ಲೋಪಗಳಿಗೆ ಅವಕಾಶ ನೀಡದೆ ಕೆಲಸ ಮಾಡಿ: ಸಚಿವ ಸುರೇಶ್‌ಕುಮಾರ್ ಸೂಚನೆ, ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ

28CBP2
Published on

ಚಿಕ್ಕಬಳ್ಳಾಪುರ :  ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಜಿಲ್ಲಾಡಳಿತ ಕೈಗೊಂಡಿರುವ ಅಗತ್ಯ ಸಿದ್ಧತೆ ಮತ್ತು ಕರೊನಾ ಸುರಕ್ಷತೆ ಕ್ರಮಗಳ ಬಗ್ಗೆ ಸಚಿವ ಸುರೇಶ್ ಕುಮಾರ್‌ಗೆ ಮನವರಿಕೆ ಮಾಡಿಕೊಡಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪೂರ್ವ ಸಿದ್ಧತೆ ಕುರಿತು ಜಿಲ್ಲಾಡಳಿಯ ಭವನದಲ್ಲಿ ಆಯೋಜಿಸಿದ್ದ ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಸಿದ್ಧತೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 8,329 ವಿದ್ಯಾರ್ಥಿಗಳು ಮತ್ತು 7,649 ವಿದ್ಯಾರ್ಥಿನಿಯರು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. 99 ಕೇಂದ್ರಗಳನ್ನು ಗುರುತಿಸಲಾಗಿದೆ. ಕರೊನಾ ಮಾರ್ಗಸೂಚಿ ನಿಯಮ ಪಾಲನೆಯೊಂದಿಗೆ ಸುಗಮವಾಗಿ ಪರೀಕ್ಷೆ ನಡೆಸಲಾಗುತ್ತದೆ. ಇದೇ ವೇಳೆ ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಗೃಹ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಪರೀಕ್ಷಾಸ್ನೇಹಿ ವಾತಾವರಣ ನಿರ್ಮಿಸಿ, ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಪರೀಕ್ಷೆ ಬರೆಯುವಂತಾಗಲು ಈಗಾಗಲೇ ಸೂಕ್ತ ಮಾರ್ಗದರ್ಶನ ನೀಡಲಾಗಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜುಲೈ 19, 22 ರಂದು ನೂತನ ಪದ್ಧತಿಯಲ್ಲಿ ಪರೀಕ್ಷೆ ಕೈಗೊಳ್ಳಲಾಗುತ್ತದೆ. ಕಳೆದ ವರ್ಷ ಯಶಸ್ವಿಯಾಗಿ ಪರೀಕ್ಷೆ ನಡೆದು, ಕರ್ನಾಟಕವು ದೇಶದ ಗಮನ ಸೆಳೆದಿತ್ತು. ಅದೇ ರೀತಿ ಈ ಬಾರಿಯೂ ಲೋಪಗಳಿಗೆ ಅವಕಾಶ ನೀಡಬಾರದು. ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದರು.

ನೋಂದಾಯಿತ ಯಾವುದೇ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತವಾಗಬಾರದು. ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷತಾ ಕೇಂದ್ರಗಳಾಗಬೇಕು. ಒಂದು ಡೆಸ್ಕ್ ನಲ್ಲಿ ಒಬ್ಬರು ಕುಳಿತುಕೊಳ್ಳಬೇಕು. ಪರೀಕ್ಷೆ ನಡೆಯುವ ಎರಡು ದಿನಗಳಲ್ಲಿ ಪರೀಕ್ಷಾ ಪೂರ್ವ ಮತ್ತು ನಂತರ ಸೇರಿ ನಾಲ್ಕು ಬಾರಿ ಸೋಂಕು ನಿವಾರಕ ಸಿಂಪಡಿಸಬೇಕು.

ಪರೀಕ್ಷಾ ಕಾರ್ಯದಲ್ಲಿ ತೊಡಗುವ ಶಿಕ್ಷಕರು, ಸಹಾಯಕ ಸಿಬ್ಬಂದಿ ಸೇರಿ ಎಲ್ಲರೂ ಕಡ್ಡಾಯವಾಗಿ ಕರೊನಾ ಲಸಿಕೆ ಹಾಕಿಸಿಕೊಂಡಿರಬೇಕು. ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ದಿನದಂದು ಪರೀಕ್ಷಾ ಕೇಂದ್ರದ ಮುಂಭಾಗದಲ್ಲಿ ಆರೋಗ್ಯ ತಪಾಸಣಾ ಕೌಂಟರ್ ತೆರೆಯಬೇಕು. ಒಂದು ವೇಳೆ ರೋಗ ಲಕ್ಷಣಗಳಿದ್ದರೆ ಪಲ್ಸ್ ಆಕ್ಸಿಮೀಟರ್ ಮೂಲಕ ಪರೀಕ್ಷಿಸಬೇಕು. ಅನಾರೋಗ್ಯ ಪೀಡಿತರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಂಡಿರಬೇಕು ಎಂದರು.

ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ.ಎಂ.ಜಯರಾಮರೆಡ್ಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ ಮತ್ತಿತರರು ಇದ್ದರು.

ಕ್ರಿಮಿನಲ್ ಪ್ರಕರಣ ದಾಖಲು : ಪ್ರಶ್ನೆ ಪತ್ರಿಕೆಗಳ ಸೋರಿಕೆ ಸೇರಿ ಯಾವುದೇ ವಿಚಾರದಲ್ಲಿ ವದಂತಿ ಹಬ್ಬಿಸಿ, ಗೊಂದಲ ಮೂಡಿಸುವ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಸಚಿವರು ಜಿಲ್ಲಾಡಳಿತಕ್ಕೆ ಸೂಚಿಸಿದರು. ಸೂಕ್ತ ಭದ್ರತೆ, ಗೌಪ್ಯತೆ ಮತ್ತು ಪರೀಕ್ಷಾ ಪಾವಿತ್ರ್ಯತೆ ವಿಚಾರದಲ್ಲಿ ಸಣ್ಣ ಲೋಪ ಆಗದಂತೆ ನೋಡಿಕೊಳ್ಳಬೇಕು. ಸೋಂಕಿತ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಬಯಸಿದ್ದಲ್ಲಿ ಕರೊನಾ ಆರೈಕೆ ಕೇಂದ್ರದಲ್ಲಿ ಅವಕಾಶ ನೀಡಬೇಕು. ಇದಕ್ಕೆ ಪ್ರತಿ ತಾಲೂಕಿಗೆ ಒಂದು ಆರೈಕೆ ಕೇಂದ್ರ ಮತ್ತು ಆಂಬುಲೆನ್ಸ್ ಮೀಸಲಿಟ್ಟುಕೊಳ್ಳಲು ಸೂಚನೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net