ರಾಮಾಯಣ 2ರಲ್ಲಿ ಹನುಮಂತನಾಗಿ ಸನ್ನಿ ಡಿಯೋಲ್ ಅಬ್ಬರ; ಸಿನಿಮಾ ಬಗ್ಗೆ ಬಂತು ಬಿಗ್ ಅಪ್‌ಡೇಟ್! | Ramayana 2

Ramayana 2
'ರಾಮಾಯಣ 2'ರಲ್ಲಿ ಹನುಮಂತನಾಗಿ ಸನ್ನಿ ಡಿಯೋಲ್ ಭರ್ಜರಿ ಎಂಟ್ರಿ
Published on: 

Ramayana 2: ರಣಬೀರ್ ಕಪೂರ್, ಯಶ್ ಮತ್ತು ಸಾಯಿ ಪಲ್ಲವಿ ನಟನೆಯ 'ರಾಮಾಯಣ' ಮೊದಲ ಭಾಗ ನವೆಂಬರ್ 5ರಂದು ವಿಶ್ವಾದ್ಯಂತ ತೆರೆಕಂಡಿದೆ. ಸಿನಿಮಾದಲ್ಲಿ ಸನ್ನಿ ಡಿಯೋಲ್ ಅವರ ಹನುಮಂತನ ಪಾತ್ರದ ಸಣ್ಣ ಝಲಕ್ ಮಾತ್ರ ತೋರಿಸಲಾಗಿತ್ತು. ಇದೀಗ 'ರಾಮಾಯಣ 2'ರಲ್ಲಿ ಹನುಮಂತನ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಸಿನಿಮಾಟೋಗ್ರಾಫರ್ ಪಂಕಜ್ ಕುಮಾರ್ ಇಂಟರೆಸ್ಟಿಂಗ್ ಅಪ್‌ಡೇಟ್ ನೀಡಿದ್ದಾರೆ.

'ರಾಮಾಯಣ' ಸಿನಿಮಾದ ಸಿನಿಮಾಟೋಗ್ರಾಫರ್‌ಗಳಾದ ಪಂಕಜ್ ಕುಮಾರ್ ಮತ್ತು ಮಹೇಶ್ ಲಿಮಯೆ ಪೈಕಿ ಒಬ್ಬರಾದ ಪಂಕಜ್, ಎರಡನೇ ಭಾಗದಲ್ಲಿ ಹನುಮಂತನ ಹಲವು ಅದ್ಭುತ ದೃಶ್ಯಗಳನ್ನು ಈಗಾಗಲೇ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದ್ದಾರೆ. ಹನುಮಂತನ ಪಾತ್ರವನ್ನು ದೊಡ್ಡ ಪರದೆಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಅವರ ದೃಶ್ಯಗಳು ಅದ್ಭುತ ಅನುಭವ ನೀಡಲಿವೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ರಾಮಾಯಣ 2ರ ಪ್ರಮುಖ ಆಕರ್ಷಣೆ ಹನುಮಂತ

ಮೊದಲ ಭಾಗದಲ್ಲಿ ಸನ್ನಿ ಡಿಯೋಲ್ ಅವರ ಮುಖವನ್ನು ಪೂರ್ಣವಾಗಿ ತೋರಿಸದಿದ್ದಕ್ಕೆ ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೆ ಇದು ಚಿತ್ರತಂಡ ಮೊದಲಿನಿಂದಲೂ ಮಾಡಿಕೊಂಡಿದ್ದ ಯೋಜನೆ ಎಂದು ಪಂಕಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಸ್ಕ್ರಿಪ್ಟ್‌ನಲ್ಲೂ ಹನುಮಂತನ ಪಾತ್ರವನ್ನು ಸಣ್ಣ ದೃಶ್ಯದ ಮೂಲಕ ಪರಿಚಯಿಸುವಂತೆ ಬರೆಯಲಾಗಿತ್ತು. ಹಾಗಾಗಿಯೇ ಮೊದಲ ಭಾಗದ ಕೊನೆಯಲ್ಲಿ ಅಷ್ಟೇ ತೋರಿಸಲಾಗಿದೆ ಎಂದಿದ್ದಾರೆ.

