

| ದೇವರಾಜ್ ಎಲ್. ಬೆಂಗಳೂರು
ಕರೊನಾ ಶಂಕಿತರು, ವಲಸೆ ಕಾರ್ವಿುಕರ ಮಕ್ಕಳು, ಕ್ವಾರಂಟೈನ್ನಲ್ಲಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿದರೆ, ಪೂರಕ ಪರೀಕ್ಷೆಯಲ್ಲಿ ‘ಪ್ರಥಮ ಅವಕಾಶ’ ಎಂದು ಪರಿಗಣಿಸಿ ಪರೀಕ್ಷೆಗೆ ಅವಕಾಶ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಜೂ.25ರಿಂದ ಜು.4ರವರೆಗೆ 2020ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಮಾಣಿತ ಎಸ್ಒಪಿ ಬಿಡುಗಡೆ ಮಾಡಿದೆ. ಇದರಲ್ಲಿ ಏನೆಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಅನುಸರಿಸಬೇಕಾದ ಮಾರ್ಗಸೂಚಿಯನ್ನು ಸ್ಪಷ್ಟವಾಗಿ ತಿಳಿಸಿದೆ. ಆ ಪ್ರಕಾರವಾಗಿ ಜೂ.22ರ ನಂತರ ಅಥವಾ ಪರೀಕ್ಷೆ ಶುರುವಾದ ಬಳಿಕ ಯಾವುದೇ ಪರೀಕ್ಷಾ ಕೇಂದ್ರ ಕಂಟೇನ್ಮೆಂಟ್ ವಲಯದೊಳಗೆ ಬಂದರೆ ತಕ್ಷಣ ಪರೀಕ್ಷಾ ಕೇಂದ್ರ ಬದಲಿಸಬೇಕು. ಇಲ್ಲವಾದರೆ, ಆ ಎಲ್ಲ ವಿದ್ಯಾರ್ಥಿಗಳಿಗೆ ಬಾಕಿ ಪರೀಕ್ಷೆ ಬರೆಯಲು ಪೂರಕ ಪರೀಕ್ಷೆ ವೇಳೆ ಅವಕಾಶ ಕಲ್ಪಿಸಲು ಮಂಡಳಿ ನಿರ್ಧರಿಸಿದೆ. ಅಂಥ ವಿದ್ಯಾರ್ಥಿಗಳನ್ನು ಪುನರಾವರ್ತಿತ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸೇರಿಸದೇ ‘ಪ್ರಥಮ ಅವಕಾಶ’ ಎಂಬ ಪಟ್ಟಿಗೆ ಸೇರಿಸಿ ಪರೀಕ್ಷೆಗೆ ಅವಕಾಶ ನೀಡಲಿದೆ. ಈಗಾಗಲೇ 12 ಸಾವಿರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಿಗೆ ಕೋರಿದ್ದಾರೆ.
