

ನವದೆಹಲಿ: ಕೋಲ್ಕತ ವೈದ್ಯೆಯ ಅತ್ಯಾಚಾರ ಪ್ರಕರಣದ ತನಿಖೆ ಯನ್ನು ಸಿಬಿಐ ಆರಂಭಿಸಿದ್ದ ವೇಳೆ ಪ್ರಕರಣಕ್ಕೆ ಸಂಬಂಧಿ ಸಿದ ಎಲ್ಲ ಅಂಶಗಳನ್ನು ಬದಲಿಸಲಾಗಿತ್ತು ಎಂದು ಬಂಗಾಳ ಸರ್ಕಾರ ಮತ್ತು ಪೊಲೀಸರ ವಿರುದ್ಧ ಸಿಬಿಐ ಪರ ವಕೀಲ ಕೇಂದ್ರ ಸರ್ಕಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಗುರುವಾರ ಸುಪ್ರೀಂಕೋರ್ಟ್ಗೆ ಪ್ರಕರಣದ ಸ್ಥಿತಿಗತಿ ವರದಿಯನ್ನು ಸಲ್ಲಿಸಿ, ಅತ್ಯಾಚಾರ ನಡೆದ ಬಳಿಕದ 5ನೇ ದಿನದಂದು ಸಿಬಿಐಗೆ ತನಿಖೆ ಹಸ್ತಾಂತರಿಸಲಾಗಿತ್ತು. ಆದರೆ ಆ ಹೊತ್ತಿಗೆ ಎಲ್ಲವನ್ನೂ ಬದಲಾಯಿಸಲಾಗಿತ್ತು. ಕೋಲ್ಕತ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಅಂಶಗಳನ್ನು ದಾಖಲಿಸಿದ ದಿನಾಂಕ ಮತ್ತು ಸಮಯದ ಬಗ್ಗೆ ಆಕ್ಷೇಪವೆತ್ತಿರುವ ಸಿಬಿಐ, ಆರ್ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲರ ವಿರುದ್ಧವೂ ಅಕ್ರಮ ಆರೋಪಗಳನ್ನು ಮಾಡಿದೆ. ಕಾಲೇಜಿನಲ್ಲಿ ಹಲವು ಆರ್ಥಿಕ ಅಕ್ರಮಗಳೊಂದಿಗೆ ಭಾಗಿಯಾಗಿರುವ ಪ್ರಾಂಶುಪಾಲರು, ಕಣ್ಗಾವಲು ಕ್ಯಾಮರಾಗಳನ್ನು ಖರೀದಿಸುವ ಬದಲು ಅವುಗಳನ್ನು ಬಾಡಿಗೆಗೆ ನೀಡಿದ್ದರು ಎಂದು ಸುಪ್ರೀಂಕೋರ್ಟ್ಗೆ ತಿಳಿಸಿದೆ.
ಕೋಲ್ಕತ ಪೊಲೀಸರು ಕೇಸಿನ ಡೈಲಿ ಡೈರಿಯಲ್ಲಿ ಅಪರಾಧ ಸ್ಥಳಕ್ಕೆ ಬೆಳಗ್ಗೆ 10.10ಕ್ಕೆ ಭೇಟಿ ನೀಡಿದ್ದರ ಬಗ್ಗೆ ದಾಖಲಿಸಲಾಯಿತು. ಆದರೆ ಅಪರಾಧದ ಸ್ಥಳವನ್ನು ಸಂಜೆ ವೇಳೆಗೆ ಪೊಲೀಸರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಇದು ಗೊಂದಲದ ಸಂಗತಿ ಎಂದು ತುಷಾರ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಮರಣೋತ್ತರ ಪರೀಕ್ಷೆ ನಡೆದಿದ್ದು ಯಾವಾಗ ಎಂದು ಕೋಲ್ಕತ್ತ ಸರ್ಕಾರದ ಪರ ವಕೀಲ ಕಪಿಲ್ ಸಿಬಲ್ರನ್ನು ಪ್ರಶ್ನಿಸಿತು. ಸಂಜೆ 6.10ರಿಂದ 7:10ರ ನಡುವೆ ಶವಪರೀಕ್ಷೆ ಮಾಡಲಾಯ್ತು ಎಂದು ಸಿಬಿಲ್ ಉತ್ತರಿಸಿದರು.
