ಶರಣಾಗುವಂತೆ ಮಾಡಿ ಡ್ಯಾಮೇಜ್‌ ಕಂಟ್ರೋಲ್ ಮಾಡ್ಕೊಳ್ಳಿ; ಜೆಡಿಎಸ್‌ಗೆ ಸಚಿವ ಸಲಹೆ

Prajwal Revanna
Published on

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬಕ್ಕೆ ಡ್ಯಾಮೇಜ್ ಆಗಿದೆ. ಪ್ರಜ್ವಲ್ ಸ್ವಯಂಪ್ರೇರಣೆಯಿಂದ ದೇಶಕ್ಕೆ ವಾಪಸ್ ಬರುವುದು ಒಳ್ಳೆಯದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಪ್ರಜ್ವಲ್ ತಲೆ ಮರೆಸಿಕೊಂಡು ಓಡಾಡಿದರೆ ತಪ್ಪು ಒಪ್ಪಿಕೊಂಡಂತಾಗುತ್ತದೆ. ತಪ್ಪಿಸಿಕೊಂಡು ಓಡಾಡಿದರೆ ಅವರ ಕುಟುಂಬ, ಪಕ್ಷಕ್ಕೆ ಹೆಚ್ಚು ಹಾನಿಯಾಗುತ್ತದೆ ಎಂದು ಅಭಿಪ್ರಾಯಪಟ್ಟ ಅವರು ಜೆಡಿಎಸ್ ಪಕ್ಷಕ್ಕೆ ಡ್ಯಾಮೇಜ್ ಕಡಿಮೆಯಾಗಬೇಕೆಂದರೆ ಕರೆಸಿ ಶರಣಾಗುವಂತೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ಈಗಾಗಲೇ ಈ ಪ್ರಕರಣದಿಂದ ರಾಜಕೀಯವಾಗಿ ಜೆಡಿಎಸ್ ನಾಯಕರಿಗೆ ನಷ್ಟವಾಗಿದೆ. ಜತೆಗೆ ಕೇಂದ್ರ ಸರ್ಕಾರ ಎಲ್ಲಾ ಅಧಿಕಾರ ಪ್ರಯೋಗಿಸಿ ಪ್ರಜ್ವಲ್‌ರನ್ನು ಕರೆತರಬೇಕು. ಕೇಂದ್ರಕ್ಕೆ ವಾಪಸ್ ಕರೆಸುವುದು ಕಷ್ಟದ ಕೆಲಸವೇನಲ್ಲ. ಮನಸ್ಸು ಮಾಡಿದರೆ ಒಂದೇ ದಿನದಲ್ಲಿ ಕರೆ ತರಬಹುದು ಎಂದರು.

ಈ ಬೆಳವಣಿಗೆ ರಾಜಕೀಯ ಪ್ರೇರಿತ ಅಂತೇನಿಲ್ಲ. ಅವರೂ ರಾಜಕೀಯದಲ್ಲಿ ಇದ್ದಾರೆ. ಸಂಸದರಾಗಿರುವುದರಿಂದ ರಾಜಕೀಯ ಬಣ್ಣ ಹಚ್ಚುತ್ತಾರೆ. ಅವರದ್ದೇನು ಸಾಮಾನ್ಯ ಕುಟುಂಬವೇ? ಪ್ರಧಾನಿ, ಸಿಎಂ, ಮಂತ್ರಿ ಆಗಿದ್ದಂತಹ ಕುಟುಂಬ. ಆದರೆ, ಪ್ರಜ್ವಲ್ ವಿಚಾರವಾಗಿ ಜನರ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸಾಕ್ಷಿ ಅಪಹರಣ ಆಗಿರುವುದು ನಿಜ. ವಿಡಿಯೋ ಇರುವುದು, ದೂರು ನೀಡುತ್ತಿರುವುದು ಎಲ್ಲವೂ ನಿಜ ಅಲ್ಲವೇ? ಎಂದು ಪ್ರಶ್ನಿಸಿದ ಅವರು ಐದು ವರ್ಷದ ಹಿಂದೆ ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೆವು. ಆಗ ಪ್ರಜ್ವಲ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈ ರೀತಿಯ ಮಾಹಿತಿ ಹೊರ ಬಂದಿರಲಿಲ್ಲ ಎಂದರು.

