

Student Suicides: ಒಂದು ವರ್ಷದ ಅವಧಿಯಲ್ಲಿ ರಾಜಸ್ಥಾನದ ಕೋಟಾದಲ್ಲೇ 14 ವಿದ್ಯಾರ್ಥಿಗಳು ಮೃತಪಟ್ಟ ವರದಿ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದೆ. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ವಿಚಾರಣೆಯ ಭಾಗವಾಗಿ ನ್ಯಾಯಾಲಯ ಸರ್ಕಾರ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಪ್ರಶ್ನೆಗಳ ಸುರಿಮಳೆ ಹರಿಸಿದೆ.
ಕೇವಲ ಒಂದು ವರ್ಷದ ಅವಧಿಯಲ್ಲಿ 14 ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ ಎಂದು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠವು ತಿಳಿಸಿತು. ಇದೊಂದು ಗಂಭೀರ ಸಮಸ್ಯೆ. ಇಲ್ಲಿ ಸರ್ಕಾರ ಮಾಡುತ್ತಿರುವುದೇನು? ಕೋಟಾದಲ್ಲೇ ಏಕೆ ವಿದ್ಯಾರ್ಥಿಗಳು ಸರಣಿ ರೂಪದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿದ ರಾಜಸ್ಥಾನ ಸರ್ಕಾರ ಪರ ವಕೀಲರು, ಆತ್ಮಹತ್ಯೆ ಪ್ರಕರಣಗಳನ್ನು ಪರಿಶೀಲಿಸಲು ರಾಜ್ಯದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿದೆ. ಖರಗ್‌ಪುರದ ಐಐಟಿ ವಿದ್ಯಾರ್ಥಿನಿಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮೇ.8ರಂದು 4 ದಿನಗಳ ನಂತರ ಎಫ್‌ಐಆರ್ ದಾಖಲಾಗಿದ್ದು ಸೇರಿದಂತೆ ಹಲವು ವಿಷಯಗಳನ್ನು ಉಲ್ಲೇಖಿಸಿದ ಪೀಠ, ಯಾವುದನ್ನೂ ಬಹಳ ಹಗುರವಾಗಿ ಪರಿಗಣಿಸುವಂತಿಲ್ಲ ಎಂದು ರಾಜ್ಯದ ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತು,(ಏಜೆನ್ಸೀಸ್).