ಇಂಥದ್ದೊಂದು ಅಸ್ವಾಭಾವಿಕ ಸಾವಿನ ಪ್ರಕರಣ ವನ್ನು ನಿರ್ವಹಿಸಲು ಕೋಲ್ಕತ ಪೊಲೀಸರು ಕ್ರಿಮಿನಲ್ ಪೊ›ಸೀಜರ್ ಕೋಡ್ (ಸಿಆರ್ಪಿಸಿ) ಮಾರ್ಗಸೂಚಿ ಗಳನ್ನು ಅನುಸರಿಸಲಿಲ್ಲ ಎಂದು ಗಮನಿಸಿದ ಸುಪ್ರೀಂ ಕೋರ್ಟ್, ಶವ ಪತ್ತೆಯಾದ ನಂತರ ನಡೆದದ್ದನ್ನು ನಿಖರವಾಗಿ ವಿವರಿಸಲು ಸಂಬಂಧಪಟ್ಟ ಪೊಲೀಸ್ ಅಧಿಕಾರಿಯನ್ನು ನ್ಯಾಯಾಲಯಕ್ಕೆ ಕರೆ ತರುವಂತೆ ವಕೀಲ ಸಿಬಲ್ಗೆ ನಿರ್ದೇಶಿಸಿತು.
ಪೊಲೀಸ್ ಮತ್ತು ಸರ್ಕಾರದ ಕಾರ್ಯವೈಖರಿ ಬಗ್ಗೆ ಕಿಡಿಕಾರಿದ ನ್ಯಾ. ಪರ್ದಿವಾಲಾ, ನಿಮ್ಮ ರಾಜ್ಯ (ಪಶ್ಚಿಮ ಬಂಗಾಳ) ಅನುಸರಿಸಿರುವ ಕಾರ್ಯವಿಧಾನವನ್ನು ನನ್ನ 30 ವರ್ಷಗಳ ವೃತ್ತಿಜೀವನದಲ್ಲಿ ಎಂದೂ ಕಂಡಿಲ್ಲ ಎಂದು ಅತೃಪ್ತಿ ಹೊರಹಾಕಿದರು. ರಾತ್ರಿ ವೇಳೆ ಅಪರಾಧ ನಡೆದಿದ್ದರೂ, ಆಗಸ್ಟ್ 9 ಸಂಜೆ 7 ಗಂಟೆ ಸುಮಾರಿಗೆ ದೇಹದ ಮರಣೋತ್ತರ ಪರೀಕ್ಷೆ ಬಳಿಕ ಅಪರಾಧದ ಸ್ಥಳವನ್ನು ಭದ್ರಪಡಿಸಲಾಯಿತು. ಸಿಬಿಐ ಈ ಗೊಂದಲ ಗಳನ್ನು ಸಮರ್ಪಕವಾಗಿ ಪರಿಶೀಲಿಸಬೇಕು ಎಂದೂ ಸಲಹೆ ನೀಡಿತು.
