

ತಿ.ನರಸೀಪುರ : ಪಟ್ಟಣದಲ್ಲಿ ಭಾನುವಾರ ಸುರಿದ ಮಳೆಯಿಂದ ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ಜನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಪಟ್ಟಣದ ಸುಶೀಲಮ್ಮ ಕಾಲನಿ, ತುರಕನಕಟ್ಟೆ ಮಸೀದಿ ಸುತ್ತಲೂ ಮನೆಗಳಿಗೆ ಮಳೆ ನೀರು ನುಗ್ಗಿ ಮನೆಯಲ್ಲಿರುವ ಪದಾರ್ಥಗಳೆಲ್ಲವೂ ನೀರು ಪಾಲಾಗಿವೆ. ಪಟ್ಟಣದ ಪುರಸಭೆ ವ್ಯಾಪ್ತಿಗೆ ಒಳಪಡುವ ತುರುಕನಕಟ್ಟೆಯ, ಸುಶೀಲಮ್ಮ ಕಾಲನಿ ಹಾಗೂ ಮಾಧವರಾವ್ ಬೀದಿ ಅಕ್ಕಪಕ್ಕದ ಬಡಾವಣೆಗಳು ಸಂಪೂರ್ಣ ಜಲಾವೃತಗೊಂಡು ಇಲ್ಲಿನ ನಿವಾಸಿಗಳು ಸ್ಥಳೀಯ ಆಡಳಿತ ಹಾಗೂ ತಾಲೂಕು ಆಡಳಿತದ ಬಗ್ಗೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಇಡೀ ಬಡಾವಣೆ ನೀರಲ್ಲ ನಮ್ಮ ಕಾಲನಿಗೆ ಬಂದು ತುಂಬಿದೆ. ಇಡೀ ರಾತ್ರಿ ಇಲ್ಲಿ ನಾವು ವಾಸ ಮಾಡುವುದು ಹೇಗೆ ಮತ್ತು ಮನೆಯಲ್ಲಿ ಇದ್ದ ದಿನಸಿ ಪದಾರ್ಥಗಳೆಲ್ಲ ನೀರು ಪಾಲಾಗಿದ್ದು, ನಮ್ಮ ಗೋಳು ಕೇಳುವರಿಲ್ಲ ಎಂದು ಇಲ್ಲಿನ ನಿವಾಸಿಗಳ ಅಸಮಧಾನ ಹೊರ ಹಾಕಿದರು.
ಕೆರೆ ಮುಚ್ಚಿ ಮೈದಾನ ಮಾಡಿದ್ದರು: ಮಳೆ ಬಂದರೆ ಈ ಬಡಾವಣೆಯಲ್ಲಿ ವಾಸ ಮಾಡುವ ನಿವಾಸಿಗಳ ಮನೆಗಳಿಗೆ ನೀರು ತುಂಬುತ್ತದೆ. ರಸ್ತೆಯ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಎರಡು ಕಡೆ ಚರಂಡಿ ನಿರ್ಮಾಣ ಮಾಡದೆ ಮಳೆ ಬಂದರೆ ಮಳೆಯ ನೀರೆಲ್ಲವೂ ಸಂಪೂರ್ಣವಾಗಿ ಮನೆಗಳಿಗೆ ನುಗುತ್ತದೆ. ಇನ್ನು ಸ್ಥಳೀಯ ಪುರಸಭೆ ಗಮನಕ್ಕೆ ತಂದು ಚರಂಡಿ ನಿರ್ಮಾಣ ಮಾಡಿ ಎಂದು ಮನವಿ ಮಾಡಿದರೂ ಇಲ್ಲಿಯವರೆಗೆ ಚರಂಡಿ ನಿರ್ಮಾಣ ಮಾಡಿಲ್ಲ. ನೀವು ತಗ್ಗು ಪ್ರದೇಶದಲ್ಲಿ ಮನೆ ಕಟ್ಟಿದ್ದೀರ ನಾವು ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಉಡಾಫೆ ಉತ್ತರ ನೀಡುತ್ತಾರೆ ಎನ್ನುತ್ತಾರೆ ನಿವಾಸಿಗಳು.
ಚುನಾವಣೆ ಬಂದಾಗ ಮತ ಕೇಳಲು ಬರುವ ಅಭ್ಯರ್ಥಿಗಳು ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಹೇಳುತ್ತಾರೆ. ಆದರೆ ಚುನಾವಣೆ ಮುಗಿದು ಇಲ್ಲಿಯವರೆಗೂ ಯಾರು ಕೂಡ ನಮ್ಮ ಅಳಲು ಕೇಳಿಲ್ಲ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಕ್ಷೇತ್ರವೇ ಆಗಿದ್ದರೂ ಇಲ್ಲಿನ ನಿವಾಸಿಗಳ ಸಮಸ್ಯೆ ಇಲ್ಲಿವರೆಗೂ ಬಗೆಹರಿಸಿಲ್ಲ. ಹಲವು ಬಾರಿ ಈ ಬಗ್ಗೆ ನಿವಾಸಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ನಿವಾಸಿಗಳು.