

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣವು ದಿನದಿಂದ ದಿನಕ್ಕೆ ಹೊಸ ರೂಪ ಪಡೆಯುತ್ತಿದೆ. ಸುಶಾಂತ್ ಆತ್ಮಹತ್ಯೆ ಬೆನ್ನಲ್ಲೆ ಬಾಲಿವುಡ್ನ ಕೆಲವು ಸ್ಟಾರ್ ಕಲಾವಿದರು ಮತ್ತು ನಿರ್ವಪಕರ ವಿರುದ್ಧ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಎಂಟು ಜನರ ಮೇಲೆ ಕೇಸ್ ದಾಖಲಾಗಿದೆ.
ಸುಧೀರ್ ಕುಮಾರ್ ಓಜಾ ಎಂಬ ವಕೀಲರು ಐಪಿಸಿ ಸೆಕ್ಷನ್ 306, 109, 504 ಮತ್ತು 506 ಅಡಿಯಲ್ಲಿ ಬಿಹಾರದ ಮುಜಾಫರ್ಪುರ್ ಕೋರ್ಟ್ನಲ್ಲಿ ಕೇಸ್ ಹಾಕಿದ್ದಾರೆ. ಅದರಲ್ಲಿ ಸಲ್ಮಾನ್ ಖಾನ್, ಕರಣ್ ಜೋಹರ್, ಸಂಜಯ್ ಲೀಲಾ ಬನ್ಸಾಲಿ, ಏಕ್ತಾ ಕಪೂರ್ ಸೇರಿ ಇನ್ನೂ ಹಲವರ ಹೆಸರುಗಳಿವೆ. ಇವರೆಲ್ಲರ ಕಡೆಯಿಂದ ಸುಶಾಂತ್ಗೆ ಮಾನಸಿಕವಾಗಿ ಚಿತ್ರಹಿಂಸೆ ಉಂಟಾಗಿದ್ದು, ಅದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.
ಡಿಪ್ರೆಶನ್ ವಿಚಾರ ಗೊತ್ತಿರಲಿಲ್ಲ: ಈಗಾಗಲೇ ಪೊಲೀಸರು, ಸುಶಾಂತ್ ಸ್ನೇಹಿತರು ಮತ್ತು ಕುಟುಂಬವರ್ಗದವರ ವಿಚಾರಣೆ ನಡೆಸಿದ್ದು, ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಈ ಸಂಬಂಧ ಅವರ ತಂದೆಯನ್ನೂ ವಿಚಾರಣೆಗೆ ಒಳಪಡಿಸಲಾಗಿದ್ದು, ತಮ್ಮ ಮಗನಿಗೆ ಡಿಪ್ರೆಷನ್ ಇದ್ದ ವಿಚಾರ ತಮಗೆ ಗೊತ್ತಿರಲಿಲ್ಲ ಎಂದು ಸುಶಾಂತ್ ತಂದೆ ಕೆ.ಕೆ. ಸಿಂಗ್ ಅವರು ಹೇಳಿಕೆ ಕೊಟ್ಟಿದ್ದಾರೆ.
ಇನ್ನು ಸುಶಾಂತ್ ಅವರ ಲ್ಯಾಪ್ಟಾಪ್ ಮತ್ತು ಮೊಬೈಲ್ ವಶಕ್ಕೆ ಪಡೆದು, ಫಾರೆನ್ಸಿಕ್ ಲ್ಯಾಬ್ಗೆ ಕಳುಹಿಸಿದ್ದಾರೆ. ಸುಶಾಂತ್ ಅವರ ಮ್ಯಾನೇಜರ್ ಆಗಿದ್ದ ಸಿದ್ಧಾರ್ಥ್ ಪಠಾಣಿ ಅವರನ್ನು ವಿಚಾರಣೆ ಮಾಡಿ, ಅವರಿಂದ ಹಲವು ಮಾಹಿತಿಗಳನ್ನು ಪೊಲೀಸರು ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಸಲ್ಮಾನ್ ಖಾನ್ ಪ್ರತಿಕೃತಿಗೆ ಬೆಂಕಿ: ಈ ಮಧ್ಯೆ, ಸುಶಾಂತ್ ಸಿಂಗ್ ಹುಟ್ಟೂರು ಪಾಟ್ನಾದಲ್ಲಿ ಅವರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಬಾಲಿವುಡ್ನಲ್ಲಾಗುತ್ತಿರುವ ಸ್ವಜನ ಪಕ್ಷಪಾತ ವಿರುದ್ಧ ಧಿಕ್ಕಾರ ಮೊಳಗಿಸಿದ್ದಾರೆ. ಬಾಲಿವುಡ್ನ ಕೆಲವು ನಿರ್ಮಾಣ ಸಂಸ್ಥೆಗಳು ಸುಶಾಂತ್ ಅವರನ್ನು ಬ್ಯಾನ್ ಮಾಡಿದ್ದು, ಇದರಿಂದ ಬೇಸರಗೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಟ ಕಮಾಲ್ ಖಾನ್ ಮಂಗಳವಾರವಷ್ಟೇ ಟ್ವೀಟ್ ಮಾಡಿದ್ದರು. ಇದನ್ನೇ ಗುರಿಯಾಗಿಟ್ಟುಕೊಂಡ ಸುಶಾಂತ್ ಅಭಿಮಾನಿಗಳು, ಸಲ್ಮಾನ್ ಖಾನ್ ಮತ್ತು ಕರಣ್ ಜೋಹರ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ, ಪ್ರತಿಭಟನೆ ಮಾಡಿದ್ದಾರೆ.
04