

ಭಾರತದಲ್ಲಿ ರೇಪ್ ರೇಟ್ ಹೆಚ್ಚಾಗಿದೆ. ಹಿಜಾಬ್ ಹಾಕಿಕೊಂಡರೇ ಅತ್ಯಾಚಾರ ಕಡಿಮೆ ಆಗುತ್ತೆ ಎಂದು ಹೇಳಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲ ಟ್ವಿಟ್ ಮೂಲಕ ಖಂಡಿಸಿದ್ದಾರೆ.
ಈ ವಿಚಾರವಾಗಿ ಟ್ವಿಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕರೊಬ್ಬರು ಮಹಿಳೆಯರ ಬಗ್ಗೆ ಕೀಳು ಮಟ್ಟದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಧುನಿಕ ಭಾರತದಲ್ಲಿ ಇಂತಹ ವಿಚಾರಗಳಿಗೆ ಅವಕಾಶವಿಲ್ಲ. ಇಂತಹ ಕೀಳು ಮಟ್ಟದ ವಿಚಾರಧಾರೆಗಳು ಕೇವಲ ಬಿಜೆಪಿ ನಾಯಕರಿಗೆ ಮಾತ್ರ ಸೀಮಿತ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಬಿಜೆಪಿ ನಾಯಕರಾದ ಆದಿತ್ಯನಾಥ, ಮನೋಹರ ಲಾಲ್ ಖಟ್ಟರ್ ಇಂಥಹ ಹೇಳಿಕೆ ನೀಡಿ, ಮಹಿಳೆಯರ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದರು. ಭಾರತೀಯ ಮಹಿಳೆ ಅನಾದಿಕಾಲದಿಂದಲೂ ಶಕ್ತಿ ಸ್ವರೂಪಿನಿಯಾಗಿದ್ದಾಳೆ. ಇದಕ್ಕೆ ಯಾವುದೇ ಜಾತಿ, ಧರ್ಮ ಅಡ್ಡ ಬರುವುದಿಲ್ಲ. ಮಹಿಳೆಯರು ಭಾರತವನ್ನು ಹೆಮ್ಮೆ ಪಡುವಂತೆ ಸಾಧನೆ ಮಾಡಿದ್ದಾರೆ. ಸಂಕುಚಿತ ಮನೋಭಾವ ಇರೋ ನಾಯಕರು ಬದಲಾಗುವ ಸಮಯ ಈಗ ಬಂದಿದೆ ಎಂದು ಟ್ವಿಟ್ ಮಾಡಿದ್ದಾರೆ.