ವನತಾರಾ ಕಲ್ಯಾಣ ಕಾರ್ಯಕ್ಕೆ ಸುಪ್ರೀಂನಲ್ಲಿ ಗೆಲುವು: ಎಸ್​ಐಟಿಯಿಂದ ಕ್ಲೀನ್ ಚಿಟ್; ಕೋರ್ಟ್ ಕೊಟ್ಟ ನಿರ್ದೇಶನಗಳಿವು

Untitled design (11)
Published on

ನವದೆಹಲಿ: ಗುಜರಾತ್​ನ ಜಾಮ್ಗರದಲ್ಲಿರುವ ಪ್ರಾಣಿ ಸಂರಕ್ಷಣೆ ಹಾಗೂ ಪುನರ್ವಸತಿ ಕೇಂದ್ರವಾದ ವನತಾರಾದಿಂದ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ. ಅದು ಸಂಬಂಧಪಟ್ಟ ಎಲ್ಲ ಕಾನೂನುಗಳನ್ನು ಪಾಲಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾ ತಂಡ (ಎಸ್​ಐಟಿ) ಕ್ಲೀನ್​ಚಿಟ್ ನೀಡಿದೆ. ‘ವನತಾರಾದ ಹೆಸರಿಗೆ ಮಸಿ ಬಳಿಯಬೇಡಿ’ ಎಂದು, ಮುಚ್ಚಿದ ಲಕೋಟೆಯಲ್ಲಿ ಎಸ್​ಐಟಿ ನೀಡಿದ್ದ ವರದಿಯನ್ನು ತೆರೆದ ನಂತರ ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ಪಿ.ಬಿ. ವರಾಳೆ ಇದ್ದ ಸವೋಚ್ಚ ನ್ಯಾಯಾಲಯದ ಪೀಠ ಆದೇಶ ಪ್ರಕಟಿಸಿತು. ವನತಾರಾದಲ್ಲಿ ಕಾನೂನು ಪಾಲನೆ ಆಗುತ್ತಿರುವ ಬಗ್ಗೆ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆಂದು ಪೀಠ ಹೇಳಿದೆ.

ಕಾನೂನು ಉಲ್ಲಂಘನೆ ಹಾಗೂ ಭಾರತ ಮತ್ತು ವಿದೇಶಗಳಿಂದ ಆನೆಗಳ ಸಹಿತ ಪ್ರಾಣಿಗಳನ್ನು ಪಡೆಯುವ ವಿಚಾರದಲ್ಲಿ ವನತಾರಾ ವಿರುದ್ಧ ಆರೋಪ ಹೊರಿಸಿ ದಾಖಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ ಆಗಸ್ಟ್ 25ರಂದು ರಚಿಸಿದ್ದ ಎಸ್​ಐಟಿ ಶುಕ್ರವಾರ ವರದಿಯನ್ನು ಸಲ್ಲಿಸಿತ್ತು. ಎಸ್​ಐಟಿ ಪರಿಶೋಧನೆಗಳನ್ನು ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ಅಂಗೀಕರಿಸಿದೆ, ಪ್ರಕರಣಗಳನ್ನು ಮುಕ್ತಾಯಗೊಳಿಸಿದೆ, ಮತ್ತು ಇದೇ ವಿಷಯದ ಮೇಲೆ ಪುನರಾವರ್ತಿತ ವ್ಯಾಜ್ಯವನ್ನು ನಿಷೇಧಿಸಿದೆ. ಆಧಾರರಹಿತ ಆರೋಪಗಳ ಬಗ್ಗೆ ಎಚ್ಚರಿಕೆ ನೀಡುವಾಗಲೇ ವನತಾರಾದ ಕಲ್ಯಾಣ ಮಾನದಂಡಗಳು ಮತ್ತು ಸಂರಕ್ಷಣಾ ಪ್ರಯತ್ನಗಳನ್ನು ಕೂಡ ಕೋರ್ಟ್ ಶ್ಲಾಘಿಸಿದೆ.

