ಸ್ಥಿರಾಸ್ತಿ ನೋಂದಣಿಗೆ ಸರ್ವೆ ಸಂಖ್ಯೆ ಕಿರಿಕಿರಿ; ಬಿಡಿಎ, ಗ್ರಾಮಠಾಣಾ ಸೈಟಿಗೆ ಸಮಸ್ಯೆ..

Front 2
Published on

ಬೆಂಗಳೂರು: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಲ್ ಹೊರತುಪಡಿಸಿ ಸ್ಥಿರಾಸ್ತಿಗಳ ನೋಂದಣಿ ವೇಳೆ ಕಡ್ಡಾಯವಾಗಿ ಸರ್ವೆ ನಂಬರ್ ನಮೂದು ಮಾಡುವಂತೆ ಕಂದಾಯ ಇಲಾಖೆ ಕಟ್ಟಾಜ್ಞೆ ಹೊರಡಿಸಿರುವುದು ಹೊಸ ಸಮಸ್ಯೆ ತಂದೊಡ್ಡಿದೆ. ಸೈಟು, ಪ್ಲಾಟ್​ಗಳ ಮೂಲ ಪತ್ರದಲ್ಲೇ (ಮದರ್ ಡೀಡ್) ಸರ್ವೆ ನಂಬರ್ ಇಲ್ಲದಿರುವುದು ಗೊಂದಲಗಳಿಗೆ ಎಡೆ ಮಾಡಿಕೊಟ್ಟಿದೆ. ಭೂಗಳ್ಳರಿಂದ ಗೋಮಾಳ ಮತ್ತು ಸರ್ಕಾರಿ ಜಮೀನು ರಕ್ಷಣೆ ಮಾಡುವ ಸಲುವಾಗಿ ಕಂದಾಯ ಇಲಾಖೆ ಹೊರಡಿಸಿರುವ ಆದೇಶ ಭೂ ಮಾಲೀಕರಿಗೆ ಬಿಸಿತುಪ್ಪವಾಗಿದೆ. ಬಿಡಿಎ ಸೈಟು, ಮನೆ, ಪ್ಲಾಟ್​ಗಳು, ಗ್ರಾಮ ಠಾಣಾ, ಮೂಲ ಸಿಟಿ ಮತ್ತು ಅಭಿವೃದ್ಧಿ ಶುಲ್ಕ ಪಡೆದಿರುವ ಆಸ್ತಿಗಳಿಗೆ ಸರ್ವೆ ನಂಬರ್ ಸಿಗದೆ ನೋಂದಣಿ ವೇಳೆ ತೊಂದರೆ ಉಂಟಾಗಿದೆ. ಮದರ್ ಡೀಡ್​ನಲ್ಲೇ ಸರ್ವೆ ನಂಬರ್ ಇಲ್ಲದಿದ್ದಲ್ಲಿ ಎಲ್ಲಿಂದ ತರಬೇಕೆಂಬ ಇಕ್ಕಟ್ಟಿಗೆ ಆಸ್ತಿ ಮಾಲೀಕರು ಸಿಲುಕಿದ್ದಾರೆ.

ಕಾರಣ ಏನು?: ಗೋಮಾಳ, ಸರ್ಕಾರಿ ಜಮೀನಿನಲ್ಲಿ ಅತಿಕ್ರಮವಾಗಿ ಬಡಾವಣೆ ನಿರ್ವಿುಸಿ ಕಂದಾಯ ನಿವೇಶನ ಮಾಡಿ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ಮತ್ತು ಜನರಿಗೆ ವಂಚಿಸಿರುವ ಪ್ರಕರಣ ಹೈಕೋರ್ಟ್ ಗಮನಕ್ಕೆ ಬಂದಿದೆ. ಇಂಥ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಹೈಕೋರ್ಟ್ ನಿರ್ದೇಶನದಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸರ್ವೆ ನಂಬರ್ ಕಡ್ಡಾಯದ ಆದೇಶ ಹೊರಡಿಸಿದ್ದಾರೆ. ಇದರ ಉದ್ದೇಶ ಒಳ್ಳೆಯದೇ ಆಗಿದ್ದರೂ, ಸರ್ವೆ ನಂಬರ್ ಇಲ್ಲದ ಭೂ ಮಾಲೀಕರಿಗೆ ಸಮಸ್ಯೆ ಉಂಟಾಗಿದೆ.

