

ನವದೆಹಲಿ: ಬಾಲಿವುಡ್ ನಟ, ಗುರುದಾಸ್ಪುರ ಕ್ಷೇತ್ರದ ಬಿಜೆಪಿ ಸಂಸದ ಸನ್ನಿ ಡಿಯೋಲ್ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದ ಕಾರಣ ಅವರ ಮನೆಯನ್ನು ಹರಾಜಿಗಿಟ್ಟಿದ್ದ ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದಾರೆ.
2022ರಿಂದ ಬಾಕಿ ಉಳಿಸಿಕೊಂಡಿದ್ದ 56 ಕೋಟಿ ರೂಪಾಯಿ ಸಾಲದ ಮೊತ್ತ ವಸೂಲಿಗೆ ಸಂಬಂಧಿಸಿದಂತೆ ಮುಂಬೈನ ಜುಹು ಪ್ರದೇಶದಲ್ಲಿರುವ ನಟ ಸನ್ನಿ ಡಯೋಲ್ ಅವರ ಬಂಗಲೆಯನ್ನು ಹರಾಜಿಗೆ ಇಡಲಾಗಿತ್ತು. ಆಗಸ್ಟ್ 25ರಂದು ಹರಾಜು ಪ್ರಕ್ರಿಯೆ ನಡೆಸಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು.
ಇತ್ತ ಬ್ಯಾಂಕ್ನ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ, ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಬಿಜೆಪಿ ಸಂಸದ ಸನ್ನಿ ಡಿಯೋಲ್ ಬ್ಯಾಂಕ್ಗೆ 56 ಕೋಟಿ ರೂಪಾಯಿ ಸಾಲ ಮರುಪಾವತಿಸಿದ ಕಾರಣ ಅವರ ಮನೆಯನ್ನು ಹರಾಜಿಗೆ ಇಟ್ಟಿರುವ ವಿಚಾರ ಇಡೀ ದೇಶಕ್ಕೆ ತಿಳಿದಿತ್ತು. ಆದರೆ, ಈಗ ಯಾವ ಆಧಾರದ ಮೇಲೆ ನೋಟಿಸ್ ಹಿಂಪಡೆದಿದ್ದೀರಾ.
ಹರಾಜು ಹಾಕುವುದಾಗಿ ಆದೇಶ ಹೊರಡಿಸಿದ 24 ಘಂಟೆಗಳಲ್ಲಿ ತಾಂತ್ರಿಕ ದೋಷದ ಕಾರಣ ನೀಡಿ ನೋಟಿಸ್ ಹಿಂಪಡೆದಿದೆ. ಇದು ಯಾವ ರೀತಿಯ ನ್ಯಾಯ. ತಾಂತ್ರಿಕ ದೋಷ ಎಂದು ಹೇಳುವಂತೆ ಹಿಂದಿನಿಂದ ಯಾರು ಪ್ರಚೋದಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ, ರಾಜ್ಯಸಭೆ ಸದಸ್ಯ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.