ಇನ್ನೆರಡು ವರ್ಷದಲ್ಲಿ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಆರಂಭ

lifeline feeds
ಲೈಫ್‌ಲೈನ್ ಫೀಡ್ಸ್ ಸಂಸ್ಥೆಯಿಂದ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ನವೀಕೃತ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ, ಸಂಸ್ಥೆ ಸಂಸ್ಥಾಪಕ ಕಿಶೋರ್‌ಕುಮಾರ್ ಹೆಗ್ಡೆ, ಡಾ. ಮೋಹನ್‌ಕುಮಾರ್ ಇತರರಿದ್ದರು.
Published on

ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಿಗೆ ಕೀಳರಿಮೆ ಮತ್ತೆ ಅಸಡ್ಡೆ ಬಾರದಂತೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ನಗರದ ಜಿಲ್ಲಾಸ್ಪತ್ರೆಗೆ ಲೈಫ್‌ಲೈನ್ ಫೀಡ್ಸ್ ಸಂಸ್ಥೆಯಿಂದ ನೀಡಲಾದ 10 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 170 ಕೋಟಿ ರೂ. ವೆಚ್ಚದ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಸರ್ಕಾರಿ ಆಸ್ಪತ್ರೆ ಇನ್ನೆರಡು ವರ್ಷಗಳಲ್ಲಿ ಆರಂಭವಾಗಲಿದೆ. ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು ಮೆರಿಟ್ ಆಧಾರದ ಮೇಲೆ ನೇಮಕವಾಗಿ ಬಂದಿರುವುದರಿಂದ ಸಾರ್ವಜನಿಕರು ಅವರಲ್ಲಿ ನಂಬಿಕೆಯನ್ನಿಟ್ಟು ಚಿಕಿತ್ಸೆ ಪಡೆಯುವಂತಾಗಬೇಕು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಮೆಡಿಕಲ್ ಕಾಲೇಜಿಗೆ ಬಸ್ ಕೊಡುಗೆ ನೀಡಿರುವ ಲೈಫ್‌ಲೈನ್ ಸಂಸ್ಥೆ ಬಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಲ್ಕದ ವೆಚ್ಚ ಭರಿಸಲೂ ಮುಂದೆ ಬಂದಿದೆ ಎಂದು ಶ್ಲಾಘಿಸಿದರು.
ದೇವರು ಶ್ರೀಮಂತಿಕೆ ಕೊಡುತ್ತಾನೆ. ಆದರೆ ಎಲ್ಲರ ಮನಸ್ಸು ಶ್ರೀಮಂತವಾಗಿರುವುದಿಲ್ಲ. ಈ ಎರಡನ್ನೂ ಲೈಫ್‌ಲೈನ್ ಫೀಡ್ಸ್‌ನ ಕಿಶೋರ್‌ಕುಮಾರ್ ಹೆಗ್ಡೆ ಅವರಿಗೆ ದೇವರು ಕೊಟ್ಟಿದ್ದಾನೆ. ಇದೇ ಕಾರಣಕ್ಕೆ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅತಿ ಹೆಚ್ಚು ಆರ್ಥಿಕ ನೆರವು ನೀಡುವ ಮೂಲಕ ಬಡವರಿಗೆ ಅನುಕೂಲ ಒದಗಿಸುತ್ತಿದ್ದಾರೆ ಎಂದರು.
ಐಡಿಎಸ್‌ಜಿ ಪ್ರಥಮದರ್ಜೆ ಸರ್ಕಾರಿ ಕಾಲೇಜಿಗೆ 50 ಲಕ್ಷ ರೂ. ವೆಚ್ಚದಲ್ಲಿ ಡೆಸ್ಕ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸರ್ಕಾರಕ್ಕೆ ಸಮಾನಾಂತರವಾಗಿ ಹಲವಾರು ಮಠಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ತಮ್ಮದೇ ಆದ ಸೇವೆ ಸಲ್ಲಿಸುತ್ತಿವೆ. ಅದೇ ರೀತಿ ಈ ಸಂಸ್ಥೆಯೂ ಸಾರ್ವಜನಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಲೈಫ್‌ಲೈನ್ ಫೀಡ್ಸ್ ಸಂಸ್ಥೆ ಸಂಸ್ಥಾಪಕ ಕಿಶೋರ್‌ಕುಮಾರ್ ಹೆಗ್ಡೆ ಮಾತನಾಡಿ, ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಕಣ್ಣಿನ ಆಸ್ಪತ್ರೆ ಕಟ್ಟಡವನ್ನು 30 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನಾಗಿ ರೂಪಿಸಲು ನೆರವು ನೀಡಲು ಸಿದ್ಧವಾಗಿದ್ದೇವೆ. ಇದರಿಂದ ಬಡ ಜನರಿಗೆ, ಕಷ್ಟದಲ್ಲಿರುವವರಿಗೆ ತುಂಬ ಸಹಾಯವಾಗುತ್ತದೆ ಎಂದರು.
ಜಿಲ್ಲಾ ಸರ್ಜನ್ ಡಾ. ಮೋಹನ್‌ಕುಮಾರ್ ಮಾತನಾಡಿ, ಹಾಲಿ ಇದ್ದ 44 ಮಂಚಗಳನ್ನು ದುರಸ್ತಿ ಮಾಡಿ, ಬಣ್ಣ ಬಳಿದು ವಾಪಸ್ ನೀಡಿದ್ದು ವಾರ್ಡ್‌ಗಳಲ್ಲಿ ಇಡಲಾಗಿದೆ. ಬೆಡ್‌ಸೈಡ್ ಲಾಕರ್ 85, ಗಾಡ್ರೇಜ್ ಬೀರು 3, ರ‌್ಯಾಕ್‌ಗಳು 11, 2 ವ್ಹೀಲ್‌ಚೇರ್, ಸ್ಟ್ರೆಕ್ಚರ್ಸ್‌ 3, ಲಗೇಜ್ ಫ್ಯಾನ್ 3, ಟ್ರೀಟ್‌ಮೆಂಟ್ ಸ್ಟಾೃಂಡ್ 2 ಸೇರಿ ಮುಂತಾದ ಉಪಕರಣಗಳನ್ನು ದುರಸ್ತಿ ಮಾಡಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
ಲೈಫ್‌ಲೈನ್ ಫೀಡ್ಸ್ ಸಂಸ್ಥೆ ಆಡಳಿತಾಧಿಕಾರಿ ಸುಬ್ರಹ್ಮಣ್ಯ, ಜನರಲ್ ಮ್ಯಾನೇಜರ್ ಗಣೇಶ್ ಕಾಮತ್, ಶಮಿ, ರವಿ, ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net