

ನವದೆಹಲಿ: ರಾಜಧಾನಿ ದೆಹಲಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಆಮ್ ಆದ್ಮಿ ಪಾರ್ಟಿ ನೇತೃತ್ವದ ದೆಹಲಿ ಸರ್ಕಾರದ ನಡುವೆ ಹಗ್ಗಜಗ್ಗಾಟ ಮುಂದುವರಿಯುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿದ್ದು, ಎರಡೂ ಸರ್ಕಾರಗಳು ಈ ರೀತಿ ಕಚ್ಚಾಡುತ್ತಿರುವುದು ದುರದೃಷ್ಟಕರ ಎಂದಿದೆ. ದೆಹಲಿ ವಿದ್ಯುತ್ ಸುಧಾರಣೆಗಳ (ತಿದ್ದುಪಡಿ) ಮಸೂದೆಗೆ ಅನುಮೋದನೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ದೆಹಲಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಲು ಹಿಂದೇಟು ಹಾಕಿದ ನ್ಯಾ. ಸಂಜಯ್ ಕಿಶನ್ ಕೌಲ್ ಮತ್ತು ನ್ಯಾ.ಅಭಯ್. ಎಸ್.ಓಕಾ ದ್ವಿಸದಸ್ಯ ಪೀಠ, ಈ ಸಂಬಂಧ ದೆಹಲಿ ಹೈಕೋರ್ಟ್ನ್ನು ಸಂರ್ಪಸುವಂತೆ ಸಲಹೆ ನೀಡಿತು.
ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ಮತ್ತು ಕಳೆದ ಏಳು ತಿಂಗಳಿಂದ ರಾಷ್ಟ್ರಪತಿಗಳ ಮುಂದೆ ಬಾಕಿ ಉಳಿದಿರುವ ತಿದ್ದುಪಡಿ ಮಸೂದೆಗೆ ಇನ್ನೂ ಅನುಮೋದನೆ ಸಿಕ್ಕಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ದೆಹಲಿ ವಿದ್ಯುತ್ ಸುಧಾರಣಾ (ತಿದ್ದುಪಡಿ) ಮಸೂದೆಯು ದೆಹಲಿ ವಿದ್ಯುತ್ ಸುಧಾರಣೆ ಆಯೋಗ (ಈಉಇ) ಸದಸ್ಯರು ಮತ್ತು ಅಧ್ಯಕ್ಷರ ಅವಧಿಯನ್ನು ಐದು ವರ್ಷ ಅಥವಾ 70 ವರ್ಷಗಳವರೆಗೆ ನಿಗದಿಪಡಿಸುತ್ತದೆ. ಈ ಹಿಂದೆ ಸೇವಾವಧಿ 65ಕ್ಕೆ ಸೀಮಿತವಾಗಿತ್ತು.
ಆಪ್ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘಿ, ದೆಹಲಿ ಸರ್ಕಾರವು ಆಂಧ್ರಪ್ರದೇಶ ಜಾರಿಗೊಳಿಸಿದ ಕಾನೂನನ್ನು ಅನುಕರಿಸಿದೆ. ಆಂಧ್ರ ರಾಜ್ಯ ವಿದ್ಯುತ್ ಆಯೋಗದ ಅಧ್ಯಕ್ಷರು/ಸದಸ್ಯರ ವಯಸ್ಸನ್ನು 70 ವರ್ಷಕ್ಕೆ ಹೆಚ್ಚಿಸಲು ಕಾನೂನನ್ನು ತಿದ್ದುಪಡಿ ಮಾಡಿದೆ ಮತ್ತು ಅದನ್ನು ಕೇಂದ್ರ ಅನುಮೋದಿಸಿದೆ. ಆದರೆ, ದೆಹಲಿ ಸರ್ಕಾರದ ಕಾನೂನನ್ನು ಒಪ್ಪಿಲ್ಲ. ಹೀಗಾಗಿ, ಆಯೋಗದ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಎಲ್ಲಾ ವಿಷಯಗಳನ್ನು ನಾವು ನೇರವಾಗಿ ನಿರ್ಣಯಿಸಲು ಸಾಧ್ಯವಿಲ್ಲ ಮತ್ತು ಇಂತಹ ಅರ್ಜಿಗಳನ್ನು ನೀವು ಮೊದಲು ದೆಹಲಿ ಹೈಕೋರ್ಟ್ನಲ್ಲಿ ಸಲ್ಲಿಸಬೇಕು ಎಂದು ಹೇಳಿತು.