ಆದೇಶದಲ್ಲೇನಿದೆ?: ನೋಂದಣಿ ಕಾಯ್ದೆ 1908ರ ಕಲಂ 22 ಉಪ-ಕಲಂ(1)ರ ರೀತ್ಯ ಅಧಿಕಾರದ ಮೇರೆಗೆ ಹೊಸ ನಿಯಮ ರಚಿಸುವವರೆಗೆ ಈ ಆದೇಶ ಅನ್ವಯ ಆಗಲಿದೆ. ಸಾರ್ವಜನಿಕರು ನೋಂದಣಿಗೆ ಹಾಜರುಪಡಿಸುವ ಯಾವುದೇ ವಿಲ್ ಹೊರತುಪಡಿಸಿ ಮನೆ, ಸೈಟು, ಜಮೀನು ಒಳಗೊಂಡಂತೆ ಸ್ಥಿರಾಸ್ತಿಗಳ ಮೂಲ ಸರ್ವೆ ನಂಬರ್​ಗಳನ್ನು ಕಡ್ಡಾಯವಾಗಿ ತಪ್ಪದೆ ನಮೂದಿಸಬೇಕು. ಜತೆಗೆ ಸರ್ಕಾರಿ ನಕ್ಷೆ ಅಥವಾ ನಕಾಶೆ ನಕಲು ಪ್ರತಿ ಹಾಜರುಪಡಿಸಬೇಕು. ಇದರಿಂದ ಸರ್ಕಾರಿ ಜಮೀನು, ಗೋಮಾಳ ಭೂಮಿಯನ್ನು ಭೂಗಳ್ಳರು ಅತಿಕ್ರಮ ಮಾಡುವುದನ್ನು ತಪ್ಪಿಸಬಹುದು. ಕಡ್ಡಾಯವಾಗಿ ಉಪ ನೋಂದಣಿ ಅಧಿಕಾರಿಗಳು ಸ್ವತ್ತಿನ ಸರ್ವೆ ನಂಬರ್ ನಮೂದಿಸಿಕೊಳ್ಳಬೇಕು. ಇಲ್ಲವಾದರೆ, ಆದೇಶ ಉಲ್ಲಂಘಿಸುವ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಹೈಕೋರ್ಟ್ ಗಮನಕ್ಕೆ ತಂದಿಲ್ಲ: ಕೆಲವೊಂದು ಸ್ಥಿರಾಸ್ತಿಗಳಿಗೆ ಸರ್ವೆ ನಂಬರ್ ಇಲ್ಲ. ಇದ್ದರೂ ಮದರ್ ಡೀಡ್​ನಲ್ಲೇ ನಮೂದು ಮಾಡಿಲ್ಲ. ಸಾಮಾನ್ಯವಾಗಿ ಬಿಡಿಎ ಅಭಿವೃದ್ಧಿಪಡಿಸಿರುವ ಬಡಾವಣೆಗಳ ಸೈಟು ಮತ್ತು ಅಪಾರ್ಟ್​ವೆುಂಟ್​ಗಳ ಫ್ಲ್ಯಾಟ್​ಗಳ ಮಾರಾಟದ ವೇಳೆ ಸೈಟ್ ಅಥವಾ ಪ್ಲಾಟ್ ನಂಬರ್ ಆಧಾರದ ಮೇಲೆ ನೋಂದಣಿ ಮಾಡಿ ಗ್ರಾಹಕರಿಗೆ ಕೊಟ್ಟಿದ್ದಾರೆ. ಸರ್ವೆ ನಂಬರ್ ನಮೂದು ಮಾಡಿಲ್ಲ. ಇದಲ್ಲದೆ, ಮೂಲ ನಗರಗಳ ಸ್ಥಿರಾಸ್ತಿಗೆ ಸರ್ವೆ ನಂಬರ್ ಸಿಗುವುದಿಲ್ಲ. ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿರುವ ಸೈಟು ಮತ್ತು ಮನೆಗಳಿಗೆ ಸರ್ವೆ ನಂಬರ್ ಇಲ್ಲ. 2001ರಲ್ಲಿ ಅಭಿವೃದ್ಧಿ ಶುಲ್ಕ ಪಡೆದು ಅಕ್ರಮ ಸೈಟುಗಳನ್ನು ಸಕ್ರಮ ಮಾಡಲಾಗಿದೆ. ಇಲ್ಲಿಯೂ ಸಹ ಸರ್ವೆ ನಂಬರ್ ಸಿಗುತ್ತಿಲ್ಲ. ಒಟ್ಟಾರೆ ನಗರ ಪ್ರದೇಶದ ಮನೆ, ಸೈಟು, ಫ್ಲಾ್ಯಟ್​ಗಳಿಗೆ ಶೇ.60 ಸ್ಥಿರಾಸ್ತಿಗೆ ಸರ್ವೆ ನಂಬರ್ ಇಲ್ಲವೆಂದು ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳ ವಾದವಾಗಿದೆ. ಈ ಎಲ್ಲ ಅಂಶಗಳನ್ನು ಹೈಕೋರ್ಟ್ ಗಮನಕ್ಕೆ ತರದೆ ಏಕಾಏಕಿ ಕಂದಾಯ ಇಲಾಖೆ ಅಧಿಕಾರಿಗಳು ಸುತ್ತೋಲೆ ಹೊರಡಿಸಿದ್ದಾರೆ.

