

ವಿಶಾಖಪಟ್ಟಣ: ಭಾರತೀಯ ಜಲಪ್ರದೇಶ ಹಾಗೂ ಜಲಮಾರ್ಗಗಳ ರಕ್ಷಣೆಯಲ್ಲಿ ಭಾರತೀಯ ನೌಕಾಪಡೆಯ ಬಲವನ್ನು ಹೆಚ್ಚಿಸಲು ನೆರವಾಗುವ ‘ಐಎನ್ಎಸ್ ಸಂಧಾಯಕ್’ ಎಂಬ ಸಮೀಕ್ಷಾ ಹಡಗನ್ನು ಶನಿವಾರ ವಿಶಾಖಪಟ್ಟಣದ ನೇವಲ್ ಡಾಕ್ಯಾರ್ಡ್ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಾರ್ಪಣೆ ಮಾಡಿದರು. ನೇವಿ ಮುಖ್ಯಸ್ಥ ಅಡ್ಮಿರಲ್ ಆರ್. ಹರಿಕುಮಾರ್ ಇನ್ನಿತರರು ಈ ಸಂದರ್ಭದಲ್ಲಿ ಇದ್ದರು.
2021ರಲ್ಲಿ ಸೇವೆಯಿಂದ ಹಿಂದೆ ಪಡೆಯಲಾದ ಅತಿ ಹಳೆಯ ಜಲ ಸೀಮೆ (ಹೈಡ್ರೋಗ್ರಾಫಿಕ್) ಸಮೀಕ್ಷಾ ನೌಕೆಯ ಹೊಸ ಅವತಾರವಾಗಿದೆ. ಇದು ನಾಲ್ಕು ಸರ್ವೆ ವೆಸಲ್ ಲಾರ್ಜ್ (ಎಸ್ವಿಎಲ್) ಹಡಗುಗಳ ಪೈಕಿ ಪ್ರಥಮ ನೌಕೆಯಾಗಿದೆ. ಸಾಗರಗಳ ಮಾಹಿತಿ ಕಲೆ ಹಾಕಲು ಹಾಗೂ ಭಾರತ ಮಾತ್ರವಲ್ಲದೆ ಇತರ ದೇಶಗಳ ರಕ್ಷಣೆಯ ಅವಳಿ ಉದ್ದೇಶ ಸಾಧನೆಗೆ ಎಸ್ವಿಎಲ್ ನೌಕೆ ದೊಡ್ಡ ರೀತಿಯಲ್ಲಿ ನೆರವಾಗಲಿದೆ ಎಂದು ನೌಕೆಗೆ ಚಾಲನೆ ನೀಡಿದ ಸಚಿವ ರಾಜನಾಥ ಸಿಂಗ್ ಹೇಳಿದರು. ಕಡಲ್ಗಳ್ಳತನ ಹಾಗೂ ಕಳ್ಳಸಾಗಣೆಯಲ್ಲಿ ತೊಡಗಿರುವವರನ್ನು ಸಹಿಸಿಕೊಳ್ಳುವುದಿಲ್ಲ ಎಂದವರು ಎಚ್ಚರಿಸಿದರು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಚೀನಿ ಬೇಹುಗಾರಿಕೆ ನೌಕೆಗಳ ಚಟುವಟಿಕೆಗಳಿಗೆ ಸೆಡ್ಡು ಹೊಡೆಯಲೂ ಇದು ನೆರವಾಗುವ ನಿರೀಕ್ಷೆಯಿದೆ.
ಬಂದರುಗಳು, ನೌಕಾಯಾನದ ಕಾಲುವೆಗಳು, ಮಾರ್ಗಗಳು, ಕರಾವಳಿ ಪ್ರದೇಶಗಳು ಮತ್ತು ಆಳ ಸಮುದ್ರದಲ್ಲಿ ಪೂರ್ಣ ಪ್ರಮಾಣದ ಹೈಡ್ರೋಗ್ರಾಫಿಕ್ ಸಮೀಕ್ಷೆ ನಡೆಸುವುದು ಐಎನ್ಎಸ್ ಸಂಧಾಯಕ್ನ ಪ್ರಮುಖ ಕಾರ್ಯಭಾರವಾಗಿದೆ. ಜಲ ಮಾರ್ಗಗಳಲ್ಲಿ ಸುರಕ್ಷಿತ ಸಂಚಾರವನ್ನು ಖಾತರಿಪಡಿಸುವುದು ಇದರ ಉದ್ದೇಶವಾಗಿದೆ. ಏಡನ್ ಕೊಲ್ಲಿ, ಗಿನಿಯಾ ಕೊಲ್ಲಿ ಮುಂತಾದ ನೌಕಾ ಸಂಚಾರ ದಟ್ಟಣೆಯ ಕೇಂದ್ರಗಳು ಹಿಂದು ಮಹಾಸಾಗರ ದಲ್ಲಿದ್ದು ಅವುಗಳ ಮೂಲಕ ದೊಡ್ಡ ಪ್ರಮಾಣದ ಅಂತಾ ರಾಷ್ಟ್ರೀಯ ವಾಣಿಜ್ಯ ಚಟುವಟಿಕೆ ನಡೆಯುತ್ತದೆ. ಈ ಪಾಯಿಂಟ್ಗಳಲ್ಲಿ ಅನೇಕ ರೀತಿಯ ಅಪಾಯಗಳಿದ್ದು ಕಡಲ್ಗಳ್ಳರಿಂದ ಉಂಟಾಗುವ ತೊಂದರೆ ಪ್ರಮುಖ ಸವಾಲಾಗಿದೆ. ಹೊಸ ನೌಕೆಯ ಸೇರ್ಪಡೆಯಿಂದ ಈ ಕಾರ್ಯಾಚರಣೆಗೆ ಹೊಸ ಶಕ್ತಿ ಬಂದಿದೆ.