ಮೀಸಲಾತಿ ಮೂಲಭೂತ ಹಕ್ಕಲ್ಲ; ಉತ್ತರಾಖಂಡ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ ಮಹತ್ವದ ತೀರ್ಪು

Supreme Court 3 Jan 20
Published on

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡುವುದು ಮೂಲಭೂತ ಹಕ್ಕಲ್ಲ. ಇದು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಷಯ. ಹೀಗಾಗಿ ಮೀಸಲಾತಿ ಕಲ್ಪಿಸುವಂತೆ ಸರ್ಕಾರಗಳಿಗೆ ಸೂಚಿಸಲು ಆಗದು ಎಂದು ಸುಪ್ರೀಂಕೋರ್ಟ್ ಹೇಳಿದೆ.

ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಪ್ರಾತಿನಿಧ್ಯ ಕಡಿಮೆ ಇದೆ ಎನಿಸಿದರೆ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಇದರ ಆಧಾರದ ಮೇಲೆ ಮೀಸಲಾತಿ ಕಲ್ಪಿಸುವುದು ಸರ್ಕಾರಗಳ ವಿವೇಚನೆಗೆ ಸಂಬಂಧಿಸಿದ ವಿಷಯ. ಇದಕ್ಕೆ ಸಂವಿಧಾನದ 16ನೇ ವಿಧಿ ಅನ್ವಯ ಅವಕಾಶವೂ ಇದೆ.

ಆದರೆ, ಮೀಸಲಾತಿ ಕಲ್ಪಿಸಲೇಬೇಕೆಂಬುದು ಕಡ್ಡಾಯವಲ್ಲ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಮೀಸಲಾತಿಯನ್ನು ಮೂಲಭೂತ ಹಕ್ಕು ಎಂದು ಭಾವಿಸಬೇಕಿಲ್ಲ. ಹೀಗಾಗಿ ಈ ಕುರಿತಂತೆ ಯಾವುದೇ ಸೂಚನೆ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಹೇಮಂತ್ ಗುಪ್ತಾ ಅವರನ್ನು ಒಳಗೊಂಡ ನ್ಯಾಯಪೀಠ ಸ್ಪಷ್ಟ ಪಡಿಸಿದೆ.

ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ಅಗತ್ಯವೇ ಎಂಬುದನ್ನು ಸರ್ಕಾರಗಳು ನಿರ್ಧರಿಸಬೇಕು. ಈ ವಿಚಾರದಲ್ಲಿ ನ್ಯಾಯಾಂಗದ ಪಾತ್ರ ಸೀಮಿತ. ನಿರ್ದಿಷ್ಟ ಶೋಷಿತ ಸಮುದಾಯಕ್ಕೆ ಸರ್ಕಾರಿ ಉದ್ಯೋಗದಲ್ಲಿ ಪ್ರಾತಿನಿಧ್ಯ ಕಡಿಮೆ ಎಂಬ ಅಭಿಪ್ರಾಯ ಮೂಡಿದಾಗ ಈ ಬಗ್ಗೆ ಸರ್ಕಾರಗಳು ಅಂಕಿಅಂಶ ಕ್ರೋಡೀಕರಣ ಮಾಡಬಹುದು. ತಕರಾರು ಉಂಟಾದ ಸಂದರ್ಭದಲ್ಲಿ ಇದನ್ನು ಕೋರ್ಟ್​ನ ಮುಂದೆ ಸಾದರ ಪಡಿಸಬಹುದು. ಆದರೆ, ಮೀಸಲಾತಿಯೇ ಅಗತ್ಯವಿಲ್ಲವೆಂದು ಎನಿಸಿದಾಗ ಇಂತಹ ಅಂಕಿಅಂಶ ಸಂಗ್ರಹಿಸುವ ಅಗತ್ಯವೂ ಇಲ್ಲ ಎಂದು ನ್ಯಾಯಪೀಠ ಹೇಳಿದೆ.

ಈ ತೀರ್ಪು ಏಕೆ?

ಉತ್ತರಾಖಂಡದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ (ಸಿವಿಲ್) ಹುದ್ದೆಗೆ ಬಡ್ತಿ ನೀಡುವಾಗ ಪರಿಶಿಷ್ಟ ಜಾತಿ ಮತ್ತು ಪಂಗಡದ ಉದ್ಯೋಗಿಗಳನ್ನು ಪರಿಗಣಿಸಿಲ್ಲ ಎಂಬ ತಕರಾರು ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದೇ ಪ್ರಕರಣ ಬಗ್ಗೆ ಉತ್ತರಾಖಂಡ ಹೈಕೋರ್ಟ್ ನೀಡಿದ್ದ ತೀರ್ಪಿನಲ್ಲಿ ಮೀಸಲಾತಿ ಕಲ್ಪಿಸುವುದಕ್ಕೂ ಮುನ್ನ ಸರ್ಕಾರಿ ಹುದ್ದೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಪ್ರಾತಿನಿಧ್ಯದ ಬಗ್ಗೆ ಅಂಕಿಅಂಶ ಸಂಗ್ರಹ ಅವಶ್ಯಕ ಎಂದಿತ್ತು. ಆದರೆ, ಬಡ್ತಿಯಲ್ಲಿ ಮೀಸಲಾತಿ ನೀಡಲಾಗದು ಎಂಬುದು ಉತ್ತರಾಖಂಡ ಸರ್ಕಾರ ನಿಲುವು.

ಬಡ್ತಿಯಲ್ಲಿ ಮೀಸಲಾತಿ ನೀಡುವುದು ಕಡ್ಡಾಯವೇನಲ್ಲ ಮತ್ತು ಇಂಥ ನಿರ್ಧಾರ ಕೈಗೊಂಡಾಗ ಅದನ್ನು ಸರ್ಕಾರಗಳು ಸಮರ್ಥಿಸಿ ಕೊಳ್ಳುವ ಅಗತ್ಯವೂ ಇಲ್ಲ. | ಸುಪ್ರೀಂಕೋರ್ಟ್ ದ್ವಿಸದಸ್ಯ ನ್ಯಾಯಪೀಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net