'ದಿ ಕೇರಳ ಸ್ಟೋರಿ' ಚಿತ್ರ ಬಿಡುಗಡೆಗೆ ತಡೆ; ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್​ ನಕಾರ

The kerala Story
Published on

ನವದೆಹಲಿ: ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಲವ್​ ಜಿಹಾದ್​ ಆಧಾರಿತ ಸಿನಿಮಾ ದಿ ಕೇರಳ ಸ್ಟೋರಿ ಚಿತ್ರವು ರಾಷ್ಟ್ರಮಟ್ಟದಲ್ಲಿ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದೆ.

ಒಂದು ವರ್ಗ ಚಿತ್ರವನ್ನು ನಿಷೇಧಿಸಬೇಕು ಎಂದು ಆಗ್ರಹಿಸಿದರೆ ಮತ್ತೊಂದು ವರ್ಗ ಹಾಗೇಕೆ ಮಾಡಬೇಕು ಎಂದು ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್​ ನಕಾರ

ಇನ್ನು ದಿ ಕೇರಳ ಸ್ಟೋರಿ ಚಿತ್ರವನ್ನು ಬಿಡುಗಡೆಗೆ ಅವಕಾಶ ನೀಡದಂತೆ ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.

ಅರ್ಜಿ ವಿಚಾರಣೆ ನಡೆಸಿದ ಜಸ್ಟಿಸ್​ ಕೆ.ಎಂ.ಜೋಸೆಫ್​ ಹಾಗೂ ಬಿ.ವಿ. ನಾಗರತ್ನ ಅವರಿದ್ದ ದ್ವಿಸದಸ್ಯ ಪೀಠವು ಸುದೀರ್ಘವಾಗಿ ವಾದ-ಪ್ರತಿವಾದವನ್ನು ಆಲಿಸಿದ ನಂತರ ಅರ್ಜಿ ತಿರಸ್ಕರಿಸಿದೆ.

ಇದು ಪ್ರಚಾರದ ರೂಪ

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರಾದ ಕಪಿಲ್​ ಸಿಬಲ್​ ಹಾಗೂ ನಿಜಾಮ್ ಪಾಷಾ ಈ ಚಿತ್ರವು ದ್ವೇಷ ಭಾಷಣದ ದೃಶ್ಯ ರೂಪದ ಪ್ರಚಾರವಾಗಿದೆ ಎಂದು ಆರೋಪಿಸಿದ್ದಾರೆ.

The Kerala Story (1)

ಈ ವೇಳೆ ಮಾತನಾಡಿದ ನ್ಯಾಯಪೀಠವು ಹಾಗಿದ್ದರೆ ನೀವು ಮೊದಲು ಚಲನಚಿತ್ರ ಮಂಡಳಿ ಅವರನ್ನು ಪ್ರಶ್ನಿಸಬೇಕು. ಏಕೆಂದರೆ ಚಿತ್ರವು ಈಗಾಗಲೇ ಮಂಡಳಿಯಿಂದ ಅನುಮತಿ ಪಡೆದು ಬಿಡುಗಡೆಗೆ ಸಿದ್ದವಾಗಿದೆ.

ದ್ವೇಷ ಭಾಷಣಗಳಲ್ಲಿ ವೈವಿಧ್ಯಗಳಿದ್ದು ಒಬ್ಬ ವ್ಯಕ್ತಿ ವೇದಿಕೆಯನ್ನು ಏರಿ ಭಾಷಣ ಮಾಡಿದ್ದಂತಲ್ಲ. ಮೊದಲು ನೀವು ಮಂಡಳಿಯನ್ನು ಪ್ರಶ್ನಿಸಿ ಆ ನಂತರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಬೇಕು ಎಂದು ಹೇಳಿದೆ.

ಮೊದಲು ಹೈಕೋರ್ಟ್​​ಗೆ ಹೋಗಬೇಕಿತ್ತು

ಈ ವೇಳೆ ಮಾತನಾಡಿದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸುವ ಮೊದಲು ನೀವು ಹೈಕೋರ್ಟ್​ಗೆ ಹೋಗಬೇಕಿತ್ತು ಇದೇನು ಮೈದಾನವಲ್ಲ. ಇಲ್ಲಿದ್ದರೆ ಎಲ್ಲರೂ ಸುಪ್ರೀಂ ಕೋರ್ಟ್​ಗೆ ಬರಲು ಪ್ರಾರಂಭಿಸುತ್ತಾರೆ ಎಂದು ಅರ್ಜಿದಾರರಿಗೆ ಚಾಟಿ ಬೀಸಿದ್ದಾರೆ.

ಈ ವೇಳೆ ಮಾತನಾಡಿದ ವಕೀಲ ಪಾಷಾ ಚಿತ್ರ ಈ ಶುಕ್ರವಾರ ಬಿಡುಗಡೆ ಆಗುತ್ತಿರುವ ಕಾರಣ ನಾವು ಸುಪ್ರೀಂ ಕೋರ್ಟ್​ನಲ್ಲಿ ಮೊಕದ್ದಮೆ ಹೂಡಿದ್ದೇವೆ. ದ್ವೇಷ ಭಾಷಣದ ವಿಚಾರವಾಗಿ ಸುಪ್ರೀಂ ಕೋರ್ಟ್​ ಮಧ್ಯಸ್ಥಿಕೆಗಾಗಿ ಅರ್ಜಿ ಸಲ್ಲಿಸಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net