

ನವದೆಹಲಿ: ಇಳಿವಯಸ್ಸು, ಮದುವೆಯಾಗಬೇಕಾದ ವಯಸ್ಸಿನಲ್ಲಿ ವಧು ಸಿಗಲಿಲ್ಲ. ಆದರೆ, ಆತನ ಆಸೆ ಕರಗಲೇ ಇಲ್ಲ. ಕೊನೆಗೆ ಮದುವೆಯಾಗಿದ್ದೇ ಆತನಿಗೆ ಮರಣ ಶಾಸನವಾಗಿ ಪರಿಣಮಿಸಿತು.
ಉತ್ತರಪ್ರದೇಶದ ಘಾಜಿಯಾಬಾದ್ನ ಮುರಾದ್ನಗರದ ಹೆದ್ದಾರಿಯಲ್ಲಿ ಅಶೋಕ್ ಶರ್ಮಾ ಟೀ ಅಂಗಡಿ ಇಟ್ಟುಕೊಂಡಿದ್ದ. ತೀರಾ ಬಡವನೇನೂ ಅಲ್ಲ, ಎರಡೆರಡು ಕಡೆಗಳಲ್ಲಿ ಆತನಿಗೆ ಆಸ್ತಿಯಿತ್ತು. ವಯಸ್ಸು 50 ಆದರೂ ಮದುವೆ ಆಗಿರಲಿಲ್ಲ.
ಅದೊಂದು ದಿನ ವಾಹನ ಚಾಲಕ ಕಪಿಲ್ ಎಂಬಾತ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಟೀ ಕುಡಿಯಲೆಂದು ಬಂದಿದ್ದ. ಆತನ ಜತೆಗಿನ ಮಾತುಕತೆಯಲ್ಲಿ ಅಶೋಕ್ ಶರ್ಮಾ ಮದುವೆ ಮಾತುಕತೆ ಆಡಿದ್ದ. ಹೆಣ್ಣು ಸಿಗುತ್ತಿಲ್ಲ, ಎಲ್ಲಿಂದ ಮದುವೆಯಾಗಲಿ ಎಂದು ಪರಿತಪಿಸಿದ್ದ.
ಇದಾದ ಒಂದು ವಾರದ ಬಳಿಕ ಅಶೋಕ್ ಬಳಿಗೆ ತೆರಳಿದ ಕಪಿಲ್ ಮದುವೆಗೆ ಹೆಣ್ಣು ಇರುವುದಾಗಿ ತಿಳಿಸಿ ಶಾಲು (36) ಎಂಬಾಕೆಯ ಬಗ್ಗೆ ತಿಳಿಸಿದ್ದ. ಅಶೋಕ್ ಕೂಡ ಈ ಪ್ರಸ್ತಾವನೆ ಒಪ್ಪಿ ಶಾಲುಳನ್ನು ಮದುವೆಯಾಗಿದ್ದ.
ಅಸಲಿ ವಿಷಯವೆಂದರೆ, ಶಾಲು ಈ ಮೊದಲೇ ಕಪಿಲ್ಗೆ ಪರಿಚಯವಿದ್ದಳು. ಆಕೆ ಗಂಡ ರಸ್ತೆ ಅಪಘಾತದಲ್ಲಿ ತೀರಿಕೊಂಡಿದ್ದ. ಕೆಲಸಕ್ಕಾಗಿ ಕಪಿಲ್ಗೆ ದುಂಬಾಲು ಬಿದ್ದಿದ್ದಳು. ಇದೇ ಅವರಿಬ್ಬರ ನಡುವೆ ಪರಿಚಯಕ್ಕೆ ಕಾರಣವಾಗಿತ್ತು.
ಶಾಲುಳನ್ನು ಮದುವೆ ಮಾಡಿಸಿದರೆ, ಅಶೋಕ್ನ ಆಸೆಯೂ ತಿರುತ್ತೆ, ನಮ್ಮ ಉದ್ದೇಶವನ್ನು ಈಡೇರಿಸಿಕೊಳ್ಳಬಹುದು ಎಂಬ ಉದ್ದೇಶ ಕಪಿಲ್ದ್ದಾಗಿತ್ತು. ಇದಕ್ಕೆ ಶಾಲು ಕೂಡ ಒಪ್ಪಿದ್ದಳು.
ಮದುವೆಯಾದ ಎರಡು ವರ್ಷಗಳವರೆಗೆ ಅಶೋಕ್ ಕೊಲೆಗೆ ಈ ಜೋಡಿ ಯತ್ನಿಸುತ್ತಲೇ ಇತ್ತು. ಒಮ್ಮೆ ಕಾರಿನ ಬ್ರೇಕ್ ಫೇಲ್ ಮಾಡಿ ಆತನನ್ನು ಕೊಲೆಗೈಯಲು ಯತ್ನಿಸಿತ್ತು. ಇದಾದ ಬಳಿಕ ಇಲಿ ಪಾಷಾಣ ನೀಡಿದ್ದರು. ಆಧರೆ, ಇದೆಲ್ಲದರಿಂದ ಅಶೋಕ್ ಪಾರಾಗಿ ಬದುಕುಳಿದಿದ್ದ.
ಅದೊಂದು ದಿನ ಅಶೋಕ್ ಮೃತಪಟ್ಟಿದ್ದಾಗಿ ಶಾಲು ಹೇಳಿದ್ದಳು. ಸ್ನಾನ ಮಾಡುತ್ತಿದ್ದವನು ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾಗಿ ಪೊಲೀಸರಿಗೆ ಹೇಳೀಕೆ ನೀಡಿದ್ದಳು. ಆದರೆ, ಬಾತ್ರೂಮ್ನಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬುದು ಪೊಲೀಸರ ತನಿಖೆಯಿಂದ ಬಯಲಾಯಿತು. ಅಂಗವಿಕಲನಾಗಿದ್ದರೂ ಆಸ್ತಿಗಾಗಿ ಅಶೋಕ್ನನ್ನು ಮದುವೆಯಾಗಿದ್ದೆ. ಆತನನ್ನು ಕೊಲೆ ಮಾಡಿ ಇಬ್ಬರೂ ಒಂದಾಗಿರಲು ಕಪಿಲ್ ಸಂಚು ರೂಪಿಸಿದ್ದ ಎಂದು ಶಾಲು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಮುರಾದ್ನಗರ ಪೊಲೀಸರು ತಿಳಿಸಿದ್ದಾರೆ.