

ನವದೆಹಲಿ: ಭಾರತ ಮೂಲದ ಅಮೆರಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ನಾಸಾ ಸಹೋದ್ಯೋಗಿ ಬುಚ್ ವಿಲ್ಮೋರ್ ಬೋಯಿಂಗ್ ಸ್ಟಾರ್ಲೈನರ್ ಸ್ಪೇಸ್ ಕ್ಯಾಪ್ಸುಲ್ನಲ್ಲಿನ ಕೆಲವು ತಾಂತ್ರಿಕ ದೋಷದ ಕಾರಣದಿಂದಾಗಿ ಬಾಹ್ಯಾಕಾಶದಲ್ಲಿ ಸಿಲುಕಿರುವುದು ಗೊತ್ತೆ ಇದೆ. ಭೂಮಿಯಿಂದ 420 ಕಿಲೋಮೀಟರ್ ದೂರದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಸಂಪರ್ಕ ಸಾಧಿಸಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಗಗನಯಾತ್ರಿಗಳು ಒಂದು ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನವೆಂಬರ್‌ನಲ್ಲಿ ನಡೆಯಲಿರುವ ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮತ ಚಲಾಯಿಸುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಬಾಹ್ಯಾಕಾಶದಲ್ಲಿ ಅವರ ವಾಸ್ತವ್ಯವು ಕನಿಷ್ಠ ಫೆಬ್ರವರಿ 2025ರವರೆಗೆ ವಿಸ್ತರಿಸುವುದರಿಂದ ಈ ಮನವಿಯನ್ನು ಮಾಡಿದ್ದಾರೆ.
ಮತದಾನದಲ್ಲಿ ನಾಗರಿಕರು ಭಾಗವಹಿಸುವುದು ಪ್ರಮುಖವಾಗಿದೆ. ನಾವು ಇಂದು ಮತಕ್ಕಾಗಿ ನಮ್ಮ ವಿನಂತಿ ಕಳುಹಿಸಿದ್ದೇವೆ. ಅವರು ಅದನ್ನು ಒಂದೆರಡು ವಾರಗಳಲ್ಲಿ ನಮಗೆ ನೀಡುತ್ತಾರೆ ಎಂದು ವಿಲ್ಮೋರ್ ಹೇಳಿದರು. ನಾಗರಿಕರಾದ ನಾವೆಲ್ಲರೂ ಆ ಚುನಾವಣೆಗಳಲ್ಲಿ ತೊಡಗಿಸಿಕೊಳ್ಳುವುದು ಬಹಳ ಮುಖ್ಯ. ನಾಸಾದಿಂದ ಮತದಾನ ಮಾಡುವುದು ನಮಗೆ ತುಂಬಾ ಸುಲಭವಾಗಿದೆ. ಆ ಅವಕಾಶಕ್ಕಾಗಿ ಉತ್ಸುಕರಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಅಂದ್ಹಾಗೆ ಬಾಹ್ಯಾಕಾಶದಿಂದ ಮತದಾನ ಮಾಡುತ್ತಿರುವುದು ಇದೆ ಮೊದಲೆನಲ್ಲ. 1997ರಿಂದ ಗಗನಯಾತ್ರಿಗಳು ಬಾಹ್ಯಾಕಾಶದಿಂದ ಮತ ಚಲಾಯಿಸುತ್ತಿದ್ದಾರೆ. ಟೆಕ್ಸಾಸ್ ಶಾಸಕಾಂಗವು ನಾಸಾ ಉದ್ಯೋಗಿಗಳಿಗೆ ಬಾಹ್ಯಾಕಾಶದಿಂದ ಮತ ಚಲಾಯಿಸಲು ಅವಕಾಶ ನೀಡುವ ಮಸೂದೆಯನ್ನು ಅಂಗೀಕರಿಸಿತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಆ ವರ್ಷದಲ್ಲೆ ನಾಸಾ ಗಗನಯಾತ್ರಿ ಡೇವಿಡ್ ವುಲ್ಫ್ ಮೀರ್ ಬಾಹ್ಯಾಕಾಶ ನಿಲ್ದಾಣದಲ್ಲಿ ಬಾಹ್ಯಾಕಾಶದಿಂದ ಮತ ಚಲಾಯಿಸಿದ ಮೊದಲ ಅಮೇರಿಕನ್ ಎನ್ನಿಸಿಕೊಂಡರು. 2020ರಲ್ಲಿ ನಾಸಾ ಗಗನಯಾತ್ರಿ ಕೇಟ್ ರೂಬಿನ್ಸ್ ಐಎಸ್ಎಸ್ನಲ್ಲಿ ಬಾಹ್ಯಾಕಾಶದಿಂದ ತನ್ನ ನಾಗರಿಕ ಕರ್ತವ್ಯವನ್ನು ನಿರ್ವಹಿಸಿದರು.
ಇನ್ನು ತಾವು ಬಾಹ್ಯಕಾಶದಲ್ಲಿ ಸಿಲುಕಿರುವ ಬಗ್ಗೆ ಮಾತನಾಡಿದ ವಿಲ್ಮೋರ್, ಕಷ್ಟದ ಸಮಯದಲ್ಲಿ ವ್ಯವಹರಿಸುವಾಗ ಸಾಕಷ್ಟು ತಾಳ್ಮೆಯಾಗಿರುವುದು ಮುಖ್ಯವಾಗಿದೆ. ನಮಗೆ ಕೆಲಸವನ್ನು ನೀಡಲಾಗಿದೆ. ಎಲ್ಲಾ ರೀತಿಯ ಸನ್ನಿವೇಶಗಳನ್ನು ಎದುರಿಸಲು ನಾವು ಕಲಿಯುತ್ತೇವೆ. ಇದು ಕೇವಲ ನಾಸಾದಲ್ಲಿ ಅಲ್ಲ, ಇದು ಸುನಿ ಮತ್ತು ನಾನು ನಮ್ಮ ವೃತ್ತಿಜೀವನದುದ್ದಕ್ಕೂ ಮಾಡಿದ್ದೇವೆ ಎಂದಿದ್ದಾರೆ. ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಇತರ ಏಳು ಗಗನಯಾತ್ರಿಗಳೊಂದಿಗೆ ಐಎಸ್ಎಸ್ನಲ್ಲಿ ವಾಸಿಸುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.(ಏಜೆನ್ಸೀಸ್)