ನಂಬರ್ ಹುಡುಕಿ ತನ್ನಿ: ಹೈಕೋರ್ಟ್ ಆದೇಶದಂತೆ ಸುತ್ತೋಲೆ ಹೊರಡಿಸಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿಲ್ ಹೊರತುಪಡಿಸಿ ಎಲ್ಲ ಸ್ಥಿರಾಸ್ತಿಗಳ ನೋಂದಣಿ ಸಮಯದಲ್ಲಿ ಸಾರ್ವಜನಿಕರು ಸರ್ವೆ ನಂಬರ್ ಕಡ್ಡಾಯವಾಗಿ ಹಾಜರುಪಡಿಸಬೇಕು. ಇಲ್ಲವಾದರೆ, ನೋಂದಣಿ ಪ್ರಕ್ರಿಯೆ ನಡೆಯುವುದಿಲ್ಲ. ಸರ್ವೆ ನಂಬರ್ ಇಲ್ಲದಿದ್ದರೇ ಬಿಲ್ಡರ್ ಬಳಿ ಅಥವಾ ಇತರ ಮೂಲದಿಂದ ಹುಡುಕಿ ತರಬೇಕೆಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಜಾರಿಗೆ ಬಾರದ ಒಟಿಪಿ ರದ್ದು ಆದೇಶ

ಕಂದಾಯ ಇಲಾಖೆ ಆದೇಶಕ್ಕಿಲ್ಲ ಕಿಮ್ಮತ್ತು |  2 ವಾರ ಕಳೆದರೂ ಜಾರಿಗೆ ಬಾರದ ಒಟಿಪಿ ಸೇವೆ ರದ್ದು ಆದೇಶ

ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಣಿ ವೇಳೆ ನಮೂದು ಮಾಡುತ್ತಿದ್ದ ಒನ್ ಟೈಮ್ ಪಾಸ್​ವರ್ಡ್ (ಒಟಿಪಿ) ಸೇವೆಯನ್ನು ಕಂದಾಯ ಇಲಾಖೆ ರದ್ದು ಮಾಡಿ 2 ವಾರ ಕಳೆದರೂ ಈ ಆದೇಶಕ್ಕೆ ಜಾರಿಗೆ ಬಂದಿಲ್ಲ. ಪರಿಣಾಮ ಸರ್ವರ್ ಸಮಸ್ಯೆ ಉಂಟಾಗಿ ಜನರು ಪರದಾಡುತ್ತಿದ್ದಾರೆ.

