

ಜಲಜೀವನ ಮಿಷನ್ ವಿಸ್ತರಣೆಯಿಂದ ಗ್ರಾಮೀಣ ಜನರಿಗೆ ಕುಡಿಯುವ ಶುದ್ಧ ನೀರು ಸಿಕ್ಕುತ್ತದೆ. ಹಾಲು ಉತ್ಪಾದಕರ ಆದಾಯ ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ. ಹೈನೋದ್ಯಮ ವನ್ನು ಅವಲಂಬಿಸಿದ ರೈತರಿಗೆ ಇದರಿಂದ ಅನುಕೂಲವಾಗುತ್ತದೆ. ಮೀನುಗಾರಿಕೆಗೆ ಪ್ರೋತ್ಸಾಹ ಇರುವುದು ಅದರ ಅವಲಂಬನೆ ಇರುವವರಿಗೆ ಅನುಕೂಲವಾಗಿದೆ. ಪರಿಶಿಷ್ಟರು, ಹಿಂದುಳಿದವರು ಸೇರಿ ದುರ್ಬಲ ವರ್ಗಗಳಿರುವುದು ಗ್ರಾಮೀಣ ಭಾಗದಲ್ಲಿಯೇ ಆ ವರ್ಗಗಳನ್ನು ಬೊಮ್ಮಾಯಿ ಮರೆತಿಲ್ಲ. ಅವರೆಲ್ಲರ ಅಭ್ಯುದಯಕ್ಕೆ ಯೋಜನೆಗಳ ಜತೆಗೆ ಕೆಲವೊಂದು ಪಿಂಚಣಿ ಹೆಚ್ಚಳ ಮಾಡಿರುವುದು ಸ್ವಲ್ಪ ಮಟ್ಟಿನ ಅನುಕೂಲವಾಗಿದೆ. ಕೆಲವು ಕ್ಲಸ್ಟರ್ಗಳ ಅಭಿವೃದ್ಧಿ, ಕೈಗಾರಿಕಾ ಕಾರಿಡಾರ್ಗಳಿಂದಾಗಿ ಆ ಭಾಗದ ಗ್ರಾಮೀಣ ಜನರಿಗೆ ಉದ್ಯೋಗದ ಅವಕಾಶಗಳು ಲಬ್ಯವಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಿರುವ ರೇಷ್ಮೆಗೆ ನೀಡುತ್ತಿರುವ ಪ್ರೋತ್ಸಾಹದಿಂದ ಗ್ರಾಮೀಣ ಭಾಗದಲ್ಲಿ ರೈತರ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತವೆ. ಮಹಿಳೆಯರನ್ನು ಸರ್ಕಾರ ಮರೆತಿಲ್ಲ. ಮಹಿಳಾ ಸ್ವಸಹಾಯ ಸಂಘಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ಸರ್ಕಾರ ಮುಖ್ಯವಾಗಿ ಅಪೌಷ್ಠಿಕತೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳಿಂದ ಗ್ರಾಮೀಣ ಭಾಗದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅನುಕೂಲವಾಗುತ್ತದೆ. ಒಟ್ಟಾರೆ ಎಲ್ಲ ವರ್ಗಗಳನ್ನು ಸಮಾಧಾನ ಮಾಡುವ ರೀತಿಯಲ್ಲಿ ಬಜೆಟ್ ರೂಪುಗೊಂಡಿದೆ. ಗ್ರಾಮೀಣ ಅಭಿವೃದ್ಧಿಯ ಯೋಜನೆಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಜಾರಿ ಮಾಡಬೇಕು ಅಷ್ಟೇ.