ಸುತ್ತೂರು-ಸಿದ್ಧಗಂಗಾ ಮಠಗಳು ರಾಜ್ಯದ ಎರಡು ಕಣ್ಣುಗಳು

23 skpp 1
Published on

ಸಕಲೇಶಪುರ: ಸುತ್ತೂರು ಹಾಗೂ ಸಿದ್ಧಗಂಗಾ ಮಠಗಳು ರಾಜ್ಯದ ಎರಡು ಕಣ್ಣುಗಳಿದ್ದಂತೆ ಎಂದು ಅರಕಲಗೂಡು ದೊಡ್ಡಮಠದ ಶ್ರೀಮಲ್ಲಿಕಾರ್ಜುನ ಸ್ವಾಮೀಜಿ ಬಣ್ಣಿಸಿದರು.


ಶನಿವಾರ ಪಟ್ಟಣದ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ಮಲೆನಾಡು ವೀರಶೈವ ಸಮಾಜ ಹಾಗೂ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 108ನೇ ಜಯಂತಿ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ಸಮಕಾಲಿನ ಸಮಾಜಕ್ಕೆ ಅಗತ್ಯವಿರುವುದನ್ನು ಮನಗಂಡು ಅವುಗಳನ್ನು ಕಾರ್ಯಗತಗೊಳಿಸುವ ಮೂಲಕ ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಮಠದ ಶ್ರೀಶಿವಕುಮಾರ ಸ್ವಾಮೀಜಿ ಮಹಾತ್ಮಾರಾದರು. 19ನೇ ಶತಮಾನದಲ್ಲಿ ರಾಜ್ಯದಲ್ಲಿದ್ದ ಅನಕ್ಷರತೆಯನ್ನು ಗುರುತಿಸಿ ಸಂಕಷ್ಟದ ಮಧ್ಯೆ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ ತ್ರಿವಿಧ ದಾಸೋಹ ಏರ್ಪಡಿಸುವ ಮೂಲಕ ಈ ಇಬ್ಬರು ಶ್ರೀಗಳು ಇಂದಿಗೂ ಜನರ ಮನದಲ್ಲಿ ಜೀವಂತವಾಗಿದ್ದಾರೆ ಎಂದರು.
ಸಮಾಜದಿಂದ ಎಲ್ಲವನ್ನೂ ಪಡೆಯುವ ನಾವು ಸಮಾಜಕ್ಕೆ ಕಿಂಚಿತ್ತೂ ಸಹಾಯ ಮಾಡದೆ ಹೋದರೆ ನಿಮ್ಮ ಜೀವನಕ್ಕೆ ಅರ್ಥ ಬರುವುದಿಲ್ಲ. ಸ್ವಾರ್ಥರಹಿತ ಸೇವೆ ನಮ್ಮನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯಲಿದೆ. ಮಹಾತ್ಮರ ಜಯಂತಿಯ ಆಚರಣೆ ಅವರ ಜೀವನದ ಸಂದೇಶವನ್ನು ಮುಂದಿನ ಜನಾಂಗಕ್ಕೆ ಕೊಂಡೊಯುವುದಾಗಿದೆ. ಆದ್ದರಿಂದ ಕಾಟಾಚಾರಕ್ಕೆ ಜಯಂತಿಯಲ್ಲಿ ಪಾಲ್ಗೊಳ್ಳದೆ ಉತ್ತಮ ಸಂದೇಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳ ಬೇಕು ಎಂದರು.


ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಸಿಮೆಂಟ್ ಮಂಜು ಮಾತನಾಡಿ, ಮಲೆನಾಡಿನಲ್ಲಿ ಶಿಕ್ಷಣ ಕ್ರಾಂತಿ ಉಂಟುಮಾಡಿದ ಕೀರ್ತಿ ಸುತ್ತೂರು ಮಠಕ್ಕೆ ಸಲ್ಲುತ್ತದೆ. ತಾಲೂಕಿನಲ್ಲಿ ಮಠದ ವತಿಯಿಂದ ಮತ್ತಷ್ಟು ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಅಗತ್ಯವಿದೆ. ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಬಡಮಕ್ಕಳಿಗೆ ಅನ್ನ, ವಸತಿ ಹಾಗೂ ಶಿಕ್ಷಣ ನೀಡುತ್ತಿರುವ ಮಠ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.


ಉಪ ವಿಭಾಗಾಧಿಕಾರಿ ಡಾ.ಎಂ.ಕೆ.ಶ್ರುತಿ ಮಾತನಾಡಿ, ಸುತ್ತೂರು ಮಠ ವಿದ್ಯಾರ್ಥಿಗಳಿಗೆ ವಿದ್ಯೆಯೊಂದಿಗೆ ಸಂಸ್ಕಾರ, ಸಂಸ್ಕೃತಿ ಹಾಗೂ ಶಿಸ್ತು ಕಲಿಸುತ್ತಿದೆ. ಇಂತಹ ಶಿಕ್ಷಣ ಇಂದಿನ ಸಮಾಜಕ್ಕೆ ಅಗತ್ಯವಿದೆ ಎಂದರು.


ವೇದಿಕೆ ಕಾರ್ಯಕ್ರಮಕ್ಕೂ ಮೊದಲು ರಕ್ತದಾನ ಶಿಬಿರ ಹಾಗೂ ಶ್ರವಣದೋಷವುಳ್ಳ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ನಂತರ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಗುರುವೇಗೌಡ ಕಲ್ಯಾಣ ಮಂಟಪದವರಗೆ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು.


ಬಲವಂತಪ್ಪ ಅವರ ಜ್ಞಾಪಕಾರ್ಥವಾಗಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್, ಮಲೆನಾಡು ವೀರಶೈವ ಸಮಾಜದ ಅಧ್ಯಕ್ಷ ದಿವಾನ್, ಕಾರ್ಯದರ್ಶಿ ಮೂಗಲಿ ಧರ್ಮರಾಜ್, ಮುಖಂಡರಾದ ಶಿವಪ್ರಸಾದ್, ವಿದ್ಯಾಶಂಕರ್, ಕಾಂಗ್ರೆಸ್ ಮುಖಂಡರಾದ ಮುರಳಿಮೋಹನ್, ಎಚ್.ಎಚ್.ಉದಯ್, ಜೆಎಸ್‌ಎಸ್ ಸಂಸ್ಥೆಯ ಮುಖ್ಯಸ್ಥ ಮಂಜುನಾಥ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net