ರಾತ್ರಿಯೂ ಸಿಗುತ್ತೆ ಸೂರ್ಯನ ಬೆಳಕು

ವಿಜಯವಾಣಿ (2)
Published on

ರಾತ್ರಿಯಲ್ಲಿಯೂ ಸೂರ್ಯನ ಬೆಳಕಾ? ಹೌದು! ರಾತ್ರಿಯಾದ ಮೇಲೂ ಸೂರ್ಯನ ಬೆಳಕನ್ನು ಒದಗಿಸಲು ಅಮೆರಿಕದ ಸ್ಟಾರ್ಟ್​ಅಪ್ ಕಂಪನಿಯೊಂದು ಯೋಜನೆ ರೂಪಿಸಿದೆ. ಬಾಹ್ಯಾಕಾಶಕ್ಕೆ ಸಾವಿರಾರು ಉಪಗ್ರಹಗಳನ್ನು ಉಡಾವಣೆ ಮಾಡಿ, ಅವುಗಳಲ್ಲಿ ಅಳವಡಿಸಲಾಗಿರುವ ಬೃಹತ್ ಕನ್ನಡಿಗಳ ಮೂಲಕ ಸೂರ್ಯನ ಬೆಳಕನ್ನು ಭೂಮಿಯ ನಿರ್ದಿಷ್ಟ ಪ್ರದೇಶಕ್ಕೆ ಯಾವ ಸಮಯದಲ್ಲಿ ಬೇಕಾದರೂ ಹಾಯಿಸುವ ಯೋಜನೆ ಇದು. ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಸೋಲಾರ್ ಫಾರ್ಮ್​​ಗಳಿಗೆ ಸೂರ್ಯಾಸ್ತದ ನಂತರವೂ ಇದರಿಂದ ಬೆಳಕು ಒದಗಿಸಬಹುದು. ತಿಂಗಳುಗಳ ಕಾಲ ಸೂರ್ಯನನ್ನೇ ಕಾಣದ ದೇಶಗಳು ಬೇಡಿಕೆ ಮಂಡಿಸಿದರೆ ಅವುಗಳಿಗೂ ಸೌರಕಿರಣಗಳನ್ನು ಪೂರೈಸಬಹುದು ಎಂಬುದು ಈ ಯೋಜನೆ ಹಿಂದಿನ ಲೆಕ್ಕಾಚಾರ. ಆದರೆ ಇಂತಹುದೊಂದು ಯೋಜನೆ ನಿಜಕ್ಕೂ ಬೇಕೆ? ಅದರಿಂದಾಗುವ ಪರಿಣಾಮಗಳೇನು? ಖಗೋಳಶಾಸ್ತ್ರಜ್ಞರು ಏನೆನ್ನುತ್ತಾರೆ? ಇಲ್ಲಿದೆ ವಿವರ.

ಅಮೆರಿಕದ ಉದಯೋನ್ಮುಖ ಕಂಪನಿಯೊಂದು ಇತ್ತೀಚೆಗೆ ಅನುಮತಿಗಾಗಿ ಮಂಡಿಸಿರುವ ಉಪಗ್ರಹ ಉಡಾವಣೆಯ ಪ್ರಸ್ತಾವನೆಯು ಖಗೋಳಶಾಸ್ತ್ರಜ್ಞರನ್ನೇ ಇಕ್ಕಟ್ಟಿಗೆ ಸಿಲುಕಿಸಿದೆ. ಉಪಗ್ರಹಗಳು ಸೂರ್ಯನ ಬೆಳಕನ್ನು ಪ್ರತಿಫಲಿಸುವುದು ಮತ್ತು ಅದರ ಪರಿಣಾಮವಾಗಿ ಅನಗತ್ಯ ಬೆಳಕಿನ ಮಾಲಿನ್ಯ ಉಂಟು ಮಾಡುವುದು ಮಾಮೂಲಿ. ಆದರೆ ರಿಫ್ಲೆಕ್ಟ್ ಆರ್ಬಿಟಲ್ ಎಂಬ ಅಮೆರಿಕನ್

