾರೆ. ಒಟ್ಟು ಮೂವರು ಹಜ್ ಯಾತ್ರೆಗೆ ಹೋಗಿದ್ದರು. ವಿಮಾನದಲ್ಲಿ ಮುಂಬೈಗೆ ಬಂದು, ಅಲ್ಲಿಂದ ಹುಬ್ಬಳ್ಳಿಗೆ ಆಗಮಿಸಿದ್ದರು. ನಂತರ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ನಿನ್ನೆ ಹಾನಗಲ್ಗೆ ಆಗಮಿಸಿದ್ದ ಅಜ್ಜ-ಮೊಮ್ಮಗನಲ್ಲಿ ನೆಗಡಿ, ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಇವರಿಬ್ಬರ ವೈದ್ಯಕೀಯ ವರದಿ ನಾಳೆ ಬರಲಿದೆ.