ಚುನಾವಣಾ ಪ್ರಚಾರದಲ್ಲಿನ Freebies ಸಂಸ್ಕೃತಿಗೆ ಸುಪ್ರೀಂಕೋರ್ಟ್ ಅಸಮಾಧಾನ; ನ್ಯಾಯಾಲಯ ಹೇಳಿದಿಷ್ಟು..

Untitled design (26)
Published on

ನವದೆಹಲಿ: ಚುನಾವಣೆಗೆ ಮುನ್ನ ಉಚಿತ ಯೋಜನೆಗಳನ್ನು(Freebies) ಘೋಷಿಸುವ ಪದ್ಧತಿಯನ್ನು ಸುಪ್ರೀಂಕೋರ್ಟ್ ಬುಧವಾರ(ಫೆಬ್ರವರಿ 12) ಖಂಡಿಸಿದೆ. ಜನರು ಉಚಿತ ಪಡಿತರ ಮತ್ತು ಹಣವನ್ನು ಪಡೆಯುತ್ತಿರುವುದರಿಂದ ಕೆಲಸ ಮಾಡಲು ಸಿದ್ಧರಿಲ್ಲ ಎಂದು ಹೇಳಿದೆ.

ನಗರ ಪ್ರದೇಶಗಳಲ್ಲಿ ನಿರಾಶ್ರಿತ ವ್ಯಕ್ತಿಗಳ ಆಶ್ರಯ ಹಕ್ಕಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ಈ ಅಭಿಪ್ರಾಯವನ್ನು ನೀಡಿದೆ.

ದುರದೃಷ್ಟವಶಾತ್ ಈ ಉಚಿತ ಸೌಲಭ್ಯಗಳಿಂದಾಗಿ ಜನರು ಕೆಲಸ ಮಾಡಲು ಸಿದ್ಧರಿಲ್ಲ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು. ಅವರಿಗೆ ಉಚಿತ ಪಡಿತರ ಸಿಗುತ್ತಿದೆ. ಅವರು ಯಾವುದೇ ಕೆಲಸ ಮಾಡದೆ ಹಣ ಪಡೆಯುತ್ತಿದ್ದಾರೆ. ಅವರ ಬಗ್ಗೆ ನಿಮಗಿರುವ ಕಾಳಜಿಯನ್ನು ನಾವು ಮೆಚ್ಚುತ್ತೇವೆ, ಆದರೆ ಅವರನ್ನು ಮುಖ್ಯವಾಹಿನಿಯ ಸಮಾಜದ ಭಾಗವನ್ನಾಗಿ ಮಾಡಿ ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು ಅವಕಾಶ ನೀಡುವುದು ಉತ್ತಮವಲ್ಲವೇ? ಎಂದು ತಿಳಿಸಿದರು.

ನಗರ ಬಡತನ ನಿರ್ಮೂಲನಾ ಅಭಿಯಾನವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರ ತೊಡಗಿದೆ ಎಂದು ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಪೀಠಕ್ಕೆ ತಿಳಿಸಿದರು. ಈ ಅಭಿಯಾನವು ನಗರ ಪ್ರದೇಶದ ನಿರಾಶ್ರಿತರಿಗೆ ವಸತಿ ಒದಗಿಸುವುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲಿದೆ. ನಗರ ಬಡತನ ನಿರ್ಮೂಲನಾ ಅಭಿಯಾನವನ್ನು ಎಷ್ಟು ಸಮಯದೊಳಗೆ ಜಾರಿಗೆ ತರಲಾಗುವುದು ಎಂಬುದನ್ನು ಕೇಂದ್ರ ಸರ್ಕಾರ ಪರಿಶೀಲಿಸುವಂತೆ ನ್ಯಾಯಪೀಠವು ಅಟಾರ್ನಿ ಜನರಲ್ ಅವರನ್ನು ಕೇಳಿತು. ಬಳಿಕ ಸುಪ್ರೀಂ ಕೋರ್ಟ್ ಆರು ವಾರಗಳ ನಂತರ ಇದರ ವಿಚಾರಣೆ ನಡೆಸುವುದಾಗಿ ತಿಳಿಸಿತು. (ಏಜೆನ್ಸೀಸ್​​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net