

ಮುಂಬೈ: ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ನಟ ಸುಶಾಂತ್ ರಜಪೂತ್ ಅವರ ಅಂತ್ಯಕ್ರಿಯೆ ನಾಳೆ (ಸೋಮವಾರ) ಮುಂಬೈನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ಸುಶಾಂತ್ ತಂದೆ ಪಟನಾ(ಬಿಹಾರ್) ದಿಂದ ನಾಳೆ ಮುಂಬೈಗೆ ಆಗಮಿಸಲಿದ್ದಾರೆ.
ಸುಶಾಂತ್ ಅವರು ಮೂಲತಃ ಬಿಹಾರದ ಪಟನಾದವರು. ಅಲ್ಲಿನ ಪೂರ್ಣಿಯಾ ಎಂಬ ಹಳ್ಳಿಯಲ್ಲಿ 1986ರಲ್ಲಿ ಹುಟ್ಟಿದ್ದಾರೆ. 16ನೇ ವಯಸ್ಸಿನಲ್ಲಿದ್ದಾಗ ತಮ್ಮ ಪ್ರೀತಿಯ ತಾಯಿಯನ್ನು ಕಳೆದುಕೊಂಡಿದ್ದಾರೆ. ಅಂದಿನಿಂದ ಅವರ ಬದುಕೇ ಬದಲಾಗಿತ್ತು.
ಸುಶಾಂತ್ ತಾಯಿಯ ನಿಧನದ ನಂತರ ತಮ್ಮ ಕುಟುಂಬದೊಂದಿಗೆ ಪಟನಾದಿಂದ ದೆಹಲಿಗೆ ಬಂದು ನೆಲೆಸಿದ್ದರು. ಅಲ್ಲಿಯೇ ಮೂರು ವರ್ಷ ಇಂಜಿನಿಯರಿಂಗ್ ಓದಿದ್ದಾರೆ. ನಂತರ ಓದು ನಿಲ್ಲಿಸಿ, ಮೂಟೆಗಳಷ್ಟು ಕನಸುಹೊತ್ತು ಮುಂಬೈಗೆ ಬಂದಿದ್ದರು. ಒಂದು ಬ್ಯಾಗ್ ಹೊತ್ತು ಮುಂಬೈಗೆ ಕಾಲಿಟ್ಟಿದ್ದ ಅವರು, ಟಿವಿ ಶೋ ಮೂಲಕವೇ ಮೊದಲು ಪ್ರಸಿದ್ಧರಾದರು. ಅದಾದ ಬಳಿಕ ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡಿದವರು.
ಎಂ.ಎಸ್.ಧೋನಿ-ದಿ ಅನ್ಟೋಲ್ಡ್ ಸ್ಟೋರಿಯಿಂದ ಶುರುವಾಗಿ ಚಿಚೋರೆವರೆಗಿನ ಅವರ ಸಿನಿ ಪ್ರಯಾಣ ಯಶಸ್ವಿಯಾಗಿ ಸಾಗಿತ್ತು. 2019ರಲ್ಲಿ ಬಿಡುಗಡೆಯಾಗಿದ್ದ ಚಿಚೋರೆ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಇದನ್ನೂ ಓದಿ: ಮಾಜಿ ಪ್ರೇಯಸಿಯ ನಿಶ್ಚಿತಾರ್ಥ ಸುಶಾಂತ್ ನೋವಿಗೆ ಕಾರಣ? ಇವರ ಸಾವಿನ ಸುದ್ದಿ ಕೇಳಿ ಫೋನ್ ಕೆಳಗಿಟ್ಟ ಅಂಕಿತಾ
ಇನ್ನೂ 34 ವರ್ಷದ ಯುವ ನಟ. ಜೀವನದಲ್ಲೂ ಹಂತಹಂತವಾಗಿ ಮೇಲೇರುತ್ತಿದ್ದ ಸುಶಾಂತ್ ಆತ್ಮಹತ್ಯೆ ಈ ಕ್ಷಣಕ್ಕೆ ಕೂಡ ಕಗ್ಗಂಟಾಗೇ ಉಳಿದಿದೆ. ಇಡೀ ಬಾಲಿವುಡ್ ಶಾಕ್ನಲ್ಲಿದೆ. ಅಭಿಮಾನಿಗಳೂ ತೀವ್ರ ದುಃಖಿತರಾಗಿದ್ದಾರೆ. (ಏಜೆನ್ಸೀಸ್)