ಜೀಪ್ ವ್ಯವಸ್ಥೆ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಈಗಾಗಲೇ ಮಂಡಳಿಯು ಆಯಾ ಶಿಕ್ಷಕರಿಗೆ ನೀಡಿದ್ದು, ಮಲೆನಾಡಿನ ಪ್ರದೇಶಗಳಲ್ಲಿ ಬಸ್ ಬದಲು ‘ಜೀಪ್ ಅಥವಾ ಫೋರ್ ವೀಲ್ ಡ್ರೖೆವ್’ ಬಳಕೆ ಮಾಡಿ ಸಾರಿಗೆ ವ್ಯವಸ್ಥೆ ಮಾಡುವಂತೆ ಇಲಾಖೆಯು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ. ಸರ್ಕಾರಿ ಬಸ್ಸುಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಖಾಸಗಿ ಬಸ್ಸುಗಳ ವ್ಯವಸ್ಥೆ ಮಾಡಬಹುದಾಗಿದೆ. ಇದನ್ನೂ ಓದಿ: 10 ಸಾವಿರ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಪರೀಕ್ಷಾ ಕೇಂದ್ರ ಸ್ವಚ್ಛತೆ: ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ 2,847 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿದೆ. ಈ ಎಲ್ಲ ಕೇಂದ್ರಗಳಿಗೂ ಪರೀಕ್ಷೆ ನಡೆಯುವ ಮೂರು ದಿನ ಮೊದಲೇ ಹಾಗೂ ಪರೀಕ್ಷೆ ನಂತರವೂ ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಪರೀಕ್ಷಾ ಕೊಠಡಿಯನ್ನು ವಿದ್ಯಾರ್ಥಿಗಳಿಗೆ ಮೊದಲೇ ತಿಳಿಸಬೇಕು. ಆ ಮೂಲಕ ಗುಂಪುಗಾರಿಕೆಯನ್ನು ತಡೆಯಲು ಸಹಕರಿಸಬೇಕು. ಮಲೆನಾಡಿನ ಮಳೆ ಬಂದಾಗ ಒಂದು ಡೆಸ್ಕ್ ಅನ್ನು ಒಬ್ಬರಿಗೆ ನೀಡಬೇಕು. ಪರೀಕ್ಷಾ ಕೇಂದ್ರವನ್ನು ಕ್ವಾರಂಟೈನ್ ಕೇಂದ್ರವನ್ನಾಗಿ ಬಳಸಲು ನೀಡಬಾರದು.
ಕಾಯ್ದಿರಿಸಿದ ಪರೀಕ್ಷಾ ಕೇಂದ್ರ: ಪ್ರತಿ ತಾಲೂಕಿನ ಕೇಂದ್ರ ಸ್ಥಾನ ಮತ್ತು ಜಿಲ್ಲಾ ಕೇಂದ್ರಗಳ ಸ್ಥಾನದಲ್ಲಿ ಕನಿಷ್ಠ ಎರಡು ಹೆಚ್ಚುವರಿ ಪರೀಕ್ಷಾ ಕೇಂದ್ರ ಗುರುತಿಸಿ ಅದಕ್ಕೆ ‘ಕಾಯ್ದಿರಿಸಿದ ಪರೀಕ್ಷಾ ಕೇಂದ್ರ’ವೆಂದು ನಾಮಕರಣ ಮಾಡಬೇಕು. ಹೊರ ರಾಜ್ಯದಿಂದ ಬರುವ ಅಥವಾ ನೆಗಡಿ, ಕೆಮ್ಮು, ಶೀತವಿರುವ ವಿದ್ಯಾರ್ಥಿಗಳಿಗೆ ಈ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗೆ ಅವಕಾಶ ಕಲ್ಪಿಸಬೇಕು. ಇದನ್ನೂ ಓದಿ: 2019ರ ಜೂನ್ 7ರಂದು ಮೇಘನಾ ಹಾಕಿದ್ದ ಇನ್ಸ್ಟಾಗ್ರಾಂ ಪೋಸ್ಟ್ನ್ನು ಈ ಜೂ.7ರಂದು ಕ್ರೂರ ವಿಧಿ ನಿಜ ಮಾಡಿತು…
ಆರೋಗ್ಯ ತಪಾಸಣಾ ಕೇಂದ್ರ: ಪರೀಕ್ಷಾ ಕೇಂದ್ರದ ಮುಂದೆ ಪ್ರವೇಶ ದ್ವಾರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಚೌಕಟ್ಟು ನಿರ್ವಿುಸಬೇಕು. ವಿದ್ಯಾರ್ಥಿಗಳು ಆ ಚೌಕಟ್ಟನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. 200 ಮಕ್ಕಳಿಗೆ ಒಂದರಂತೆ ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪಿಸಿರಬೇಕು. ಇಲ್ಲಿ ಇಬ್ಬರು ಅರೆ ವೈದ್ಯಕೀಯ ಸಿಬ್ಬಂದಿ ಪಡೆಯಬೇಕು, ಥರ್ಮಲ್ ಸ್ಕ್ಯಾನರ್, ಪ್ರಥಮ ಚಿಕಿತ್ಸಾ ಪಟ್ಟಿ ಇರಬೇಕು.