ಪೊಲೀಸ್, ಪ್ರಾಂಶುಪಾಲರ ವಿರುದ್ಧ ಕಿಡಿ: ಪ್ರಕರಣದ ಬಗ್ಗೆ ಕೋಲ್ಕತ ಪೊಲೀಸರು ನಡೆಸಿದ್ದ ಪ್ರಾಥಮಿಕ ತನಿಖೆಯಲ್ಲಿ ಹಲವು ಲೋಪದೋಷಗಳನ್ನು ಗುರುತಿಸಿದ ಸುಪ್ರೀಂಕೋರ್ಟ್, ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೊಷ್ ಸರಿಯಾದ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲರಾದರು ಮತ್ತು ಅವರು ಯಾರನ್ನು ರಕ್ಷಿಸುವ ಯತ್ನದಲ್ಲಿದ್ದರು ಎಂಬ ಮಹತ್ವದ ಪ್ರಶ್ನೆಯನ್ನು ಮುಂದಿಟ್ಟಿದೆ. ಶವಪರೀಕ್ಷೆಯನ್ನು ತರಾತುರಿಯಲ್ಲಿ ನಡೆಸಲಾಯ್ತು ಎಂದ ನ್ಯಾಯಪೀಠ, ನಂತರವಷ್ಟೇ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸ ಲಾಯ್ತು. ಪ್ರಾಂಶುಪಾಲ ಸಂದೀಪ್ ಘೊಷ್ ಎಫ್ಐಆರ್ ಏಕೆ ದಾಖಲಿಸಲಿಲ್ಲ? ಅವರೊಂದಿಗೆ ಯಾರು ಸಂಪರ್ಕದಲ್ಲಿದ್ದರು ಮತ್ತು ಅವರು ಯಾರನ್ನು ರಕ್ಷಿಸುವ ಉದ್ದೇಶ ಹೊಂದಿದ್ದರು ಎಂದು ನ್ಯಾಯಪೀಠ ವಿಚಾರಣೆ ವೇಳೆ ಪ್ರಶ್ನಿಸಿತು. ಸೆ.5ರಂದು ಮತ್ತೆ ವಿಚಾರಣೆ ನಡೆಸುವುದಾಗಿ ತಿಳಿಸಿದ ನ್ಯಾಯಪೀಠ, ಪ್ರತಿಭಟನೆ ನಡೆಸುತ್ತಿರುವ ವೈದ್ಯರು ತಮ್ಮ ಕರ್ತವ್ಯಕ್ಕೆ ಮರಳಬೇಕು ಎಂದೂ ಸೂಚಿಸಿದೆ.
ಸಿಗುತ್ತಿವೆ ಸಾಕ್ಷ್ಯಗಳು: ಅತ್ಯಾಚಾರ ಪ್ರಕರಣದ ಆರೋಪಿ ಸಂಜಯ್ ರಾಯ್ ವಿರುದ್ಧ ಪುರಾವೆಗಳು ಪ್ರಬಲ ಗೊಳ್ಳುತ್ತಿವೆ. ಅಪರಾಧದ ಒಂದು ದಿನ ಮೊದಲು ಆತ ಸಂತ್ರಸ್ತೆ ಬಳಿ ಇದ್ದದ್ದು, ಲಭ್ಯವಾಗಿರುವ ವೈಜ್ಞಾನಿಕ ಪುರಾವೆಗಳು ಆತನ ಅಪರಾಧ ಕೃತ್ಯಕ್ಕೆ ಸಾಕ್ಷಿಯಾಗಿವೆ. ಪೊಲೀಸರ ವಿಚಾರಣೆ ವೇಳೆ ಆತ ಔಷಧ ವಾರ್ಡ್ನಲ್ಲಿ ಸಂತ್ರಸ್ತೆಯನ್ನು ಗಮನಿಸಿದ್ದರ ಬಗ್ಗೆ ಒಪ್ಪಿಕೊಂಡಿದ್ದಾನೆ. ಆಸ್ಪತ್ರೆಗೆ ರಾಯ್ ಸುಲಭವಾಗಿ ಪ್ರವೇಶಿಸಿದ್ದ ಮತ್ತು ಬೆಳಿಗ್ಗೆ 11 ಸುಮಾರಿಗೆ ವಾರ್ಡ್ನಲ್ಲಿದ್ದ. ಆ ಹೊತ್ತಿಗೆ ಕೊಲೆಯಾದ ವೈದ್ಯೆ ಮತ್ತು ಇತರೆ 4 ಕಿರಿಯ ವೈದ್ಯರು ಹಾಜರಿದ್ದರು ಎನ್ನುವುದು ಸಿಸಿಟಿವಿ ದೃಶ್ಯಾವಳಿಯಲ್ಲೂ ದಾಖಲಾಗಿದೆ.