ಪ್ರಜ್ವಲ್ ಈಗ ಎನ್‌ಡಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಟಿಕೆಟ್ ಕೊಡುವುದಕ್ಕೂ ಮೊದಲೇ ಪ್ರಜ್ವಲ್ ಬಗ್ಗೆ ಎಲ್ಲವೂ ಗೊತ್ತಿತ್ತು. ಕೇಂದ್ರ ಗೃಹ ಸಚಿವರಿಗೆ ಇಡೀ ದೇಶದ ಎಲ್ಲಾ ಆಗು ಹೋಗುಗಳ ಬಗ್ಗೆ ಗೊತ್ತಿರುತೆ ಆದರೂ ಟಿಕೆಟ್ ನೀಡಿದ್ದಾರೆ. ಹಾಸನ ಬಿಜೆಪಿ ನಾಯಕರೇ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪತ್ರ ಬರೆದಿದ್ದರು. ಬಿಜೆಪಿಯವರು ಚುನಾವಣೆ ಮಾತ್ರ ಮುಖ್ಯವಾಗಿತ್ತು. ಹಾಗಾಗಿ ಮೈತ್ರಿ ಮಾಡಿಕೊಂಡು ಟಿಕೆಟ್ ನೀಡಿದರು ಎಂದು ಟೀಕಿಸಿದರು.

ಜೆಡಿಎಸ್‌ನವರಿಗೆ ಅಧಿಕಾರ ದಾಹ ಇದೆ. ಅದೇ ಕಾರಣಕ್ಕೆ ಬಿಜೆಪಿಗೆ ಶರಣಾದರು. ಬಿಜೆಪಿಯು ಜೆಡಿಎಸ್‌ಅನ್ನ ಮುಗಿಸಲು ಹೊರಟಿದೆ. ಹಾಗಾಗಿ ಬಿಜೆಪಿಯ ಟ್ರಾಪ್‌ಗೆ ಜೆಡಿಎಸ್ ಬಿದ್ದಿದೆ. ಜೆಡಿಎಸ್‌ನವರಿಗೆ ಎಲ್ಲೂ ಹೋಗುವುದಕ್ಕೆ ಬೇರೆ ದಾರಿ ಇಲ್ಲ. ಇದೇ ಕಾರಣಕ್ಕೆ ಮೈತ್ರಿ ಅನಿವಾರ್ಯವಾಗಿತ್ತು. ಇದೀಗ ಪ್ರಜ್ವಲ್ ವಿಚಾರವೂ ಅವರಿಗೆ ಮುಜುಗರವಾಗಿದೆ ಎಂದರು.

ಈಗ ಜೆಡಿಎಸ್ ಮುಕ್ತಾಯದ ಹಂತದಲ್ಲಿದೆ. ಅವರ ಪಕ್ಷದ ಶಾಸಕರು, ನಾಯಕರಿಗೆ ಭವಿಷ್ಯದ ಬಗ್ಗೆ ಆತಂಕ ಬಂದಿದೆ. ಮುಂದೆ ರಾಜಕೀಯ ಭವಿಷ್ಯ ಹೇಗೋ ಏನೋ ಎಂಬ ಆತಂಕ ಇದೆ. ಇದೇ ಕಾರಣಕ್ಕೆ ಬೇರೆ ಪಕ್ಷಗಳತ್ತ ಹೋಗುತ್ತಿದ್ದಾರೆ. ಶಾಸಕರು, ನಾಯಕರು, ಕಾರ್ಯಕರ್ತರು ನಮ್ಮ ಪಕ್ಷದ ಕಡೆ ಬರುತ್ತಿದ್ದಾರೆಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net