10 ಸಾವಿರ ವಿದ್ಯಾರ್ಥಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

MBL-14-2
Published on

ಮುದ್ದೇಬಿಹಾಳ : ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ಪುತ್ರ ಯುವ ಉದ್ಯಮಿ ಭರತ್ ಪಾಟೀಲ(ನಡಹಳ್ಳಿ) ಹಾಗೂ ಅವರ ಸ್ನೇಹಿತ ವಿಶಾಲ ನಿರಾಣಿ ಆಶಯದಂತೆ ಜೂ.18 ರಂದು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಉಚಿತ ಮಾಸ್ಕ್ ಹಾಗೂ ಸ್ಯಾನಿಟೈಸರ್‌ನ್ನು ಭಾನುವಾರ ಡಿಡಿಪಿಯು ಆರ್.ಎ. ಜಹಾಗೀರದಾರ ಅವರಿಗೆ ಹಸ್ತಾಂತರಿಸಲಾಯಿತು.

ಪಟ್ಟಣದ ದಾಸೋಹ ನಿಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ನಿರಾತಂಕದಿಂದ ಕೇಂದ್ರಕ್ಕೆ ಆಗಮಿಸಿ ಪರೀಕ್ಷೆ ಬರೆದು ಭವಿಷ್ಯ ನಿರ್ಮಿಸಿಕೊಳ್ಳಲು ಮುಂದಾಗಬೇಕೆಂಬ ಉದ್ದೇಶದಿಂದ ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗುತ್ತಿದೆ ಎಂದರು.

ಡಿಡಿಪಿಯು ಆರ್.ಎ. ಜಹಾಗೀರದಾರ ಮಾತನಾಡಿ, ಸಂಕಷ್ಟದ ಸಮಯದಲ್ಲಿ ಸರ್ಕಾರಿ, ಖಾಸಗಿ ಎನ್ನದೆ ಮೂರು ತಾಲೂಕುಗಳ ವಿದ್ಯಾರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸುತ್ತಿರುವುದು ಶಾಸಕರ ದೊಡ್ಡ ಗುಣ ಎಂದರು.
ಅಧೀಕ್ಷಕ ಪ್ರಕಾಶ ಗೊಂಗಡಿ, ಪ್ರಾಚಾರ್ಯರ ಮಹಾಮಂಡಳದ ಅಧ್ಯಕ್ಷ ಎಸ್.ಎಸ್. ಹೊಸಮನಿ, ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ಡಿ.ಬಿ. ವಡವಡಗಿ ಮಾತನಾಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಅಂಗಡಿ, ಮುಖಂಡ ಎಸ್.ಬಿ. ಚಲವಾದಿ, ಯುವ ಉದ್ಯಮಿ ಭರತ್ ಪಾಟೀಲ ನಡಹಳ್ಳಿ ಇದ್ದರು.

ಮುದ್ದೇಬಿಹಾಳ, ಬ.ಬಾಗೇವಾಡಿ, ಸಿಂದಗಿ ತಾಲೂಕಿನ ಒಟ್ಟು 9908 ವಿದ್ಯಾರ್ಥಿಗಳು ಹಾಗೂ ಪರೀಕ್ಷೆ ಕಾರ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿ ಸೇರಿ 10,500 ಮಾಸ್ಕ್, ಸ್ಯಾನಿಟೈಸರ್ ಕಿಟ್‌ಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net