

ಬೈಲಕುಪ್ಪೆ : ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ಪಾಲಕರು ಶಿಕ್ಷಕರೊಂದಿಗೆ ಸಹಕರಿಸಿದಾಗ ಮಾತ್ರ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದು ರೋಟರಿ ಮಿಡ್‌ಟೌನ್ ತಾಲೂಕು ಅಧ್ಯಕ್ಷ ರಾಜೇಗೌಡ ಅಭಿಪ್ರಾಯಪಟ್ಟರು.
ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿ ದೊಡ್ಡಹೊನ್ನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲೂಕು ರೋಟರಿ ಮಿಡ್ ಟೌನ್ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಸರಸ್ವತಿ ಪೂಜೆ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಾದ್ಯಂತ 110 ಕ್ಕೂ ಹೆಚ್ಚು ಶಾಲಾ- ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ತಾಲೂಕು ರೋಟರಿ ಮಿಡ್ ಟೌನ್ ವತಿಯಿಂದ ಚೇರ್, ಟೇಬಲ್, ಆಟೋಟ ಸಾಮಾನುಗಳು, ಮಕ್ಕಳಿಗೆ ಸಮವಸ್ತ್ರ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
ಹಿರಿಯ ವಕೀಲ ಬಿ.ವಿ.ಜವರೇಗೌಡ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಅಂತರ್ಗತವಾಗಿರುತ್ತದೆ. ವಿದ್ಯಾರ್ಥಿಗಳು ಕೀಳರಿಮೆ ಬಿಟ್ಟು ಗುರಿ ಹೊಂದುವ ಮೂಲಕ ಸಾಧನೆಗೆ ಮುಂದಾಗಬೇಕು. ಇಂದಿನ ಯುವಕರಲ್ಲಿ ಹೆಚ್ಚಿನ ಮೊಬೈಲ್ ಬಳಕೆಯಿಂದಾಗಿ ಮಾನಸಿಕ ಅಸ್ವಸ್ಥತೆ, ಖಿನ್ನತೆ ಸಮಸ್ಯೆಗಳು ಹೆಚ್ಚಾಗಿವೆ. ಇದರಿಂದ ಹೊರಬರಲು ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಸರಸ್ವತಿ ಪೂಜೆ ಅಂಗವಾಗಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲಕರ ಮನಸೂರೆಗೊಂಡವು. ಸಂಸ್ಥೆಯ ಹಿರಿಯ ಸದಸ್ಯ ಸತ್ಯನಾರಾಯಣ ಹೆಗ್ಡೆ, ಬಸವೇಗೌಡ, ಹರೀಶ, ಸುನೀಲ್, ಜಗನ್, ಗ್ರಾಮದ ಮುಖಂಡರಾದ ದೀರ್ಘಶ್ರೀ ಶಿವಣ್ಣ, ಎಸ್‌ಟಿಎಂಸಿ ಅಧ್ಯಕ್ಷ ರವಿ, ಸಿಆರ್‌ಪಿಗಳಾದ ಮಂಜುನಾಯಕ, ಶಿವಕುಮಾರ್, ಮುಖ್ಯ ಶಿಕ್ಷಕಿ ದಿವ್ಯಾ, ಶಿಕ್ಷಕರಾದ ವಿದ್ಯಾ, ಸುಧಾ, ಶಾಲಾ ಮಕ್ಕಳು ಪಾಲಕರು ಹಾಜರಿದ್ದರು.