

ರಾಣೆಬೆನ್ನೂರ: ಪ್ರಕೃತಿಯನ್ನು ಸಂರಕ್ಷಣೆ ಮಾಡಿದರೆ ಪ್ರಕೃತಿಯು ನಮ್ಮನ್ನು ಸಂರಕ್ಷಿಸುತ್ತದೆ ಎಂದು ಗ್ರಾಪಂ ಅಧ್ಯಕ್ಷೆ ಗಂಗಮ್ಮ ಗೋಣಿಮಠ ಹೇಳಿದರು.
ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಬ್ಬರು ಸಾಲುಮರದ ತಿಮ್ಮಕ್ಕನವರನ್ನು ಆದರ್ಶವಾಗಿಟ್ಟುಕೊಂಡು ಪ್ರತಿ ವಿದ್ಯಾರ್ಥಿಗಳು ಒಂದೊಂದು ಮರವನ್ನು ನೆಟ್ಟು ಪೋಷಿಸಬೇಕು ಎಂದರು.
ಉಪನ್ಯಾಸಕರಾದ ಎಚ್. ಶಿವಾನಂದ ಮಾತನಾಡಿ, ಆಧುನಿಕತೆ ಹಾಗೂ ಜಾಗತೀಕರಣದಿಂದಾಗಿ ಪರಿಸರಕ್ಕೆ ಮಾರಕವಾಗಿ ಜೀವಸಂಕುಲ ಅಳಿವಿನ ಅಂಚಿಗೆ ತಲುಪುತ್ತಿದೆ. ಇಂದು ನಿತ್ಯ ಬೆಟ್ಟ ಗುಡ್ಡಗಳನ್ನು ನೆಲಸಮ ಮಾಡುತ್ತಿರುವುದರಿಂದ ಸಕಾಲಕ್ಕೆ ಮಳೆ ಬರುತ್ತಿಲ್ಲ. ಇದರಿಂದ ರೈತರು ನಷ್ಟ ಅನುಭವಿಸಬೇಕಾಗಿದೆ. ಒಂದು ಗಿಡ ಕಡಿದರೆ 180 ರಿಂದ 240 ಜನರು ಉಪಯೋಗಿಸಬಹುದಾದಷ್ಟು ಆಮ್ಲಜನಕ ಹಾನಿಯಾಗುತ್ತದೆ. ಆದ್ದರಿಂದ ಎಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಹಿರಿಯ ಶಿಕ್ಷಕ ಶಿವಮೂರ್ತಯ್ಯ ಎಚ್.ಎಂ. ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾಧ್ಯಕ್ಷ ಬಸವಣ್ಣೆಪ್ಪ ನೋಟದ, ಸುನಿತಾ ಕುಡುಪಲಿ, ಮಲ್ಲೇಶಿ ಹೂರಗಿ, ಶಿಕ್ಷಕರಾದ ರವಿ ಕೆ.ಎಸ್., ಚಂದ್ರಶೇಖರ ಎಚ್.ಎಂ., ಪ್ರಕಾಶ ಸಿ., ಜೈಪ್ರಕಾಶ, ಸಂತೋಷ ಅಂಗಡಿ, ಪೂರ್ಣಿಮಾ ಮಾಕನೂರು, ಪ್ರವೀಣಕುಮಾರ ಕೆ. ಮತ್ತಿತರರು ಉಪಸ್ಥಿತರಿದ್ದರು.