ಪಾಲಿಕೆ ನೌಕರರ ಮಷ್ಕರಕ್ಕೆ ಷಡಾಕ್ಷರಿ ಬೆಂಬಲ

palike
Published on

ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ 10 ನಗರ ಪಾಲಿಕೆ ನೌಕರರು ಮಂಗಳವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಶಿವಮೊಗ್ಗ ಪಾಲಿಕೆ ಆವರಣದಲ್ಲಿ ನೌಕರರು ನಡೆಸುತ್ತಿದ್ದ ಮುಷ್ಕರದಲ್ಲಿ ಪಾಲ್ಗೊಂಡ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ಇವುಗಳನ್ನು ಈಡೇರಿಸುವುದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಈಗಾಗಲೇ ನಾನು ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತನಾಡಿದ್ದೇನೆ. ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದ್ದು ಬಹುತೇಕ ಸಮಸ್ಯೆ ಬಗೆಹರಿಯುವ ಲಕ್ಷಣಗಳು ಕಾಣುತ್ತಿದೆ ಎಂದರು.

7ನೇ ವೇತನ ಆಯೋಗದ ಸೌಲಭ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿರುವಂತೆ ಪಾಲಿಕೆ ನೌಕರರಿಗೆ ಯಥಾವತ್ತಾಗಿ ಸರ್ಕಾರ ಆರ್ಥಿಕ ಇಲಾಖೆಯಿಂದಲೇ ಅನುದಾನ ಬಿಡುಗಡೆ ಮಾಡಬೇಕು. ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳ ತಿದ್ದುಪಡಿ ಮಾಡಿ ಕರಡು ಅಧಿಸೂಚನೆಯನ್ನು ಪ್ರಕಟಿಸಬೇಕು ಎಂಬುದು ಇವರ ಬೇಡಿಕೆ ಎಂದು ಹೇಳಿದರು.

ಆರೋಗ್ಯ ಸಂಜೀವಿನಿ ಯೋಜನೆಯನ್ನು ಪೌರಕಾರ್ಮಿಕರಿಗೂ ಜಾರಿಗೊಳಿಸಬೇಕು. ಮುಂಬಡ್ತಿ ವಂಚಿತರಾಗಿರುವ ಪಾಲಿಕೆ ನೌಕರರಿಗೆ ವೃಂದವಾರು ಮುಂಬಡ್ತಿ ನೀಡಬೇಕು ಎಂಬ ಬೇಡಿಕೆಗಳು ಸರಳ ಮತ್ತು ಸಹಜ. ಈ ಬೇಡಿಕೆ ಈಡೇರಿಸುವುದು ಸರ್ಕಾರಕ್ಕೆ ಕಷ್ಟವಾಗುವುದಿಲ್ಲ ಎಂದರು.

ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಮುಷ್ಕರ ನಿರತರಿದ್ದ ಸ್ಥಳಕ್ಕೆ ಬಂದು ಸರ್ಕಾರಕ್ಕೆ ಮುಷ್ಕರದ ಬಗ್ಗೆ ಮಾಹಿತಿ ನೀಡಿದ್ದೇನೆ ಎಂದರು. ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳಾದ ಪಿ.ಕುಮಾರ್, ಎಸ್.ಜಿ.ಮಂಜಣ್ಣ, ಡಿ.ಮೋಹನ್, ಜುಬೇದುಲ್ಲಾ, ಲೋಹಿತ್, ತುಷಾರ್ ಬಿ.ಹೊಸೂರು, ಡಿ.ನಾಗೇಂದ್ರ, ವಿಕಾಸ್, ನಾಗೇಶ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net