ಪ್ರಧಾನಿಗೆ ಮಮತಾ ಪತ್ರ:ದೇಶಾದ್ಯಂತ ಪ್ರತಿದಿನ ಸುಮಾರು 90 ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದು, ಇದನ್ನು ತಡೆಯಲು ಕೇಂದ್ರ ಸರ್ಕಾರ ಕಟ್ಟುನಿಟ್ಟಾದ ಕಾನೂನು ಜಾರಿಗೆ ತರಬೇಕು. ತ್ವರಿತ ನ್ಯಾಯಾಲಯಗಳನ್ನು ಸ್ಥಾಪನೆ ಮಾಡಬೇಕು. ಅಪರಾಧಿಗೆ 15 ದಿನದಲ್ಲಿ ಶಿಕ್ಷೆ ಆಗಬೇಕೆಂದು ಆಗ್ರಹಿಸಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅತ್ಯಾಚಾರ ಪ್ರಕರಣಗಳು ಸಮಾಜ ಮತ್ತು ರಾಷ್ಟ್ರದ ಆತ್ಮಸಾಕ್ಷಿಯನ್ನು ಅಲುಗಾಡಿಸುತ್ತದೆ. ಮಹಿಳೆಯರಲ್ಲಿ ಸುರಕ್ಷಿತ ಭಾವನೆ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಶಂಕಾಸ್ಪದ ಚಟುವಟಿಕೆ: ಶವಸಂಸ್ಕಾರದ ನಂತರ ಬೆಳಗ್ಗೆ 11:45ಕ್ಕೆ ಎಫ್ಐಆರ್ ದಾಖಲಿಸಲಾಯ್ತು. ಹಿರಿಯ ವೈದ್ಯರು ಮತ್ತು ಸಹೋದ್ಯೋಗಿಗಳು ಒತ್ತಾಯಿಸಿದ ನಂತರವೇ ವಿಡಿಯೋಗ್ರಫಿಯನ್ನು ನಡೆಸಲಾಯಿತು. ಅಂದರೆ, ಇಲ್ಲಿ ಶಂಕಾಸ್ಪದ ಚಟುವಟಿಕೆ ನಡೆದಿದೆ ಎನ್ನುವುದನ್ನೇ ಇದು ಸೂಚಿಸುತ್ತದೆ ಎಂದು ಸಿಬಿಐ ವಕೀಲ ಮೆಹ್ತಾ ವಾದಿಸಿದರು. ಅತ್ಯಾಚಾರ-ಕೊಲೆ ಘಟನೆಯ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡ ಕೋಲ್ಕತ ಪೊಲೀಸ್ ಅಧಿಕಾರಿ ಮುಂದಿನ ವಿಚಾರಣೆ ವೇಳೆ ಹಾಜರಾಗಿ, ಸಮಯದ ಬಗ್ಗೆ ಸೂಕ್ತ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಬೇಕು ಎಂದು ತಿಳಿಸಲಾಗಿದೆ. ವಿಚಾರಣೆ ವೇಳೆ ಬಂಗಾಳ ಸರ್ಕಾರದ ಬಗ್ಗೆ ಕಿಡಿಕಾರಿದ ನ್ಯಾಯಪೀಠ, ರಾಜ್ಯ ಪೊಲೀಸರು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲರಾದ ಸಂದೀಪ್ ಕುಮಾರ್ ಘೊಷ್ ನಡೆಯನ್ನು ಖಂಡಿಸಿ, ಈ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಿ ಮುಚ್ಚಿಹಾಕುವ ಯತ್ನದ ಬಗ್ಗೆ ಅನುಮಾನ ಮೂಡಿದೆ ಎಂದು ಹೇಳಿತು.