ಸ್ಟಾರ್ಟ್​ಅಪ್ ಕಂಪನಿಯ ಉಪಗ್ರಹ ಉಡಾವಣೆಯ ಉದ್ದೇಶವೇ ಬೆಳಕಿನ ಮಾಲಿನ್ಯ ಉಂಟು ಮಾಡುವುದು! ಸೋಲಾರ್ ಫಾರ್ಮ್​ಗಳು ಸೂರ್ಯ ಮುಳುಗಿದ ಬಳಿಕವೂ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ, ಕನ್ನಡಿಗಳನ್ನು ಬಳಸಿ ಸೂರ್ಯನ ಕಿರಣಗಳನ್ನು ಭೂಮಿಗೆ ಪ್ರತಿಫಲನ ಮಾಡುವುದಾಗಿ ಹೇಳುತ್ತದೆ ಈ ಕಂಪನಿ. ಇದೇ ಉದ್ದೇಶಕ್ಕಾಗಿ 18 ಮೀಟರ್ ಉದ್ದದ ‘ಈರೆಂಡಿಲ್-1’ ಎಂಬ ಪರೀಕ್ಷಾರ್ಥ ಉಪಗ್ರಹವನ್ನು ತಯಾರಿಸಿದ್ದು, 2026ರಲ್ಲಿ ಉಡಾವಣೆ ಮಾಡಲು ಅರ್ಜಿ ಸಲ್ಲಿಸಿದೆ. ನಂತರ ಇದೇ ರೀತಿಯ 4 ಸಾವಿರ ಉಪಗ್ರಹಗಳನ್ನು 2030ರವರೆಗೆ ಹಂತಹಂತವಾಗಿ ಉಡಾವಣೆ ಮಾಡುವ ಯೋಜನೆ ಹಾಕಿಕೊಂಡಿದೆ. ಹಾಗಾದರೆ ಇದರಿಂದಾಗುವ ಬೆಳಕಿನ ಮಾಲಿನ್ಯ ಎಷ್ಟು ತೀವ್ರವಾಗಿರಬಹುದು? ಅದಕ್ಕಿಂತ ಮುಖ್ಯವಾಗಿ, ರಿಫ್ಲೆಕ್ಟ್ ಆರ್ಬಿಟಲ್ ಕಂಪನಿಯ ಉಪಗ್ರಹಗಳು ತಮ್ಮ ಉದ್ದೇಶಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಬಹುದೇ? ಎಂಬ ಕುತೂಹಲ ಎಲ್ಲರಲ್ಲಿದೆ.

ಸೂರ್ಯ ಕಿರಣಗಳ ಪ್ರತಿಫಲನ ಹೇಗೆ?

ನೀವು ಧರಿಸಿದ ಕೈಗಡಿಯಾರ ಕೆಲವೊಮ್ಮೆ ಸೂರ್ಯನ ಬೆಳಕನ್ನು ಸಮೀಪದ ಗೋಡೆಯ ಮೇಲೆ ಪ್ರತಿಫಲಿಸುತ್ತಿರುವುದನ್ನು ಗಮನಿಸಿಯೇ ಇರುತ್ತೀರಿ. ಅದೇ ರೀತಿ ರಿಫ್ಟೆಕ್ಟ್ ಆರ್ಬಿಟಲ್​ನ ಉಪಗ್ರಹಗಳು ಕನ್ನಡಿಗಳನ್ನು ಬಳಸಿ ಭೂಮಿಯ ನಿರ್ದಿಷ್ಟ ಭಾಗಕ್ಕೆ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ. ಆದರೆ ಪ್ರಮಾಣ ಮಾತ್ರ ಅಗಾಧವಾದದ್ದು. ರಿಫ್ಲೆಕ್ಟ್ ಆರ್ಬಿಟಲ್​ನ ಉಪಗ್ರಹಗಳು ಭೂಮಿಯಿಂದ ಸುಮಾರು 625 ಕಿಮೀ ಎತ್ತರದಲ್ಲಿ ಕಕ್ಷೆಯಲ್ಲಿರುತ್ತವೆ. 54 ಮೀಟರ್​ಗಳಷ್ಟು ದೊಡ್ಡ ಕನ್ನಡಿಗಳನ್ನು ಹೊಂದಿರುತ್ತವೆ. ನೀವು ನಿಮ್ಮ ಕೈಗಡಿಯಾರದಿಂದ ಸಮೀಪದ ಗೋಡೆಗೆ ಬೆಳಕನ್ನು ಪ್ರತಿಫಲಿಸಿದಾಗ, ಬೆಳಕಿನ ಚುಕ್ಕಿ ತುಂಬ ಪ್ರಕಾಶಮಾನವಾಗಿರುತ್ತದೆ. ಅದನ್ನೇ ದೂರದ ಗೋಡೆಗೆ ಪ್ರತಿಫಲಿಸಿದರೆ, ಚುಕ್ಕಿ ದೊಡ್ಡದಾಗುತ್ತದೆಯಲ್ಲದೆ ತೀಕ್ಷ್ಣತೆಯನ್ನು ಕಳೆದುಕೊಂಡು ಸ್ವಲ್ಪ ಮಂಕಾಗುತ್ತದೆ. ಹೀಗೇಕಾಗುತ್ತದೆಯೆಂದರೆ, ಸೂರ್ಯ ಯಾವತ್ತೂ ಬೆಳಕಿನ ಒಂದು ಬಿಂದು ಅಲ್ಲ, ಬದಲಿಗೆ ಆತ ಆಕಾಶದಲ್ಲಿ ಅರ್ಧ ಡಿಗ್ರಿ ಕೋನವನ್ನು ಹೊಂದಿರುವ ಗ್ರಹ. ಇದರರ್ಥ, ಹೆಚ್ಚಿನ ದೂರಕ್ಕೆ ಸಮತಟ್ಟಾದ ಕನ್ನಡಿಯಿಂದ ಪ್ರತಿಫಲಿತವಾದ ಸೂರ್ಯನ ಬೆಳಕಿನ ಕಿರಣ ಯಾವಾಗಲೂ ಅರ್ಧ ಡಿಗ್ರಿ ಕೋನದೊಂದಿಗೆ ಹರಡುತ್ತದೆ.

