ರಾಹುಲ್ ಗಾಂಧಿ ವಿರುದ್ಧ ಸುಪ್ರೀಂ ಟೀಕೆ; ಇದು ನ್ಯಾಯಾಂಗ ವ್ಯವಸ್ಥೆಯ ಅಧಃಪತನಕ್ಕೆ ಸಾಕ್ಷಿ ಎಂದ ಬಿ.ಕೆ.ಹರಿಪ್ರಸಾದ್ | B K Hariprasad

BK Hariprasad
Published on

B K Hariprasad: ಸಾಂವಿಧಾನಿಕ ಹುದ್ದೆಯಲ್ಲಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು "ನೀವು ನಿಜವಾದ ಭಾರತೀಯರಾ" ಎಂದು ಸುಪ್ರೀಕೋರ್ಟಿನ ನ್ಯಾಯಾಧೀಶರು ಪ್ರಶ್ನಿಸಿರುವುದು, ದೇಶದಲ್ಲಿ ನ್ಯಾಯಾಂಗದ ವ್ಯವಸ್ಥೆಯ ಅಧಃಪತನಕ್ಕೆ ಸಾಕ್ಷಿ ಮಾತ್ರವಲ್ಲ, ಸರ್ವಾಧಿಕಾರಿ ಧೋರಣೆಗೆ ನೀಡಿದ ಬೆಂಬಲ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ,

ಈ ಕುರಿತು ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಅವರು, "ಭಾರತದ ವಿಪಕ್ಷ ನಾಯಕರನ್ನು ಈ ದೇಶದ ಸಂವಿಧಾನ  ‘ಶ್ಯಾಡೋ ಪ್ರಧಾನಿ’ ಎಂದು ಗುರುತಿಸುತ್ತದೆ. ಅಂತಹ ಸಾಂವಿಧಾನಿಕ ಹುದ್ದೆಯನ್ನು ಹೊಂದಿರುವ ವ್ಯಕ್ತಿಯನ್ನು, ಮತ್ತೊಬ್ಬ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ "ನೀವು ಭಾರತೀಯರಾ? ಎಂದು ಪ್ರಶ್ನಿಸಿರುವುದು ದುರಾದೃಷ್ಟಕರ.‌ ಇದು ದೇಶದ ಸಾಂವಿಧಾನಿಕ ಹುದ್ದೆಗೆ ಮಾಡಿದ ಅಪಚಾರ.

ಚೀನಾ ದೇಶ ಗಾಲ್ವಾಮಾ ಕಣಿವೆಯಲ್ಲಿ ಎರಡು ಸಾವಿರ ಚದರ ಕಿಲೋಮೀಟರ್ ಕ್ಕಿಂತ ಹೆಚ್ಚು ಭೂಪ್ರದೇಶವನ್ನ ಆಕ್ರಮಿಸಿಕೊಂಡಿರುವುದರ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿಯವರಿಂದ ಸ್ಪಷ್ಟನೆ ಕೇಳಲಾಗಿತ್ತು.‌ ಈ ಕುರಿತು ಸಂಸತ್ತಿನಲ್ಲೇ ಸುಧೀರ್ಘ ಚರ್ಚೆ ನಡೆಸಲಾಗಿದೆ. 38 ಸಾವಿರ ಚದರ ಕಿಲೋಮೀಟರ್ ಭೂಪ್ರದೇಶ ಆಕ್ರಮಿಸಿಕೊಂಡಿರುವುದನ್ನು ಸದನದಲ್ಲೇ ಕೇಂದ್ರದ ವಿದೇಶಾಂಗ ರಾಜ್ಯ ಸಚಿವರಾಗಿದ್ದ ಮುರುಳಿಧರನ್ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಇದೇ ವಿಷಯದಲ್ಲಿ ಸುಪ್ರೀಕೋರ್ಟ್ ನ ನ್ಯಾಯಾಧೀಶರು ರಾಜಕೀಯ ನಾಯಕರಂತೆ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ.