ಎಸ್​ಐಟಿ ಸಂಯೋಜನೆ ಮತ್ತು ಅದರ ಸದಸ್ಯರ ವಿಶ್ವಾಸಾರ್ಹತೆಯ ಕಾರಣದಿಂದ ಎಸ್​ಐಟಿಯ ತೀರ್ಪು ಇನ್ನೂ ಮಹತ್ವದ್ದಾಗುತ್ತದೆ. ಇದರ ನೇತೃತ್ವ ವಹಿಸಿದ್ದ ನಿವೃತ್ತ ಜಸ್ಟಿಸ್ ಚೆಲ್ಲಮೇಶ್ವರ್ ಅವರು ನಮ್ಮ ಕಾಲದ ಮಹತ್ವದ ನ್ಯಾಯಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದಾರೆ. ರಾಜಕೀಯ ವರ್ಗ ಮತ್ತು ಇತರ ಎಲ್ಲ ವಿಭಾಗಗಳ ಯಾವುದೇ ಒತ್ತಡಗಳು ಅವರ ಮೇಲೆ ಯಾವುದೇ ಪರಿಣಾಮ ಬಿದ್ದಂತಿಲ್ಲ. ಅವರೊಬ್ಬ ಹೃದಯವಂತ, ಸಂವೇದನಾಶೀಲತೆಯ ದನಿ ಮತ್ತು ಪ್ರವಾಹದ ಎದುರಾಗಿ ಈಜಲು ಭಯಪಡದ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಅವರು ಭಿನ್ನಮತದ ಬಲಿಷ್ಠ ಶಕ್ತಿ ಹಾಗೂ ಭಿನ್ನಾಭಿಪ್ರಾಯ ಹೊಂದಿದವರ ಪ್ರಬಲ ಆಶಾಕಿರಣವಾಗಿದ್ದಾರೆ. ಯಾವುದೇ ವಿಷಯದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಅವರು ಅದನ್ನು ಇಂದಿನ ದಿನಮಾನದಲ್ಲಿ ಅತ್ಯಂತ ಕಡಿಮೆ ಜನರಲ್ಲಿರುವ ನೈತಿಕ ಧೈರ್ಯದೊಂದಿಗೆ ಮಾಡುತ್ತಾರೆ. ವನತಾರಾದಲ್ಲಿ ಯಾವುದೇ ತಪ್ಪಿಲ್ಲವೆನ್ನುವುದನ್ನು ಅವರು ಕೂಡ ಕಂಡುಕೊಂಡಿರುವಾಗ ಅತ್ಯಂತ ಬಲಿಷ್ಠ ಟೀಕಾಕಾರರಿಗೆ ಅದು ಮನವರಿಕೆ ಮಾಡಿಕೊಡುತ್ತದೆ ಮಾತ್ರವಲ್ಲದೆ ಕಾಯಂ ಆಗಿ ಅವರ ಬಾಯಿಯನ್ನು ಮುಚ್ಚಿಸುತ್ತದೆ.