ಇದೆಲ್ಲವೂ ಪ್ರಾಯೋಗಿಕವಾಗಿ ಹೇಗಿರುತ್ತದೆ? ಅಂದಾಜು 800 ಕಿಮೀ ದೂರಕ್ಕೆ ಸೂರ್ಯಕಿರಣಗಳನ್ನು ಪ್ರತಿಫಲಿಸುವ ಉಪಗ್ರಹವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. 625 ಕಿಮೀ ಎತ್ತರದಲ್ಲಿರುವ ಉಪಗ್ರಹ ಯಾವಾಗಲೂ ನೇರವಾಗಿ ತಲೆಮೇಲಿರುವುದಿಲ್ಲ. ಬೆಳಕನ್ನು ಒಂದು ಕೋನದಲ್ಲಿ ಪ್ರತಿಫಲಿಸುತ್ತಿರುತ್ತದೆ. ಅದರಿಂದ ಬೆಳಕು ಪಡೆಯುವ ಭೂಮಿಯ ಭಾಗ ಕನಿಷ್ಠ 7 ಕಿಮೀ ಇರುತ್ತದೆ. ವಕ್ರ ಕನ್ನಡಿಯಾಗಲಿ ಅಥವಾ ಲೆನ್ಸ್ ಆಗಲಿ, ಸೂರ್ಯನ ಅರ್ಧ ಡಿಗ್ರಿ ಕೋನದಿಂದಾಗಿ ಸೂರ್ಯನ ಬೆಳಕನ್ನು ಅತಿಚಿಕ್ಕ ಭೂಭಾಗಕ್ಕೆ ಕೇಂದ್ರೀಕರಿಸಲು ಸಾಧ್ಯವಿಲ್ಲ. ಈ ಪ್ರತಿಫಲಿತ ಬೆಳಕು ಪ್ರಖರವಾಗಿರುತ್ತದೆಯೋ ಅಥವಾ ಮಂಕಾಗಿರುತ್ತದೆಯೋ ಎಂಬುದೂ ಮಹತ್ವದ ಸಂಗತಿ. 54 ಮೀಟರ್​ನ ಒಂದು ಉಪಗ್ರಹದಿಂದ ಪ್ರತಿಫಲಿತವಾಗುವ ಬೆಳಕು ಮಧ್ಯಾಹ್ನದ ಸೂರ್ಯನ ಪ್ರಖರತೆಗಿಂತ 15,000 ಪಟ್ಟು ಕಡಿಮೆ ಶಾಖ ಹೊಂದಿರುತ್ತದೆ. ಆದರೆ ಪೂರ್ಣ ಚಂದ್ರನ ಬೆಳಕಿಗಿಂತ ಹೆಚ್ಚು ಪ್ರಕಾಶಮಾನವಾಗಿರುತ್ತದೆ.

