

| ಬಂಗಿ ದೊಡ್ಡಮಂಜುನಾಥ ಕಂಪ್ಲಿ (ಬಳ್ಳಾರಿ)
ತಾಲೂಕಿನ ದೇವಲಾಪುರ ಗ್ರಾಮದ ಸುನ್ನಿ ಜಾಮೀಯಾ ಮಸೀದಿಯಲ್ಲಿ ಕನ್ನಡ ಕಲರವ ಕೇಳುತ್ತಿದ್ದು, ನಿತ್ಯ ಪ್ರವಚನ, ಪ್ರಾರ್ಥನೆ ಕನ್ನಡ ಭಾಷೆಯಲ್ಲೇ ನಡೆಯುತ್ತದೆ.
ಕನ್ನಡ ಮಂದಿರದಂತಿರುವ ಈ ಮಸೀದಿಯಲ್ಲಿ 20 ವರ್ಷಗಳ ಹಿಂದೆ ಈ ಪದ್ಧತಿ ಆರಂಭಗೊಂಡಿದ್ದು, ಕನ್ನಡದಲ್ಲೇ ಪ್ರವಚನ, ಪ್ರಾರ್ಥನೆ ನಡೆಯುತ್ತವೆ.
ಗ್ರಾಮದಲ್ಲಿ 50 ಮುಸ್ಲಿಂ ಕುಟುಂಬಗಳಿದ್ದು, ಈ ಪೈಕಿ 47 ಕುಟುಂಬಗಳ ಮಾತೃಭಾಷೆ ಕನ್ನಡವೇ ಆಗಿರುವುದು ವಿಶೇಷ. ಮೋಕಾ ವಲಿಬಾಷಾ, ಮಂಗಳೂರಿನ ಬದ್ರುದ್ದೀನ್ ಸಖಾಫಿ, ಸಿಯಾವುದ್ದಿನ್, ಬಂಡಿ ಹರ್ಲಾಪುರದ ಅಹ್ಮದ್ ರಜ ಸೇರಿ ಆರು ಜನ ಹಜರತ್ಗಳಿದ್ದಾರೆ. ಏಳನೆಯವರಾಗಿ ಮಂಗಳೂರಿನ ಸುನ್ನಿ ಸ್ಟೂಡೆಂಟ್ ಫೆಡರೇಷನ್ನಿಂದ ಕನ್ನಡ ಭಾಷೆ ಮೇಲೆ ವಿಶೇಷ ಪ್ರೇಮ ಮತ್ತು ವಾಕ್ಚಾತುರ್ಯ ಹೊಂದಿರುವ ಹಜರತ್ ತ್ವಯ್ಯಿಬ್ ಸಖಾಫಿ ಎನ್ನುವವರನ್ನು ಕರೆಯಿಸಿಕೊಳ್ಳಲಾಗಿದೆ.
ಮಸೀದಿಯಲ್ಲಿ ಪ್ರತಿ ಶುಕ್ರವಾರ, ರಂಜಾನ್, ಬಕ್ರೀದ್, ಈದ್ ಮಿಲಾದ್, ಮೊಹರಂ, ಗ್ಯಾರ್ವಿ ಸೇರಿ ಇತರ ಹಬ್ಬ, ವಿಶೇಷ ದಿನಗಳಲ್ಲಿ ಮಾತ್ರ ನಮಾಜನ್ನು ಅರಬ್ಬಿ ಭಾಷೆಯಲ್ಲಿ ನಡೆಸಲಾಗುತ್ತಿದೆ. ಇಷ್ಟು ದಿನಗಳು ಬಿಟ್ಟರೆ ಉಳಿದ ಎಲ್ಲ ದಿನಗಳಲ್ಲೂ, ಎಲ್ಲ ಕಾರ್ಯಕ್ರಮಗಳನ್ನು ಕನ್ನಡದಲ್ಲೇ ನಡೆಸಲಾಗುತ್ತದೆ.
| ಹಜರತ್ ತ್ವಯ್ಯಿಬ್ ಸಖಾಫಿ ಸುನ್ನಿ ಜಾಮೀಯಾ ಮಸೀದಿಯ ಹಜರತ್, ದೇವಲಾಪುರ