ಕೋರ್ಟ್ ನಿರ್ದೇಶನಗಳು

  • ಎಸ್​ಐಟಿ ವರದಿ ಮೊಹರಾದ ಲಕೋಟೆಯಲ್ಲಿರಬೇಕು. ಪೂರ್ಣ ಪ್ರತಿಯನ್ನು ಆಂತರಿಕ ಬಳಕೆಗಾಗಿ ವನತಾರಾಕ್ಕೆ ಒದಗಿಸಬೇಕು.
  • ಎಸ್​ಐಟಿ ವರದಿಯ ಸಾರಾಂಶವು ಗೋಪ್ಯವಲ್ಲ ಹಾಗೂ ಕೋರ್ಟ್ ಆದೇಶದ ಭಾಗವಲ್ಲ.
  • ಶೆಡ್ಯೂಲ್ ಎನಲ್ಲಿ ನಮೂದಿಸಿರುವ ಎಲ್ಲ ದೂರುಗಳು/ಅರ್ಜಿಗಳು ಮುಕ್ತಾಯಗೊಳ್ಳುತ್ತವೆ.
  • ಇದೇ ರೀತಿಯ ಆರೋಪಗಳ ಯಾವುದೇ ಅರ್ಜಿಗಳನ್ನು ಇನ್ನು ಮುಂದೆ ಯಾವುದೇ ರೀತಿಯಲ್ಲಿ ಪರಿಗಣಿಸಲಾಗುವುದಿಲ್ಲ.
  • ಎಸ್​ಐಟಿ ಸಲಹೆ ಮಾಡಿದ ಕ್ರಮಗಳನ್ನು ವನತಾರಾ ಮತ್ತು ಅಧಿಕಾರಿಗಳು ಅನುಷ್ಠಾನಗೊಳಿಸಬೇಕು.
  • ಮಾನಹಾನಿಕರ ಪ್ರಕಟಣೆ ವಿಚಾರದಲ್ಲಿ ಪರಿಹಾರಕ್ಕೆ ವನತಾರಾ ಕ್ರಮ ಕೈಗೊಳ್ಳಬಹುದಾಗಿದೆ.

ಹಿನ್ನೆಲೆ

  • ವನತಾರಾದಲ್ಲಿ (ಗ್ರೀನ್ಸ್ ಪ್ರಾಣಿಶಾಸ್ತ್ರೀಯ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಹಾಗೂ ರಾಧೇಕಷ್ಣ ದೇವಾಲಯ ಗಜ ಕಲ್ಯಾಣ ಟ್ರಸ್ಟ್) ಅಕ್ರಮಗಳು ಹಾಗೂ ಅನುಚಿತ ಕೃತ್ಯಗಳು ನಡೆಯುತ್ತಿವೆ ಎಂದು ಆರೋಪಿಸಿ 2 ರಿಟ್ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
  • ಇದಕ್ಕೂ ಮುನ್ನ (25.08.2025), ಕೋರ್ಟ್ ಅವುಗಳಿಗೆ ಯಾವುದೇ ಪುರಾವೆ ಯನ್ನು ಕಂಡಿರಲಿಲ್ಲ. ಆದರೆ, ವಿಷಯದ ಗಂಭೀರತೆಯನ್ನು ಪರಿಗಣಿಸಿ ಸತ್ಯಶೋಧನೆ ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್​ಐಟಿ) ಕೋರ್ಟ್ ರಚಿಸಿತ್ತು.

ಎಸ್​ಐಟಿ ತನಿಖೆ

  • ಎಸ್​ಐಟಿ ಅನೇಕ ಭಾರತೀಯ, ವಿದೇಶಿ ಪ್ರಾಧಿಕಾರಗಳೊಂದಿಗೆ (ಸಿಜಡ್​ಎ, ಸಿಬಿಐ, ಇಡಿ, ಡಿಆರ್​ಐ, ಕಸ್ಟಮ್್ಸ, ಸಿಐಟಿಇಎಸ್ ಮುಂತಾದವು) ಸಮನ್ವಯ ಸಾಧಿಸಿತು.
  •  ದಾಖಲೆ, ಅಫಿಡವಿಟ್​ಗಳನ್ನು ಪರಿಶೀಲಿಸಿತು, ಸ್ಥಳಕ್ಕೆ ಭೇಟಿ ನೀಡಿತು, ತಜ್ಞರ ಅಭಿಪ್ರಾಯ ಆಲಿಸಿ ವೈಯಕ್ತಿಕ ವಿಚಾರಣೆ ನಡೆಸಿತು.
  • ಪ್ರಾಣಿಗಳ ಸ್ವಾಧೀನ, ಕಳ್ಳಸಾಗಾಟ, ಹಣಕಾಸು ಅವ್ಯವಹಾರ, ಕಲ್ಯಾಣ, ಸಂರಕ್ಷಣೆ, ಹಣಕಾಸು ಅನುಚಿತತೆಗಳು, ಪರಿಸರ ಸಂಬಂಧ ವಿಷಯಗಳ ಕುರಿತ ಆರೋಪಗಳ ತನಿಖೆ ನಡೆಸಿತು.

