ಮುಸ್ಲಿಂ ಮಹಿಳೆಯರಿಗೆ ಜೀವನಾಂಶ; ಸುಪ್ರೀಂ ತೀರ್ಪಿಗೆ ಸ್ವಾಗತ

Published on

ಬೆಂಗಳೂರು:
ಮುಸ್ಲಿಂ ಮಹಿಳೆಯರಿಗೆ ಜೀವನಾಂಶ ಪಡೆಯುವ ಹಕ್ಕನ್ನು (ಸಿಆರ್‌ಪಿಸಿ 125ರ ಪ್ರಕಾರ) ಸುಪ್ರೀಂ ಕೋರ್ಟ್ ತೀರ್ಪು ಎತ್ತಿ ಹಿಡಿದಿರುವುದನ್ನು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಕು.ಮಂಜುಳಾ ಸ್ವಾಗತಿಸಿದ್ದಾರೆ.
ಈ ಮೂಲಕ 1985ರಲ್ಲಿ ಸುಪ್ರೀಂ ಕೋರ್ಟ್ ಇದೇ ಸಿಆರ್‌ಪಿಸಿ 125ರ ಪ್ರಕಾರ ಮುಸ್ಲಿಂ ಮಹಿಳೆಯರಿಗೆ ವಿಚ್ಛೇದನ ನೀಡುವ ಪತಿ ಜೀವನಾಂಶ ಕೊಡಬೇಕೆಂದು ತೀರ್ಪು ನೀಡಿತ್ತು. ಅದನ್ನು ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂಸತ್ತಿನಲ್ಲಿ ತಡೆಯೊಡ್ಡಿ, ಮುಸ್ಲಿಂ ವೈಯಕ್ತಿಕ ಕಾನೂನಿಗೆ ಬೆಂಬಲ ಕೊಟ್ಟು, ಸುಪ್ರೀಂ ತೀರ್ಪನ್ನು ನಿರಾಕರಿಸಿತ್ತು ಎಂದು ನೆನಪಿಸಿದ್ದಾರೆ.
ಸಂವಿಧಾನದ ಕುರಿತು ಡೋಂಗಿ ಪ್ರಚಾರ ಮಾಡುವ ಕಾಂಗ್ರೆಸ್, ಇವತ್ತು ಮಹಿಳಾ ಪರವಾಗಿ ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ನಿರೀಕ್ಷಿಸುವುದಾಗಿ ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಸಂಸತ್ತಿನಲ್ಲಿ ಹೇಗೆ ನಡೆದುಕೊಳ್ಳಲಿದ್ದಾರೆ? ಅವರ ತಂದೆ ಮಾಡಿದ್ದನ್ನು ಬೆಂಬಲಿಸುವರೇ ಅಥವಾ ಸುಪ್ರೀಂ ಕೋರ್ಟ್ ನಿಲುವನ್ನು ಗೌರವಿಸುವರೇ ಎಂದು ಪ್ರಶ್ನಿಸಿದ್ದಾರೆ.
1985ರಲ್ಲಿ ಕಾಂಗ್ರೆಸ್ಸಿಗೆ ಬಹುಮತ ಇದ್ದಾಗ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಘನತೆಯನ್ನು ಗಾಳಿಗೆ ತೂರಿದ ಕಾಂಗ್ರೆಸ್, ಮುಸ್ಲಿಂ ಮಹಿಳೆಯರ ನ್ಯಾಯವನ್ನು ನೀಡಿರಲಿಲ್ಲ. ಇಂದು ತ್ರಿವಳಿ ತಲಾಖ್ ರದ್ದು ಮಾಡಿದ ಮೋದಿ ನೇತೃತ್ವದ ಸರ್ಕಾರ ಅಧಿಕಾರ ನಡೆಸುತ್ತಿದ್ದು, ಮುಸ್ಲಿಂ ಮಹಿಳೆಯರು ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net