

ಶಿವಮೊಗ್ಗ: ಶರಾವತಿ ಸಂತ್ರಸ್ಥರ ನೆಮ್ಮದಿ ಬದುಕಿಗೆ ಸರ್ಕಾರ ಬದ್ಧವಾಗಿದ್ದು, ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರಾವತಿ ಸಂತ್ರಸ್ಥರ ನೆರವಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಹೆಜ್ಜೆ ಇರಿಸಿವೆ. ಹಲವು ದಶಕಗಳಿಂದ ಇತ್ಯರ್ಥವಾಗದೆ ಉಳಿದಿದ್ದ ಶರಾವತಿ ಸಂತ್ರಸ್ಥರಿಗೆ ಭೂಮಿ ಹಕ್ಕು ನೀಡುವ ವಿಚಾರಕ್ಕೆ ಸಂಬಂಧಿಸಿ ಸಮೀಕ್ಷೆ ನಡೆಸುವಂತೆ ಆದೇಶ ಹೊರಬಿದ್ದಿದೆ ಎಂದರು.
ನ್ಯಾಯಾಲಯದ ಸೂಚನೆಯಂತೆ ಜಿಲ್ಲಾಡಳಿತ ಸರ್ವೇ ಕಾರ್ಯಕ್ಕೆ ಸದ್ಯದಲ್ಲಿ ಚಾಲನೆ ನೀಡಲಿದೆ. ಸಮೀಕ್ಷೆ ಬರುವ ಸಿಬ್ಬಂದಿಗೆ ಜನರು ಎಲ್ಲ ಸಹಕಾರ ನೀಡಬೇಕು. ಸಂತ್ರಸ್ಥ ಕುಟುಂಬಗಳ ಅಹವಾಲುಗಳಿದ್ದಲ್ಲಿ ಅವುಗಳನ್ನು ಶಾಂತವಾಗಿ ಆಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ತಿಳಿಸಿದರು.
ಭೂಮಿ ಹಕ್ಕು ನೀಡುವ ವಿಚಾರಕ್ಕೆ ಇದೀಗ ತಾರ್ಕಿಕ ಅಂತ್ಯ ಸಿಗುವ ನಿರೀಕ್ಷೆ ಇದೆ. ರಾಜ್ಯಮಟ್ಟದ ಹಿರಿಯ ಅಧಿಕಾರಿಗಳು, ತಜ್ಞರೊಂದಿಗೆ ಮಾತುಕತೆ ನಡೆಸಲಾಗಿದೆ. ಐದು ಸಾವಿರ ಕುಟುಂಬಗಳ ಸಮೀಕ್ಷೆಗೆ ಸುಪ್ರೀಂಕೋರ್ಟ್ ಮುಂದಾಗಿತ್ತು. ಆದರೆ ಜನರ ಒಕ್ಕೊರಲಿನ ಅಭಿಪ್ರಾಯವನ್ನು ವಕೀಲರು ವ್ಯವಸ್ಥಿತವಾಗಿ ಮಂಡಿಸಿದ ಪರಿಣಾಮ 9 ಸಾವಿರ ಹೆಕ್ಟೇರ್ ಪ್ರದೇಶದ ಸಮೀಕ್ಷೆಗೆ ಆದೇಶ ಹೊರಬಿದ್ದಿದೆ. ಸಮೀಕ್ಷೆಗೆ ಅತ್ಯಾಧುನಿಕ ಪರಿಕರಗಳು, ಅಗತ್ಯ ಸಿಬ್ಬಂದಿ ಬಳಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ವಿಭಾಗೀಯ ಶಾಖೆಯನ್ನು ಆರಂಭಿಸಲು ಸೂಚಿಸಲಾಗಿದೆ. ಸಂತ್ರಸ್ಥರು ವಾಗ್ವಾದಗಳಿಗೆ ಇಳಿಯದೆ ಸಹಕರಿಸಬೇಕು ಎಂದರು.