ಕಾನೂನು ತಿದ್ದುಪಡಿಗಳ ಪರಿಗಣನೆ ಮತ್ತು ಒಪ್ಪಿಗೆ ನೀಡಲು ಸಾಂವಿಧಾನಿಕ ನಿಬಂಧನೆಗಳ ಅಡಿಯಲ್ಲಿ ನಿರ್ದಿಷ್ಟ ಅವಧಿ ನಿಗದಿ ಮಾಡಿರದಿದ್ದರೂ, ಸಾಂವಿಧಾನಿಕ ಕೆಲಸಗಳಲ್ಲಿ ಶೀಘ್ರದಲ್ಲಿ ಒಪ್ಪಿಗೆ ನೀಡುವ ಅಗತ್ಯವಿರುತ್ತದೆ. ಶಾಸಕಾಂಗ ಪ್ರಕ್ರಿಯೆಗಳಲ್ಲಿ ಅನಿಶ್ಚಿತತೆಯನ್ನು ತಪ್ಪಿಸಲು ಅನುಮೋದನೆ ನೀಡಬೇಕು ಎಂದು ದಿಲ್ಲಿ ಸರ್ಕಾರ ವಿನಂತಿಸಿಕೊಂಡಿದೆ. ನಿಯಂತ್ರಕ ಆಯೋಗಗಳಲ್ಲಿ 60 ಅಥವಾ 62 ಅಥವಾ ನಿವೃತ್ತಿಯ ನಂತರ ಸೇರುವ ವ್ಯಕ್ತಿಗಳು ಐದು ವರ್ಷಗಳ ಅವಧಿ ಪೂರ್ಣಗೊಳಿಸಲು ಸಾಧ್ಯ ವಾಗುವುದಿಲ್ಲ. ದೆಹಲಿಯ ಡಿಇಆರ್ಸಿಯಲ್ಲೂ ಇದೇ ಸಮಸ್ಯೆಯಿದೆ ಎಂದು ತಿಳಿಸಿದೆ.
ಅಧಿಕಾರಿಗಳ ಅಸಹಕಾರ ಆರೋಪ ತಿರಸ್ಕಾರ
ದೆಹಲಿಯಲ್ಲಿ ನೀತಿಗಳು ಮತ್ತು ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಯಾವುದೇ ಸಹಕಾರ ನೀಡುತ್ತಿಲ್ಲ ಎಂಬ ದೆಹಲಿ ಸರ್ಕಾರದ ದೂರಿನಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಹೇಳಿದೆ. ಸಚಿವ ಮನೀಷ್ ಸಿಸೋಡಿಯಾ ಈ ಅಫಿಡವಿಟ್ ಸಲ್ಲಿಸಿದ್ದು, ದೆಹಲಿಯ ಅಧಿಕಾರಿಗಳು ಆಪ್ ಸರ್ಕಾರದೊಂದಿಗೆ ಸಹಕರಿಸುತ್ತಿಲ್ಲ. ಇದರಿಂದ ಚುನಾಯಿತ ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಅನುಷ್ಠಾನ ಸ್ಥಗಿತಗೊಂಡಿದೆ ಎಂದು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಅಫಿಡವಿಟ್ ಮೂಲಕ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಸಹಕಾರ ನೀಡದಿರುವ ಪ್ರತಿ ಘಟನೆಗಳ ವಿವರವನ್ನು ಸಚಿವರು ಸಲ್ಲಿಸಬಹುದಿತ್ತು. ದೆಹಲಿ ಡಿಸಿಎಂ ಅಫಿಡವಿಟ್ ಸಲ್ಲಿಸಿದ್ದು, ಟೆಲಿಕಾಲ್ ಇತ್ಯಾದಿಗಳನ್ನು ಸ್ವೀಕರಿಸದಿರುವ ಬಗ್ಗೆ ನಾನು ಸಂಬಂಧಪಟ್ಟ ಎಲ್ಲಾ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಶೀಲಿಸಿದ್ದೇನೆ. ಇಂಥಾ ಯಾವುದೇ ಘಟನೆ ನಡೆದಿಲ್ಲ. ಕೆಲ ಸಂದರ್ಭ ಹೊರತುಪಡಿಸಿ ಅಧಿಕಾರಿಗಳು ಎಲ್ಲಾ ಸಭೆಗಳಿಗೆ ಹಾಜರಾಗಿದ್ದಾರೆ ಎಂದು ಉತ್ತರಿಸಿದ್ದಾರೆ.