ಖಗೋಳಶಾಸ್ತ್ರಜ್ಞರು ಏನ್ಹೇಳ್ತಾರೆ.?

ರಾತ್ರಿ ವೇಳೆಯಲ್ಲೂ ಸೌರ ಶಕ್ತಿಯನ್ನು ಉತ್ಪಾದಿಸಲು ಈ ಕನ್ನಡಿ ಉಪಗ್ರಹಗಳು ನಿಜಕ್ಕೂ ಬೇಕೆ ಎಂಬುದು ಮುಖ್ಯ ಪ್ರಶ್ನೆ. ಬಹುತೇಕ ಜನರ ಪ್ರಕಾರ ‘ಇಲ್ಲ’. ಅವು ದೊಡ್ಡ ಪ್ರಮಾಣದಲ್ಲಿ ಬೆಳಕಿನ ಮಾಲಿನ್ಯವನ್ನೂ ಉಂಟುಮಾಡುತ್ತವೆ. ರಿಫ್ಲೆಕ್ಟ್ ಆರ್ಬಿಟಲ್ ಕಂಪನಿ ತನ್ನ ಯೋಜನೆಯಲ್ಲಿ ಸಫಲವಾದರೂ ಇಂತಹ ಕನ್ನಡಿಗಳ ಸಮೂಹವೇ ಸೌರಮಂಡಲಕ್ಕೆ ಅಪಾಯಕಾರಿ ಎನ್ನುತ್ತಾರೆ ಖಗೋಳಶಾಸ್ತ್ರಜ್ಞರು. ದೂರದರ್ಶಕದ ಮೂಲಕ ನೋಡುವವರಿಗೆ ಪ್ರತಿ ಕನ್ನಡಿಯ ಮೇಲ್ಮೈಯೂ ಬಹುತೇಕ ಸೂರ್ಯನ ಮೇಲ್ಮೈಯಂತೆಯೇ ಪ್ರಕಾಶಮಾನವಾಗಿರುತ್ತದೆ. ಹಾಗಾಗಿ ಇದು ಕಣ್ಣಿಗೆ ಶಾಶ್ವತ ಹಾನಿ ಉಂಟುಮಾಡುತ್ತದೆ. ಎಲ್ಲರೂ ಮುಕ್ತವಾಗಿ ಬ್ರಹ್ಮಾಂಡವನ್ನು ವೀಕ್ಷಿಸುವುದಕ್ಕೂ ಈ ಬೆಳಕಿನ ಮಾಲಿನ್ಯದಿಂದ ಅಡ್ಡಿಯಾಗುತ್ತದೆ. ಪ್ರಾಣಿಗಳ ದೈನಂದಿನ ಜೀವನದ ಮೇಲೂ ಬೆಳಕಿನ ಮಾಲಿನ್ಯ ಪರಿಣಾಮ ಬೀರುತ್ತದೆ. ರಿಫ್ಲೆಕ್ಟ್ ಆರ್ಬಿಟಲ್ ಕಂಪನಿ ನಿರ್ದಿಷ್ಟ ಸ್ಥಳಗಳಿಗೆ ಮಾತ್ರ ಸೂರ್ಯನ ಬೆಳಕು ನೀಡುವ ಉದ್ದೇಶ ಹೊಂದಿದ್ದರೂ, ಉಪಗ್ರಹಗಳ ಕಿರಣಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವಾಗ ಅದರ ಪರಿಣಾಮ ಭೂಮಿಯಾದ್ಯಂತ ಇರುತ್ತದೆ. ರಾತ್ರಿಯ ಆಕಾಶದಲ್ಲಿ ಚಂದ್ರನಿಗಿಂತ ಪ್ರಕಾಶಮಾನವಾದ ಬೆಳಕಿನ ಝುಲಕ್​ಗಳು ಕಾಣಿಸಿಕೊಳುತ್ತವೆ. ಕಂಪನಿ ಬಳಿ ಇದೆಲ್ಲಕ್ಕೂ ಉತ್ತರವಿದೆಯೇ?