ದೇಶದ ಸಂವಿಧಾನ ನೀಡಿದ ಸಾಂವಿಧಾನಿಕ ಹುದ್ದೆಯಲ್ಲಿರುವವರು, ಪ್ರಜಾಪ್ರಭುತ್ವದಡಿಯಲ್ಲಿ ಜನರಿಂದ ಆಯ್ಕೆಯಾದ ಸಂಸದರನ್ನು ಸುಪ್ರೀಂಕೋರ್ಟ್ ಅತ್ಯಂತ ಕೀಳುಮಟ್ಟದಿಂದ ವರ್ತಿಸಿರುವುದು ಶೋಭೆಯಲ್ಲ. ಆಳುವ ಸರ್ಕಾರವನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕರು ದೇಶದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತುವುದೇ ಪ್ರಜಾಪ್ರಭುತ್ವದ ಸೌಂದರ್ಯ. ಸಂವಿಧಾನದ ಪರವಾಗಿ ಹೋರಾಡುತ್ತಾ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಲಪಡಿಸುತ್ತಿರುವ ರಾಹುಲ್ ಗಾಂಧಿ ಅವರ ಹೋರಾಟಕ್ಕ ಸುಪ್ರೀಂಕೋರ್ಟ್ ಬೆನ್ನಿಗೆ ನಿಲ್ಲಬೇಕಿತ್ತು ಎಂದು ಹರಿಪ್ರಸಾದ್ ಪ್ರತಿಪಾದಿಸಿದ್ದಾರೆ.

ಸುಪ್ರೀಂಕೋರ್ಟ್ ಸೇರಿದಂತೆ ಇತ್ತೀಚಿಗೆ ಕೆಲವು ಹೈಕೋರ್ಟ್ ಗಳು ರಾಜಕೀಯ ಪ್ರೇರಿತ ನಿರ್ದೇಶನ ಹಾಗೂ ನೀಡುತ್ತಿರುವ ತೀರ್ಪುಗಳ ವಿರುದ್ಧ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಸಂವಿಧಾನ ಹಾಗೂ ನ್ಯಾಯಂಗ ವ್ಯವಸ್ಥೆಯ ನಂಬಿಕೆ ಉಳಿಸಲಿ ಎಂದು ಒತ್ತಾಯಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

ಸುಪ್ರೀಂಕೋರ್ಟ್​​ ಹೇಳಿದ್ದೇನು?

ಭಾರತ ಜೋಡೋ ಯಾತ್ರೆ ಸಮಯದಲ್ಲಿ ಚೀನಾ ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಹೇಳಿಕೆ ನೀಡಿದ್ದರು. ಈ ಸಂಬಂಧ BRO ಮಾಜಿ ನಿರ್ದೇಶಕ ಉದಯ್ ಶಂಕರ್ ಶ್ರೀವಾಸ್ತವ ಅವರು ಲಖನೌ ನ್ಯಾಯಾಲಯದಲ್ಲಿ ಮಾನನಷ್ಟ ಕೇಸ್ ದಾಖಲಿಸಿದ್ದರು. ಈ ಕೇಸ್ ರದ್ದು ಪಡಿಸುವಂತೆ ರಾಹುಲ್ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ರಾಹುಲ್ ಗಾಂಧಿಯ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ನ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ನೇತೃತ್ವದ ದ್ವಿಸದಸ್ಯ ಪೀಠವು ಪ್ರಕರಣಕ್ಕೆ ತಡೆ ನೀಡಿ ಟೀಕೆ ಮಾಡಿತು.

ಚೀನಾವು ಭಾರತೀಯ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂಬ ಆರೋಪದ ಹೇಳಿಕೆಗಳನ್ನು ನೀಡುವುದನ್ನು ಬಲವಾಗಿ ವಿರೋಧಿಸಿತು. ನೀವು ನಿಜವಾದ ಭಾರತೀಯರಾಗಿದ್ದರೆ ಅಂತಹ ಹೇಳಿಕೆಗಳನ್ನು ನೀಡುತ್ತಿರಲಿಲ್ಲ. ನೀವು ವಿರೋಧ ಪಕ್ಷದ ನಾಯಕರಿದ್ದೀರಿ, ಸಂಸತ್​ನಲ್ಲಿ ಮಾತನಾಡಬೇಕಿತ್ತು, ಸೋಷಿಯಲ್ ಮೀಡಿಯಾದಲ್ಲಿ ಯಾಕೆ ಪ್ರಶ್ನೆ ಮಾಡಿದ್ರಿ ಎಂದು ಕೇಳಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net