

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ತಮಿಳುನಾಡಿನಿಂದ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಪ್ರತಿದಿನ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲು ಕರ್ನಾಟಕಕ್ಕೆ ಇಂದು (ಸೆ.21) ಆದೇಶಿಸಿದೆ.
ಮುಂದಿನ 15 ದಿನಗಳವರೆಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ನ್ಯಾಯಮೂರ್ತಿ ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ಆದೇಶಿಸಿದೆ.
ನ್ಯಾಯಾಲಯ ಇಂದು ಬೆಳಗ್ಗೆ 10.30ಕ್ಕೆ ವಿಚಾರಣೆ ಆರಂಭಿಸಿತು. ತಮಿಳುನಾಡು ಪರ ವಕೀಲರಾದ ಮುಕುಲ್ ರೋಹಟಗಿ ಮತ್ತು ಕರ್ನಾಟಕದ ಪರ ವಕೀಲ ಶ್ಯಾಮ್ ದಿವಾನ್ ತಮ್ಮ ತಮ್ಮ ವಾದವನ್ನು ಮಂಡಿಸಿದರು.
ಪ್ರಸ್ತುತ ನೀರಿನ ಸಂಕಷ್ಟ ಇದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ, ಸಂಕಷ್ಟ ಸೂತ್ರವನ್ನು ಕರ್ನಾಟಕ ಪಾಲಿಸುತ್ತಿಲ್ಲ. ನಾವು ಬಹಳಷ್ಟು ಕಡಿಮೆ ನೀರನ್ನು ಪಡೆಯುತ್ತಿದ್ದೇವೆ ಎಂದು ತಮಿಳುನಾಡು ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡನೆ ಮಾಡಿದರು.
ಕರ್ನಾಟಕ ಪರ ವಾದ ಮಂಡಿಸಿದ ಶ್ಯಾಮ್ ದಿವಾನ್, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶವನ್ನು ನಾವು ಪಾಲಿಸಿದ್ದೇವೆ ಎಂದರು.
ವಾದ-ವಿವಾದಗಳನ್ನು ಆಲಿಸಿದ ಬಳಿಕ ಬಿ.ಆರ್ ಗವಾಯಿ ನೇತೃತ್ವದ ತ್ರಿಸದಸ್ಯ ಪೀಠ ತಮಿಳುನಾಡಿಗೆ ನೀರು ಹರಿಸಲು ಆದೇಶ ಹೊರಡಿಸಿತು.