ಬಲೂನ್ ಟೆಸ್ಟ್

ರಿಫ್ಲೆಕ್ಟ್ ಆರ್ಬಿಟಲ್​ನ ಸಂಸ್ಥಾಪಕ ಬೆನ್ ನೊವಾಕ್ ‘ಬಾಹ್ಯಾಕಾಶಕ್ಕೆ ತೆರಳುವ ಮೊದಲು ನಿರ್ವಿುಸಬೇಕಾದ ಕೊನೆಯ ವಸ್ತು’ ಎಂಬ ಶೀರ್ಷಿಕೆಯೊಂದಿಗೆ ಒಂದು ಸಣ್ಣ ವೀಡಿಯೊವನ್ನು ಕಳೆದ ವರ್ಷ ಪೋಸ್ಟ್ ಮಾಡಿದ್ದರು. ಅದು ಬಿಸಿಗಾಳಿಯ ಬಲೂನ್​ನಲ್ಲಿ ಸಾಗಿಸಲಾದ ರಿಫ್ಲೆಕ್ಟರ್. ಈ ಟೆಸ್ಟ್​ನಲ್ಲಿ, ಸೌರ ಫಲಕಗಳಿಗೆ ಸುಮಾರು ಎರಡೂವರೆ ಮೀಟರ್​ನ ಸಮತಟ್ಟಾದ, ಚೌಕಾಕಾರದ ಕನ್ನಡಿಯು ಬೆಳಕಿನ ಕಿರಣಗಳನ್ನು ಪ್ರತಿಫಲಿಸಿತು. ಬಲೂನ್ 242 ಮೀಟರ್ ದೂರದಲ್ಲಿರುವಾಗ ಪ್ರತಿ ಚದರ ಮೀಟರ್​ಗೆ 516 ವ್ಯಾಟ್​ಗಳ ಬೆಳಕು ಪ್ರತಿಫಲಿತವಾಯಿತು. ಹೋಲಿಕೆಗೆ ಹೇಳಬೇಕೆಂದರೆ, ಮಧ್ಯಾಹ್ನದ ಸೂರ್ಯ ಪ್ರತಿ ಚದರ ಮೀಟರ್​ಗೆ ಸುಮಾರು 1,000 ವ್ಯಾಟ್ ಉತ್ಪಾದಿಸುತ್ತಾನೆ. ಆದ್ದರಿಂದ, ಪ್ರತಿ ಚದರ ಮೀಟರ್​ಗೆ 516 ವ್ಯಾಟ್ ಎಂದರೆ ಅದರ ಸುಮಾರು ಅರ್ಧದಷ್ಟಾಯಿತು. ಅಷ್ಟಾದರೆ ಸಾಕಷ್ಟು ಉಪಯುಕ್ತವೆಂದೇ ಹೇಳಬಹುದು. ಆದರೆ, ಬಲೂನ್ ಪರೀಕ್ಷೆಯನ್ನೇ ಬಾಹ್ಯಾಕಾಶಕ್ಕೆ ಗಾತ್ರವರ್ಧನೆ ಮಾಡಿ ನೋಡುವುದಾದರೆ, ಈ ಮೊದಲು ಗಮನಿಸಿದಂತೆ, ಉಪಗ್ರಹಗಳು ಭೂಮಿಯ ನಿರ್ದಿಷ್ಟ ಪ್ರದೇಶದಿಂದ 800 ಕಿಮೀ ದೂರದಲ್ಲಿದ್ದರೆ, ರಿಫ್ಲೆಕ್ಟರ್ 6.5 ಕಿಮೀ ಬೈ 6.5 ಕಿಮೀ, ಅಂದರೆ 42 ಚದರ ಕಿಲೋಮೀಟರ್ ಗಾತ್ರದ್ದಿರಬೇಕಾಗುತ್ತದೆ. ಇಂತಹ ದೈತ್ಯ ರಿಫ್ಲೆಕ್ಟರ್ ನಿರ್ವಿುಸುವುದು ವಾಸ್ತವಿಕ ಅಲ್ಲವೇ ಅಲ್ಲ. ಆದ್ದರಿಂದ ಬಲೂನ್ ಪರೀಕ್ಷೆಗೆ ಕೆಲವು ಮಿತಿಗಳಿವೆ.

