

ನವದೆಹಲಿ : ಸಂಭಾಲ್ ಶಾಹಿ ಜಾಮಾ ಮಸೀದಿಯ(Sambhal Masjid) ಮೇಲಿನ ಜಿಲ್ಲಾ ಟ್ರಯಲ್ ಕೋರ್ಟ್ನ ವಿಚಾರಣೆಯನ್ನು ಜನವರಿ 8 ರವರೆಗೆ ಸುಪ್ರೀಂಕೋರ್ಟ್ ಶುಕ್ರವಾರ(ನವೆಂಬರ್ 29) ತಡೆಹಿಡಿದಿದೆ. ಈ ವಿಚಾರದಲ್ಲಿ ಹೈಕೋರ್ಟ್ ಅನುಮತಿ ಇಲ್ಲದೆ ಸದ್ಯಕ್ಕೆ ಕೆಳ ನ್ಯಾಯಾಲಯ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಹೇಳಿದೆ.
ಸುಪ್ರೀಂಕೋರ್ಟ್ ಈ ವಿಷಯವನ್ನು ತನ್ನ ಮುಂದೆ ಬಾಕಿ ಇರಿಸಿದೆ ಮತ್ತು 2025 ಜನವರಿ 6 ರಿಂದ ಪ್ರಾರಂಭವಾಗುವ ವಾರದಲ್ಲಿ ಪ್ರಕರಣದ ವಿಚಾರಣೆಯನ್ನು ನಿಗದಿಪಡಿಸಿದೆ. ಅಲ್ಲದೆ ವಿಚಾರಣೆ ಸಂದರ್ಭದಲ್ಲಿ ಸಂಭಾಲ್ನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಸಂಭಾಲ್ ಮಸೀದಿಯ ಶಾಹಿ ಈದ್ಗಾ ಸಮಿತಿಯು ಹೈಕೋರ್ಟ್ ಅನ್ನು ಸಂಪರ್ಕಿಸುವವರೆಗೆ ಪ್ರಕರಣವನ್ನು ಮುಂದುವರಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಡ್ವೊಕೇಟ್ ಕಮಿಷನರ್ ಅವರ ಸಮೀಕ್ಷಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇಡುವಂತೆ ಸೂಚಿಸಿದೆ.
ಇದೇ ವೇಳೆ ಶಾಹಿ ಜಾಮಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಗೂ ಮುನ್ನ ಪೊಲೀಸರು ನಡೆಸಿದ ಧ್ವಜ ಮೆರವಣಿಗೆಯಲ್ಲಿ ಸಂಭಾಲ್ ಡಿಎಂ ಡಾ.ರಾಜೇಂದ್ರ ಪೆನ್ಸಿಯಾ ಭಾಗವಹಿಸಿದ್ದರು. ಪರಿಸ್ಥಿತಿ ಶಾಂತಿಯುತವಾಗಿದೆ, ಯಾವುದೇ ಸಮಸ್ಯೆ ಇಲ್ಲ. ಪಿಎಸ್ಸಿ, ಆರ್ಎಎಫ್, ಆರ್ಆರ್ಎಫ್ ಸೇರಿದಂತೆ 16 ಕಂಪನಿಗಳನ್ನು ನಿಯೋಜಿಸಲಾಗಿದೆ, ಎಲ್ಲರೂ ಸಮನ್ವಯಗೊಳಿಸುತ್ತಿದ್ದಾರೆ. ಶುಕ್ರವಾರದ ಪ್ರಾರ್ಥನೆಗಳು ಶಾಂತಿಯುತವಾಗಿ ನಡೆಯಲಿದೆ" ಎಂದು ಹೇಳಿದರು.(ಏಜೆನ್ಸೀಸ್)
ಉತ್ತರ ಪ್ರದೇಶದ ಕಾಶಿ ಮತ್ತು ಮಥುರಾ ನಂತರ ಇದೀಗ ಸಂಭಾಲ್ನ ಶಾಹಿ ಜಾಮಾ ಮಸೀದಿ ವಿವಾದಕ್ಕೀಡಾಗಿದೆ. ಈ ಸ್ಥಳವು 1529ರಲ್ಲಿ ಬಾಬರನಿಂದ ಕೆಡವಲ್ಪಟ್ಟ ಶ್ರೀ ಹರಿಹರ ದೇವಾಲಯವಾಗಿತ್ತು. ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಸೀದಿಯಲ್ಲಿ ಶಿವಲಿಂಗವಿದೆ ಎಂಬುದಾಗಿಯೂ ಹೇಳಲಾಗುತ್ತಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಶಾಹಿ ಜಾಮಾ ಮಸೀದಿಯ ಸರ್ವೆ ಕಾರ್ಯ ನಡೆಯುತ್ತಿದೆ. ಮಸೀದಿಯನ್ನು ಸರ್ವೆ ಮಾಡಿ ಏಳು ದಿನಗಳೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನವೆಂಬರ್ 19(ಮಂಗಳವಾರ) ರಂದು ನಡೆಸಿದ ಮೊದಲ ಸಮೀಕ್ಷೆಯ ನಂತರ ತಂಡವು ನವೆಂಬರ್ 24( ಭಾನುವಾರ) ರಂದು ಬೆಳಗ್ಗೆ ಎರಡನೇ ಸಮೀಕ್ಷೆಗೆ ಆಗಮಿಸಿತು. ಸಮೀಕ್ಷಾ ತಂಡ ಜಾಮಾ ಮಸೀದಿ ತಲುಪುತ್ತಿದ್ದಂತೆಯೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಸ್ವಲ್ಪ ಸಮಯದಲ್ಲೇ ಪ್ರತಿಭಟನೆ ಗದ್ದಲಕ್ಕೆ ತಿರುಗಿತು. ಸಮೀಕ್ಷಾ ವರದಿಯನ್ನು ನ.26ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು 29ಕ್ಕೆ ವಿಚಾರಣೆ ನಿಗದಿಯಾಗಿದೆ.(ಏಜೆನ್ಸೀಸ್)