ವಿಎಫ್‌ಎಕ್ಸ್ ಕೆಲಸ ಬಾಕಿ

ಇನ್ನು 'ರಾಮಾಯಣ 2' ಸಿನಿಮಾದ ಸುಮಾರು ಶೇ.60ರಷ್ಟು ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಆದರೆ ಎರಡನೇ ಭಾಗದಲ್ಲಿ ಮೊದಲ ಸಿನಿಮಾಕ್ಕಿಂತಲೂ ದೊಡ್ಡ ಮಟ್ಟದ ವಿಎಫ್‌ಎಕ್ಸ್, ಸಿಜಿಐ ಕೆಲಸಗಳು ಇರಲಿವೆ. ವಿಶೇಷವಾಗಿ ಹನುಮಂತ ಹಾಗೂ ಇಡೀ ವಾನರ ಸೇನೆಯ ದೃಶ್ಯಗಳಿಗೆ ಹೆಚ್ಚಿನ ಕಂಪ್ಯೂಟರ್ ಗ್ರಾಫಿಕ್ಸ್ ಬಳಸಲಾಗುತ್ತಿದೆ. ಮೋಷನ್ ಕ್ಯಾಪ್ಚರ್ ಮತ್ತು ವಿಎಫ್‌ಎಕ್ಸ್ ಕೆಲಸಗಳು ಇನ್ನೂ ಬಾಕಿ ಇವೆ ಎಂದು ಪಂಕಜ್ ಮಾಹಿತಿ ನೀಡಿದ್ದಾರೆ.

2028ರ ದೀಪಾವಳಿಗೆ 'ರಾಮಾಯಣ 2' ರಿಲೀಸ್​

ಹನುಮಂತನಂತಹ ಪಾತ್ರಗಳಿಗಾಗಿ ಕಲಾವಿದರು ವಿಶೇಷ ಸೆನ್ಸರ್ ಹೊಂದಿರುವ ಸೂಟ್‌ಗಳನ್ನು ಧರಿಸುತ್ತಾರೆ. ಅವರ ದೇಹದ ಚಲನವಲನಗಳನ್ನು ದಾಖಲಿಸಿ, ನಂತರ ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ ಅಂತಿಮ ಪಾತ್ರವನ್ನು ಸೃಷ್ಟಿಸಲಾಗುತ್ತದೆ. ಈ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗುತ್ತದೆ. ಇದೇ ಕಾರಣದಿಂದ 2027ರಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾ 2028ರ ದೀಪಾವಳಿಗೆ ಮುಂದೂಡಿಕೆಯಾಗಿದೆ.

ಅಯೋಧ್ಯೆ ಮತ್ತು ಲಂಕೆಗೆ ವಿಭಿನ್ನ ಬಣ್ಣಗಳು

ಸಿನಿಮಾದ ದೃಶ್ಯ ವಿನ್ಯಾಸದ ಬಗ್ಗೆಯೂ ಪಂಕಜ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ. ಅಯೋಧ್ಯೆಯನ್ನು ಪ್ರಕಾಶಮಾನವಾದ, ಬೆಚ್ಚಗಿನ ಬಣ್ಣಗಳು ಮತ್ತು ಸ್ವಚ್ಛತೆಯೊಂದಿಗೆ ತೋರಿಸಲಾಗುತ್ತದೆ. ಮತ್ತೊಂದೆಡೆ, ಲಂಕೆಯನ್ನು ಕಪ್ಪು ಮತ್ತು ಚಿನ್ನದ ಬಣ್ಣಗಳ ಮೂಲಕ ವಿಭಿನ್ನವಾಗಿ ಚಿತ್ರಿಸಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಮುದ್ದು 'ಶಾಕುಂತಲೆ' ಐಶಾನಿ ಶೆಟ್ಟಿ

ಒಟ್ಟಿನಲ್ಲಿ, ಸನ್ನಿ ಡಿಯೋಲ್ ಹನುಮಂತನಾಗಿ ಕಾಣಿಸಿಕೊಳ್ಳಲಿರುವ 'ರಾಮಾಯಣ 2' ಸಿನಿಮಾದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ಭಕ್ತಿ, ಶಕ್ತಿ ಮತ್ತು ಧೈರ್ಯದ ಸಂಕೇತವಾಗಿರುವ ಹನುಮಂತನ ಪಾತ್ರವನ್ನು ದೊಡ್ಡ ಪರದೆಯಲ್ಲಿ ಅದ್ಧೂರಿಯಾಗಿ ಕಟ್ಟಿಕೊಡಲು ನಿರ್ದೇಶಕ ನಿತೇಶ್ ತಿವಾರಿ ತಂಡ ಸಿದ್ಧತೆ ನಡೆಸುತ್ತಿದೆ.