ಪರಿಣಾಮಗಳು ಭೀಕರ

ರಿಫ್ಲೆಕ್ಟ್ ಆರ್ಬಿಟಲ್ ಕಂಪನಿಯ ಯೋಜನೆ ಯಾವಾಗ ಆರಂಭವಾಗುತ್ತದೆ ಎಂಬುದಿನ್ನೂ ನಿರ್ಧಾರವಾಗಿಲ್ಲ. ಕಂಪನಿ ಸದ್ಯದಲ್ಲೇ ಪರೀಕ್ಷಾ ಉಪಗ್ರಹ ಉಡಾಯಿಸುವ ಸಾಧ್ಯತೆ ಇದೆ. ಆದರೆ ಕೆಲವೇ ಕೆಲವು ಸೌರ ಫಾರ್ಮ್​ಗಳನ್ನು ದಿನಕ್ಕೆ ಕೆಲವು ಹೆಚ್ಚುವರಿ ಗಂಟೆಗಳ ಕಾಲ ಕಾರ್ಯ ನಿರ್ವಹಿಸುವಂತೆ ಮಾಡಲು ಎರಡೂವರೆ ಲಕ್ಷ ದೈತ್ಯ ಕನ್ನಡಿಗಳನ್ನು ನಿರಂತರವಾಗಿ ಭೂಮಿಯ ಸುತ್ತ ಸುತ್ತಿಸುವುದು ಸರಿಯೇ? ರಾತ್ರಿಯ ಆಕಾಶ ಕತ್ತಲುಕತ್ತಲಾಗಿಯೇ ಇರಬೇಕು ಎಂದು ಬಯಸುವವರಿಗೆ ಈ ಯೋಜನೆಯ ಯಶಸ್ಸಿನ ಪರಿಣಾಮಗಳು ಭೀಕರ ಎನ್ನಿಸದೇ ಇರದು.

ಎರಡೂವರೆ ಲಕ್ಷ ಉಪಗ್ರಹಗಳು ಬೇಕು!

ಸರಳ ಉಪಗ್ರಹಗಳನ್ನು ಸರಿಯಾದ ಸಮೂಹದಲ್ಲಿ ಇರಿಸಿ, ಭೂಮಿಯ ಮೇಲಿರುವ ಸೌರ ಫಾರ್ಮ್​ಗಳಿಗೆ ಬೆಳಕಿನ ಕಿರಣಗಳನ್ನು ಕಳಿಸುವುದು ರಿಫ್ಲೆಕ್ಟ್ ಆರ್ಬಿಟಲ್​ನ ಯೋಜನೆ. ಅದರ ಗುರಿ ಪ್ರತಿ ಚದರ ಮೀಟರ್​ಗೆ ಕೇವಲ 200 ವ್ಯಾಟ್. ಮಧ್ಯಾಹ್ನದ ಸೂರ್ಯನ ಶೇ. 20ರಷ್ಟು. ಈ ಕೆಲಸಕ್ಕೆ ಚಿಕ್ಕ ಉಪಗ್ರಹಗಳು ಸಾಕೇ? 54 ಮೀಟರ್​ನ ಒಂದು ಉಪಗ್ರಹ ಮಧ್ಯಾಹ್ನದ ಸೂರ್ಯನಿಗಿಂತ 15,000 ಪಟ್ಟು ಕಡಿಮೆ ಪ್ರಖರತೆ ಹೊಂದಿದ್ದರೆ, ಮಧ್ಯಾಹ್ನದ ಸೂರ್ಯನ ಶೇ. 20ರಷ್ಟನ್ನು ಸಾಧಿಸಲು 3,000 ಉಪಗ್ರಹಗಳು ಬೇಕಾಗುತ್ತವೆ. ಒಂದು ನಿರ್ದಿಷ್ಟ ಪ್ರದೇಶವನ್ನು ಬೆಳಗಿಸಲು ಇಷ್ಟು ಉಪಗ್ರಹಗಳು ಸಾಕು. ಮತ್ತೊಂದು ಸಮಸ್ಯೆ ಏನೆಂದರೆ, 625 ಕಿಮೀ ಎತ್ತರದ ಉಪಗ್ರಹಗಳು ಸೆಕೆಂಡ್​ಗೆ 7.5 ಕಿಮೀಗಳ ವೇಗದಲ್ಲಿ ಚಲಿಸುತ್ತವೆ. ಆದ್ದರಿಂದ ಒಂದು ಉಪಗ್ರಹ ನಿರ್ದಿಷ್ಟ ಸ್ಥಳದಿಂದ 1,000 ಕಿಮೀ ಒಳಗಿರುವುದು 3.5 ನಿಮಿಷ ಮಾತ್ರ. ಇದರರ್ಥ 3,000 ಉಪಗ್ರಹಗಳು ಕೆಲವು ನಿಮಿಷಗಳ ಬೆಳಕನ್ನಷ್ಟೇ ನೀಡುತ್ತವೆ.