ರಾಜ್ಯದ 250 ಉಪ ನೋಂದಣಿ ಕಚೇರಿಗಳಲ್ಲಿ ಆಸ್ತಿ ಕ್ರಯ, ಮಾರಾಟ, ವರ್ಗಾವಣೆ, ಅಡಮಾನ ಪತ್ರ, ಮದುವೆ ನೋಂದಣಿ ಸೇರಿ ಸಾವಿರಾರು ದಾಖಲೆಗಳು ಕಾವೇರಿ ತಂತ್ರಾಂಶದಲ್ಲಿ ನೋಂದಣಿ ನಡೆಯುತ್ತಿವೆ. ಅಕ್ರಮ ತಡೆಗಟ್ಟಲು ನೋಂದಣಿ ವೇಳೆ ಎರಡು ಪಕ್ಷದವರ ಮೊಬೈಲ್ ನಂಬರ್ ನಮೂದಿಸಿ ಅದಕ್ಕೆ ಬರುವ ಒಟಿಪಿ ನಂಬರ್ ಅಪ್​ಲೋಡ್ ಮಾಡಿದ ನೋಂದಣಿ ಪ್ರಕ್ರಿಯೆ ನಡೆಸುತ್ತಿದ್ದರು. ಈ ಸೇವೆ ಜಾರಿಗೆ ಬಂದ ಮೇಲೆ ಸರ್ವರ್ ಸಮಸ್ಯೆ ಉಂಟಾಗಿ 4 ತಿಂಗಳಲ್ಲಿ 21 ದಿನಗಳಲ್ಲಿ ಒಟಿಪಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಜನರು ತೊಂದರೆ ಅನುಭವಿಸಿದ್ದರು.

ಇದನ್ನು ಮನಗೊಂಡ ಕಂದಾಯ ಇಲಾಖೆ ಅ.28ರಂದು ಒಟಿಪಿ ಸೇವೆಯನ್ನು ರದ್ದು ಮಾಡುವಂತೆ ಆದೇಶ ಹೊರಡಿಸಿದ್ದತ್ತು. ಆದರೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಾತ್ರ ಒಟಿಪಿ ಸೇವೆ ತೆಗೆದಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ, ಇಲಾಖೆಯಿಂದ ಅಧಿಕೃತ ಆದೇಶ ಬಂದಿಲ್ಲ. ಜತೆಗೆ ಕಾವೇರಿ ತಂತ್ರಾಂಶದಲ್ಲಿ ಒಟಿಪಿ ಕಾಲಂ ತೆಗೆದಿಲ್ಲ. ನೋಂದಣಿ ವೇಳೆ ಒಟಿಪಿ ಅಪ್​ಲೋಡ್ ಮಾಡದಿದ್ದರೇ ನೋಂದಣಿ ಪೂರ್ಣಗೊಳ್ಳುವುದಿಲ್ಲ ಎಂದು ಉತ್ತರಿಸುತ್ತಿದ್ದಾರೆ.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ವೇಳೆ ಪಡೆಯುವ ಒಟಿಪಿ ಸೇವೆಯನ್ನು ತಿಂಗಳ ಒಳಗಾಗಿ ಕಾವೇರಿ ತಂತ್ರಾಂಶದಿಂದ ಸಂಪೂರ್ಣವಾಗಿ ರದ್ದು ಮಾಡಲಾಗುತ್ತದೆ.

|ಪಿ.ಎನ್. ರವೀಂದ್ರ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net