ಎಎಪಿ ಸಚಿವರು ಕರೆದ ಸಭೆಗಳಿಗೆ ಅಧಿಕಾರಿಗಳು ಹಾಜರಾಗುವುದನ್ನು ನಿಲ್ಲಿಸಿದ್ದಾರೆ ಮತ್ತು ಮಂತ್ರಿಗಳ ಫೋನ್ ಕರೆಗಳಿಗೆ ಉತ್ತರ ಬರುವುದಿಲ್ಲ. ಪ್ರಸ್ತುತ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರ ನೇಮಕದಿಂದ ಈ ಸಮಸ್ಯೆಗಳು ಹೆಚ್ಚು ತೀವ್ರವಾಗಿವೆ ಎಂದು ಸಿಸೋಡಿಯಾ ಅಫಿಡವಿಟ್ ನಲ್ಲಿ ದೂರಿದ್ದಾರೆ.
ವಿಸõತ ಪೀಠಕ್ಕೆ ವರ್ಗಾಯಿಸಲು ಮನವಿ
ರಾಷ್ಟ್ರ ರಾಜಧಾನಿಯ ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ಸಾಂವಿಧಾನಿಕ ಸಮಸ್ಯೆ ಒಳಗೊಂಡಿರುವ ವಿಷಯಗಳನ್ನು ಒಂಬತ್ತು ಅಥವಾ ಅದಕ್ಕಿಂತ ಹೆಚ್ಚಿನ ನ್ಯಾಯಾಧೀಶರ ವಿಸõತ ಪೀಠಕ್ಕೆ ಕಳುಹಿಸುವಂತೆ ಕೋರಿ ಕೇಂದ್ರ ಸರ್ಕಾರ ಹೊಸ ಅರ್ಜಿ ಸಲ್ಲಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ಕೇಂದ್ರದ ಈ ಮನವಿಯನ್ನು ವಿರೋಧಿಸಿ ವಾದಿಸಿದ ವಕೀಲ ಅಭಿಷೇಕ್ ಸಿಂಘಿ, ಇದು ಮತ್ತಷ್ಟು ವಿಳಂಬ ಮಾಡುತ್ತದೆ. ಕೇಂದ್ರದ ಇಂತಹ ತಂತ್ರಗಳಿಗೆ ಅನುಮತಿಸಬಾರದು ಎಂದು ಹೇಳಿದ್ದಾರೆ. ಕೇಂದ್ರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಯಾವುದೇ ಸತ್ಯಾಂಶಗಳನ್ನು ಮುಚ್ಚಿಡುತ್ತಿಲ್ಲ. ಈ ವಿಷಯವನ್ನು ವಿಸõತ ನ್ಯಾಯಪೀಠಕ್ಕೆ ಕಳುಹಿಸಬೇಕು ಎನ್ನುವ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಡಿವೈ ಚಂದ್ರಚೂಡ್, ಸಾಂವಿಧಾನಿಕ ಪೀಠ ವಿಚಾರಣೆಗೆ ಕುಳಿತ ಸಂದರ್ಭದಲ್ಲಿ ಈ ಅರ್ಜಿ ಬಗ್ಗೆ ನಿರ್ಧರಿಸಬಹುದು. ಪೀಠದ ಐವರು ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾ. ಕೃಷ್ಣ ಮುರಾರಿ ಅಸ್ವಸ್ಥರಾಗಿದ್ದಾರೆ ಎಂದು ವಕೀಲರಿಗೆ ತಿಳಿಸಿದರು.