ಒಂದು ಗಂಟೆಗೂ ಹೆಚ್ಚು ಕಾಲ ಬೆಳಕು ಒದಗಿಸಲು ಇನ್ನೂ ಹಲವು ಸಾವಿರ ಉಪಗ್ರಹಗಳು ಬೇಕಾಗುತ್ತವೆ. ರಿಫ್ಲೆಕ್ಟ್ ಆರ್ಬಿಟಲ್​ಗೆ ಮಹತ್ವಾಕಾಂಕ್ಷೆಯ ಕೊರತೆಯೇನಿಲ್ಲ. 600 ಕಿಮೀ ಎತ್ತರದ ಕಕ್ಷೆಗಳಲ್ಲಿ 2,50,000 ಉಪಗ್ರಹಗಳನ್ನು ನಿಯೋಜಿಸಲೂ ಸಿದ್ಧ ಎಂದು ನೊವಾಕ್ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದು ಪ್ರಸ್ತುತ ಬಾಹ್ಯಾಕಾಶದಲ್ಲಿರುವ ಎಲ್ಲ ಉಪಗ್ರಹಗಳು ಮತ್ತು ಸ್ಪೇಸ್ ಜಂಕ್​ಗಿಂತ (ಅನುಪಯುಕ್ತ ಉಪಗ್ರಹಗಳು) ಹೆಚ್ಚು. ಇಷ್ಟಾದರೂ, ಆ ಉಪಗ್ರಹಗಳ ದೊಡ್ಡ ಸಮೂಹದಿಂದ ಒಮ್ಮೆಗೆ ಗರಿಷ್ಠ 80 ಸ್ಥಳಗಳಿಗೆ ಮಧ್ಯಾಹ್ನದ ಸೂರ್ಯನ ಶೇ. 20ರಷ್ಟು ಬೆಳಕನ್ನು ಮಾತ್ರ ಒದಗಿಸಲು ಸಾಧ್ಯ. ವಾಸ್ತವದಲ್ಲಿ, ಮೋಡ ಕವಿದ ವಾತಾವರಣದಿಂದಾಗಿ ಬೆಳಕು ಹಾಯಿಸಲು ಸಾಧ್ಯವಾಗುವುದು ಇನ್ನೂ ಕಡಿಮೆ ಸ್ಥಳಗಳ ಮೇಲೆ. ಅಷ್ಟೇ ಅಲ್ಲ, ಅವುಗಳ ಎತ್ತರವನ್ನು ಗಣನೆಗೆ ತೆಗೆದುಕೊಂಡರೆ, ಈ ಉಪಗ್ರಹಗಳು ಸಂಜೆ ಮತ್ತು ಬೆಳಗಿನ ಸಮಯದಲ್ಲಿ ಮಾತ್ರ ಬೆಳಕನ್ನು ಒದಗಿಸಬಹುದು. ಇದೆಲ್ಲ ಗೊತ್ತಿರುವುದರಿಂದಲೇ ಸದಾ ಸೂರ್ಯನಿಗೆ ಅಭಿಮುಖವಾಗಿ ಮತ್ತು ಭೂಮಿಯ ಸುತ್ತುವಿಕೆಗೆ ಅನುಗುಣವಾಗಿ ತನ್ನ ಉಪಗ್ರಹಗಳು ಕಕ್ಷೆಯಲ್ಲಿರುವಂತೆ ರಿಫ್ಲೆಕ್ಟ್ ಆರ್ಬಿಟಲ್ ಪ್ಲ್ಯಾನ್ ಮಾಡಿದೆ. ಹಾಗಾಗಿ ಅವು ನಿರಂತರವಾಗಿ ಸೂರ್ಯನ ಬೆಳಕಿನಲ್ಲಿರುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net