

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವುದಾಗಿ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದಾರೆ.
ಪಟನಾ ಪೊಲೀಸ್ನ ಐಜಿ ಸಂಜಯ್ ಸಿಂಗ್ ಈ ವಿಷಯ ತಿಳಿಸಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು ಸೇರಿ ಭಾರತೀಯ ದಂಡಸಂಹಿತೆಯ ವಿವಿಧ ವಿಧಿಗಳ ಪ್ರಕಾರ ರಿಯಾ ಚಕ್ರವರ್ತಿ ವಿರುದ್ಧ ಎಫ್ಐಆರ್ ದಾಖಲಿಸಿರುವುದಾಗಿ ಹೇಳಿದ್ದಾರೆ.
ಈ ಪ್ರಕರಣದ ತನಿಖೆ ಈಗಾಗಲೆ ಆರಂಭವಾಗಿದೆ. ಮುಂಬೈ ಪೊಲೀಸ್ ಬಳಿ ಇರುವ ಕೇಸ್ ಡೈರಿ ಮತ್ತಿತರ ಮುಖ್ಯವಾದ ದಾಖಲೆಗಳನ್ನು ಸಂಗ್ರಹಿಸುವ ಸಲುವಾಗಿ ಪಟನಾ ಪೊಲೀಸ್ನ 4 ಸದಸ್ಯರ ತಂಡವನ್ನು ಮುಂಬೈಗೆ ರವಾನಿಸಿರುವುದಾಗಿ ತಿಳಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂರ್ ಜೂ.14ರಂದು ಮುಂಬೈನ ತಮ್ಮ ಫ್ಲ್ಯಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಕಳೆದ ತಿಂಗಳು ರಿಯಾ ಚಕ್ರವರ್ತಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಅಲ್ಲದೆ, ಅವರ ಸಹೋದರ ಶೋವಿಕ್ ಚಕ್ರವರ್ತಿಯನ್ನು ವಿಚಾರಣೆಗೆ ಒಳಪಡಿಸಿದ್ದರು.
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಾಗಿನಿಂದಲೂ ರಿಯಾ ಚಕ್ರವರ್ತಿ ಸಿಕ್ಕಾಪಟ್ಟೆ ಟ್ರೋಲಿಂಗ್ಗೆ ಒಳಗಾಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಒಬ್ಬ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆ ಸಂದೇಶವನ್ನೂ ಕಳಿಸಿದ್ದ. ಇದಕ್ಕೆ ರಿಯಾ ಚಕ್ರವರ್ತಿ ವಿಪರೀತ ಖಾರವಾದ ಪ್ರತಿಕ್ರಿಯೆ ನೀಡಿ, ಸುಶಾಂತ್ ಅವರನ್ನು ಬಳಸಿಕೊಂಡೆ ಎಂದರು, ಸಹಿಸಿಕೊಂಡೆ, ನನ್ನನ್ನು ಕೊಲೆಗಾರ್ತಿ ಎಂದರು... ಅದನ್ನೂ ಒಪ್ಪಿಕೊಂಡೆ... ನನ್ನನ್ನು ವೇಶ್ಯೆ ಎಂದರು... ಅದಕ್ಕೂ ಸುಮ್ಮನಾದೆ... ಆದರೆ ಈಗ ನನ್ನನ್ನು ರೇಪ್ ಮಾಡಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದೀರಿ... ಅಂದರೆ ನನ್ನ ಮೌನವನ್ನು ದೌರ್ಬಲ್ಯ ಎಂದು ಭಾವಿಸಿದ್ದೀರಾ @mannu_raaut? ಎಂದು ಪ್ರಶ್ನಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸೈಬರ್ ಕ್ರೈಂ ಪೊಲೀಸರು, ಮನ್ನೂ ರಾತ್ ವಿರುದ್ಧ ಕ್ರಮ ಕೈಗೊಂಡಿದ್ದರು.