ಪ್ರಮುಖ ಪರಿಶೋಧಗಳು

ಕಾನೂನು ಉಲ್ಲಂಘನೆಯಿಲ್ಲ

  • 1972ರ ವನ್ಯಜೀವಿ (ಸಂರಕ್ಷಣೆ) ಕಾನೂನು, ಮೃಗಾಲಯ ನಿಯಮಗಳು, ಸಿಜಡ್​ಎ ಮಾರ್ಗಸೂಚಿಗಳು, ಕಸ್ಟಮ್ಸ್​ ಕಾನೂನು, ಫೆಮಾ, ಪಿಎಂಎಲ್​ಎ ಅಥವಾ ಸಿಐಟಿಇಎಸ್​ನ ಯಾವುದೇ ಉಲ್ಲಂಘನೆ ಆಗಿಲ್ಲ.
  • ಎಲ್ಲ ಸ್ವಾಧೀನಗಳು ಮತ್ತು ಆಮದಿಗೆ ಸೂಕ್ತ ಪರವಾನಗಿ ಪಡೆಯಲಾಗಿದೆ ಹಾಗೂ ದಾಖಲೀಕರಿಸಲಾಗಿದೆ.

ಪ್ರಾಣಿ ಕಲ್ಯಾಣ ಮತ್ತು ಸೌಲಭ್ಯಗಳು

  •  ವನತಾರಾದಲ್ಲಿನ ಕಲ್ಯಾಣ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೌಲಭ್ಯಗಳು ನಿಗದಿತ ಮಾನದಂಡಗಳನ್ನೂ ಮೀರಿಸುವಂತಿವೆ.
  • ಪ್ರಾಣಿಗಳ ಸಾವಿನ ಪ್ರಮಾಣವು ಜಾಗತಿಕ ಪ್ರಾಣಿಶಾಸ್ತ್ರೀಯ ಸರಾಸರಿಗೆ ಅನುಗುಣವಾಗಿದೆ.
  • ‘ಗ್ಲೋಬಲ್ ಹ್ಯುಮೇನ್ ಸರ್ಟಿಫೈಡ್ ಸೀಲ್ ಆಫ್ ಅಪೂ›ವಲ್’ನೊಂದಿಗೆ ಗ್ಲೋಬಲ್ ಹ್ಯುಮೇನ್ ಸೊಸೈಟಿಯಿಂದ ಪ್ರಮಾಣೀಕರಣ ಹೊಂದಿದೆ.

ಹಣಕಾಸು ಆರೋಪಗಳು

  • ಕಾರ್ಬನ್ ಕ್ರೆಡಿಟ್​ಗಳು ಮತ್ತು ನೀರಿನ ದುರುಪಯೋಗ ಹಾಗೂ ಹಣಕಾಸಿನ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಆಧಾರರಹಿತವಾಗಿವೆ.
  • ಅನಿಯಮಿತವಾಗಿ ನಿಧಿ ಹರಿದು ಬರುವುದು ಅಥವಾ ಕಳ್ಳಸಾಗಾಟದ ಸಂಪರ್ಕವಿರುವುದು ಪತ್ತೆಯಾಗಿಲ್ಲ.

ಪುನರಾವರ್ತಿತ ದೂರುಗಳು

ವನತಾರಾ ಪದೇ ಪದೇ ಈ ರೀತಿಯ ಆರೋಪಗಳನ್ನು ಎದುರಿಸಿದ್ದು ಅವುಗಳಲ್ಲಿ ಯಾವುದೇ ಹುರುಳಿಲ್ಲ ಎನ್ನುವುದನ್ನು ನ್ಯಾಯಾಲಯ ಗಮನಿಸಿದೆ. ನಿರಂತರವಾಗಿ ಈ ರೀತಿಯ ಊಹಾಪೋಹದ ಅರ್ಜಿಗಳನ್ನು ಪ್ರಕ್ರಿಯೆಯ ದುರುಪಯೋಗ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net