ಸಿದ್ದು ಸರ್ಕಾರಕ್ಕೆ ಸುರ್ಜೆವಾಲ ಫುಲ್‌ಮಾರ್ಕ್ಸ್

RandeepSurjewala
Published on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೇ 20ರಂದು 1 ವರ್ಷ ಪೂರೈಸುತ್ತಿದೆ. ಕಡಿಮೆ ಅವಧಿಯಲ್ಲಿ ಸರ್ಕಾರ ಅಪೂರ್ವ ಸಾಧನೆ ಮಾಡಿ, ಅಗಣಿತ ಜನ ಮನ್ನಣೆ ಗಳಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ ಬಣ್ಣಿಸಿದ್ದಾರೆ.

ಯಾವುದೇ ಜಾತಿ, ಧರ್ಮ ಎಂದು ನೋಡದೇ ಎಲ್ಲ ವರ್ಗವನ್ನೂ ಸಮಾನಾಗಿ ಕಾಣುವ ಮೂಲಕ ಸರ್ವರಿಗೂ ಸಮಬಾಳು - ಸಮಪಾಲು ಎಂಬ ತತ್ತ್ವವನ್ನು ಸಾರಿದೆ. ಆ ಮೂಲಕ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ರಾಜ್ಯದ 4.60 ಕೋಟಿ ಜನರನ್ನು ತಲುಪುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಸರ್ಕಾರ ಎಂದರೆ ಕೇವಲ ರಸ್ತೆ, ಸೇತುವೆಯಂಥ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ಮಾತ್ರವಲ್ಲ. ಬಡವರು, ಮಹಿಳೆಯರು, ರೈತರು ಸೇರಿದಂತೆ ಶ್ರಮಿಕ ವರ್ಗವನ್ನೂ ಸಹ ಆರ್ಥಿಕವಾಗಿ ಸಶಕ್ತರನ್ನಾಗಿಸಿ, ಮುಖ್ಯವಾಹಿನಿಗೆ ತಂದು, ಸರ್ವರ ಸರ್ವತೋಮುಖ ಅಭಿವೃದ್ಧಿ ಮಾಡುವುದು ಎಂಬ ವಿಭಿನ್ನ ಆಶಯದೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಡಿ ಇಟ್ಟಿದೆ ಎಂದಿದ್ದಾರೆ.

ನೇರ ನಗದು ವರ್ಗಾವಣೆ ಮೂಲಕ ಕೋಟ್ಯಂತರ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ತಲುಪಿಸಿ, ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಗ್ಯಾರಂಟಿ ಯೋಜನೆಗಳಿಂದ ಬಡ ಜನರ ಕೊಳ್ಳುವ ಶಕ್ತಿ ಹೆಚ್ಚಿದೆ. ಮಕ್ಕಳ ವಿದ್ಯಾಭ್ಯಾಸ, ಹಿರಿಯರ ಔಷದೋಪಚಾರಕ್ಕೆ ನೆರವಾಗಿದೆ. ರಾಜ್ಯದ ಪ್ರವಾಸೋದ್ಯಮ ಚಟುವಟಿಕೆ ಚುರುಕಾಗಿದೆ. ಒಟ್ಟಿನಲ್ಲಿ ಸರ್ಕಾರ ಜನರಿಂದ ಜನರಿಗಾಗಿ, ಎಂಬ ಪ್ರಜಾಪ್ರಭುತ್ವದ ಮೂಲ ಆಶಯವನ್ನು ಈಡೇರಿಸುತ್ತಿದೆ ಎಂದು ಹೇಳಿದ್ದಾರೆ.

ರಾಜ್ಯದ 223 ತಾಲೂಕುಗಳಲ್ಲಿ ಭೀಕರ ಬರ ಪರಿಸ್ಥಿತಿ ಇದೆ. ಕೇಂದ್ರ ಸರ್ಕಾರ ಬರ ಪರಿಹಾರ ನೀಡಲು ವಿಳಂಬ ಮಾಡಿ, ಅಸಹಕಾರ ತೋರಿದಾಗಲೂ ಸಹ ರಾಜ್ಯದ ಗ್ಯಾರಂಟಿ ಯೋಜನೆಗಳು ಜನರಿಗೆ ನೆರವಾದವು. ಜನರು ತೊಂದರೆ ಇಲ್ಲದೇ ಜೀವನ ಮಾಡಲು ರಾಜ್ಯ ಸರ್ಕಾರ ತನ್ನ ಯೋಜನೆಗಳ ಮೂಲಕ ಅನುವು ಮಾಡಿಕೊಟ್ಟಿತು. ಜತೆಗೆ ಅಭಿವೃದ್ಧಿ ಕಾರ್ಯಗಳಿಗೂ ಹಣ ನೀಡಿದ ಸರ್ಕಾರದ ನಡೆ ಶ್ಲಾಘನೀಯ. ಈ ವೇಳೆ ರೈತರ ಖಾತೆಗೆ ಎರಡು ಸಾವಿರ ರೂಪಾಯಿಗಳನ್ನು ಸಹ ರಾಜ್ಯ ಸರ್ಕಾರ ಜಮೆ ಮಾಡಿ ರೈತ ಪರ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ ಎಂದು ಶ್ಲಾಸಿದ್ದಾರೆ.

ಕ್ರಾಂತಿಕಾರಿ ಹೆಜ್ಜೆಗಳಿಂದ ಒಂದು ವರ್ಷದಲ್ಲಿ ಸಾಕಷ್ಟು ಸಾಧನೆ ಮಾಡಿದ ಸರ್ಕಾರ ಮುಂದಿನ ನಾಲ್ಕು ವರ್ಷಗಳನ್ನು ಸಮರ್ಥವಾಗಿ ಎದುರಿಸಲಿದೆ. ಮಾತ್ರವಲ್ಲ ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಿ, ರಾಜ್ಯದಲ್ಲಿ ಅಭಿವೃದ್ಧಿಯ ಪರ್ವವನ್ನು ಸೃಷ್ಟಿ ಮಾಡಲಿದೆ ಎಂಬ ದೃಢ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net