

ನವದೆಹಲಿ: ಹಿಂದೂ ದೇವತೆಗಳ ಮೇಲೆ ಅವಮಾನಕಾರಿ ಮಾತುಗಳನ್ನಾಡಿದ ಆರೋಪ ಎದುರಿಸುತ್ತಿರುವ ಸ್ಟಾಂಡ್ಅಪ್ ಕಾಮೆಡಿಯನ್ ಮುನಾವರ್ ಫಾರುಖಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿರುವ ಫಾರುಖಿ ಸಲ್ಲಿಸಿರುವ ರಿಟ್ ಅರ್ಜಿಯ ಮೇಲೆ ನ್ಯಾಯಾಲಯ ಮಧ್ಯಪ್ರದೇಶ ಸರ್ಕಾರಕ್ಕೆ ನೋಟೀಸು ಜಾರಿ ಮಾಡಿದೆ.
ಫಾರುಖಿ ಮೇಲೆ ಕೋಮುಸಾಹರ್ದತೆಗೆ ಧಕ್ಕೆ ತರುವ ಉದ್ದೇಶದಿಂದ ಹಿಂದೂ ದೇವತೆಗಳ ಮೇಲೆ ಅವಮಾನಕಾರಿ ಮಾತುಗಳನ್ನು ಆಡಿದ ಆರೋಪವಿದೆ. ಹೊಸ ವರ್ಷದ ದಿನ ಇಂದೋರಿನ ರೆಸ್ಟೋರೆಂಟಲ್ಲಿ ನಡೆದ ಫಾರುಖಿಯ ಕಾಮೆಡಿ ಶೋಗೆ ಸಂಬಂಧಪಟ್ಟಂತೆ ಜನವರಿ 2 ರಂದು ಫಾರುಖಿ ಮತ್ತು ಇತರ ನಾಲ್ವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದರು.
ಫಾರುಖಿ ಅವರ ಜಾಮೀನು ಅರ್ಜಿಯನ್ನು ಮೊದಲು ಸೆಷನ್ಸ್ ನ್ಯಾಯಾಲಯ ನಿರಾಕರಿಸಿದ್ದು, ನಂತರ ಜನವರಿ 28 ಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಕೂಡ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಫಾರುಖಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಫಾರುಖಿಗೆ ಮಧ್ಯಂತರ ಜಾಮೀನು ನೀಡಿದೆ. ಉತ್ತರ ಪ್ರದೇಶ ಪೊಲೀಸರಿಗೆ ಸಲ್ಲಿಸಲಾಗಿರುವ ಮತ್ತೊಂದು ದೂರಿನ ಮೇಲೆ ಫಾರುಖಿ ವಿರುದ್ಧ ಜಾರಿಯಾಗಿರುವ ಪ್ರೊಡಕ್ಷನ್ ವಾರಂಟ್ಗೆ ಕೂಡ ಕೋರ್ಟ್ ತಡೆ ನೀಡಿದೆ.
ಈ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಫಾರುಖಿ ವಕೀಲರ ವಾದವನ್ನು ಕೇಳಿದ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಮತ್ತು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು, ಮಧ್ಯಪ್ರದೇಶ ಸರ್ಕಾರಕ್ಕೆ ನೋಟೀಸು ಜಾರಿ ಮಾಡಿದೆ.(ಏಜೆನ್ಸೀಸ್)