

ಶಿವಮೊಗ್ಗ: ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಅಂತಿಮ ಹಂತದಲ್ಲಿದ್ದು, ಜಿಲ್ಲೆಯಲ್ಲಿ ಶೇ. 80ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.
ಆರಂಭಿಕವಾಗಿ ಸಮೀಕ್ಷೆಗೆ ಎದುರಾಗಿದ್ದ ಅಡೆತಡೆಗಳನ್ನು ನಿವಾರಿಸಿಕೊಂಡು ಸಮೀಕ್ಷೆ ಪ್ರಕ್ರಿಯೆಯಲ್ಲಿ ಜಿಲ್ಲೆ ಪ್ರಗತಿ ಸಾಧಿಸಿದೆ. ಒಟ್ಟು 4,85,446 ಮನೆಗಳ ಸಮೀಕ್ಷೆ ಮಾಡಬೇಕಿತ್ತು. ಅದರಲ್ಲಿ 4 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೊರಬ ತಾಲೂಕಿನಲ್ಲಿ ಶೇ. 100ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕುಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಅಧಿಕ. ಈ ಕಾರಣದಿಂದ ಈ ತಾಲೂಕುಗಳಲ್ಲಿ ಸಮೀಕ್ಷೆ ಕಾರ್ಯಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಈಗ ಆ ಭಾಗದಲ್ಲಿ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದರು.
ಸಮೀಕ್ಷೆಗೆ ಮಾಹಿತಿ ನೀಡದವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆ ಇದೆ. ಸಮೀಕ್ಷೆಯಿಂದ ಹೊರಗುಳಿಯುವವರ ಬಳಿ ಘೋಷಣಾ ಪತ್ರಕ್ಕೆ ಸಹಿ ಪಡೆಯಲಾಗುತ್ತದೆ. ಅಂತಿಮವಾಗಿ ಪ್ರತಿಯೊಂದು ಸಮೀಕ್ಷೆಯನ್ನೂ ಪರಿಶೀಲಿಸಿಯೇ ಪ್ರಕ್ರಿಯೆ ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದರು.
ಸಮೀಕ್ಷೆದಾರರಿಗೆ ಮಾಹಿತಿ ನೀಡುವಂತೆ ಯಾರನ್ನೂ ಒತ್ತಾಯಿಸಿಲ್ಲ. ಸ್ಥಳೀಯ ಮೂಲಸೌಕರ್ಯದ ಬೇಡಿಕೆ ಕಾರಣದಿಂದ ಕೆಲವರು ಮಾಹಿತಿ ನೀಡದಿರಲು ತೀರ್ಮಾನಿಸಿರುವುದು ಗಮನಕ್ಕೆ ಬಂದಿದೆ. ಆದರೆ ಅವರ ನಿರ್ಧಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಈಗ ಸಹಕರಿಸಿದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿ ಜಿಲ್ಲಾಡಳಿತ ಅವರ ಬೇಡಿಕೆಗಳನ್ನು ಈಡೇರಿಸಲಿದೆ ಎಂದು ಭರವಸೆ ನೀಡಿದರು.
ಶಿಕ್ಷಕರು, ಮೆಸ್ಕಾಂ, ಕಂದಾಯ ಇಲಾಖೆ ನೌಕರರು, ಗ್ರಾಪಂ ಹಂತದಲ್ಲಿ ಪಿಡಿಒ, ಕಾರ್ಯದರ್ಶಿ, ನೀರುಗಂಟಿಗಳ ನೆರವನ್ನೂ ಸಮೀಕ್ಷೆ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಶೇ.100 ಸಮೀಕ್ಷೆ ಗುರಿ ತಲುಪಲಿದ್ದೇವೆ ಎಂದು ಹೇಳಿದರು.
ಜಿಪಂ ಸಿಇಒ ಎನ್.ಹೇಮಂತ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿ ಶೋಭಾ ಸುದ್ದಿಗೋಷ್ಠಿಯಲ್ಲಿದ್ದರು.