ಟೊರೆಂಟೊ ಕನ್ನಡ ಸಂಘದ ಹೊಸ ಸಮಿತಿ ರಚನೆ: ಕಾರ್ಯದರ್ಶಿಯಾಗಿ ಸುಮುಖ ಶೇಷಾದ್ರಿ; ಅದ್ಧೂರಿ 'ಗಣೇಶೋತ್ಸವ' ಆಚರಣೆ

ವಿಜಯವಾಣಿ (86)
Published on

ಬೆಂಗಳೂರು: ಕೆನಡಾದಲ್ಲಿರುವ ಟೊರೆಂಟೊ ಕನ್ನಡ ಸಂಘವು ಈ ವರ್ಷ ಅದ್ಧೂರಿಯಾಗಿ ಗಣೇಶ ಉತ್ಸವವನ್ನು ಆಚರಿಸಿದ್ದು, ಇದೇ ಸಂದರ್ಭದಲ್ಲಿ ಸಂಘದ ಕಾರ್ಯಕಾರಿ ಸಮಿತಿಯನ್ನು ರಚಿಸಿದೆ.

ಹೊಸ ಸಮಿತಿಯನ್ನು ರಚಿಸಿದ ಸಂಘವು, ಅದ್ಧೂರಿ ಗಣೇಶೋತ್ಸವ ಆಚರಣೆಯ ಮೂಲಕ ಕಾರ್ಯಾರಂಭ ಮಾಡಿದೆ. ಕನ್ನಡ ಭಾಷೆ ಮತ್ತು ಸಂಸೃತಿಯನ್ನು, ಕರ್ನಾಟಕದ ಹಿರಿಮೆಯನ್ನು ಟೊರೆಂಟೊ ಪ್ರದೇಶದಲ್ಲಿ ಪ್ರೋತ್ಸಾಹಿಸಿ, ಬೆಳೆಸುವುದು ಈ ಕನ್ನಡ ಸಂಘದ ಮುಖ್ಯ ಧ್ಯೇಯವಾಗಿದೆ. ಸಂಘದ ನೂತನ ಅಧ್ಯಕ್ಷರಾಗಿ ಶ್ರೀಹರ್ಷ ಹೆಗಡೆ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಶೈಲಜಾ ಅಗರಂ ಆಯ್ಕೆಯಾಗಿದ್ದಾರೆ. ಇನ್ನು ಟೊರೆಂಟೊ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಯಾಗಿ ಬೆಂಗಳೂರು ಮೂಲದ ಸುಮುಖ ಶೇಷಾದ್ರಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಬೆಂಗಳೂರಿನ ಸುಮುಖ ಶೇಷಾದ್ರಿ

ಸುಮಾರು ಐದು ವರ್ಷದಿಂದ ಟೊರೊಂಟೊವಿನ ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸುಮುಖ, ಈ ಹಿಂದೆ ಸಿಂಗಪುರ ಹಾಗೂ ಅಮೆರಿಕ ದೇಶಗಳಲ್ಲಿ ಕೆಲಸ ಮಾಡಿದ್ದಾರೆ. ಮೂಲತಃ ಬೆಂಗಳೂರಿನ ಹೃದಯ ಭಾಗವಾದ ಚಿಕ್ಕಪೇಟೆಯ ಮೂಲ ನಿವಾಸಿಯಾಗಿರುವ ಅವರು, ಕಳೆದ ಮೂರು ದಶಕಗಳಿಂದ ಭಾರತ, ಸಿಂಗಾಪುರ, ಯುಎಸ್​ ಹಾಗೂ ಕೆನಡಾ ದೇಶಗಳಲ್ಲಿ ವಿವಿಧ ಸಾಂಸ್ಕೃತಿಕ/ಧಾರ್ಮಿಕ /ಆಧ್ಯಾತ್ಮಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ತಮ್ಮ ಆಯ್ಕೆ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, “ನಿಮ್ಮೆಲ್ಲರ ಸಹಕಾರದಿಂದ ನಮ್ಮ ಕನ್ನಡ ಸಂಘ, ಟೊರೆಂಟೊ ಕಾರ್ಯದರ್ಶಿಯಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಈ ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಜೈ ಕರ್ನಾಟಕ, ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂದು ಹೇಳಿದ್ದಾರೆ.

ಯುವ ಸಮಿತಿ

ಪ್ರಸ್ತುತ ಸಮಿತಿಯಲ್ಲಿ ಶ್ರೀಹರ್ಷ ಹೆಗಡೆ (ಅಧ್ಯಕ್ಷರು), ಶೈಲಜಾ ಅಗರಂ (ಉಪಾಧ್ಯಕ್ಷರು), ಸುಮುಖ ಶೇಷಾದ್ರಿ (ಕಾರ್ಯದರ್ಶಿ), ರವಿ ಗೌಂಡಳಕರ (ಖಜಾಂಚಿ) ಸೇರಿದಂತೆ ಮುಂತಾದವರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂಘದಲ್ಲಿ ಯುವ ಸಮಿತಿ ಕೂಡ ಇದ್ದು, ಕನ್ನಡ ಭಾಷೆಗಾಗಿ ಶ್ರಮಿಸುತ್ತಿರುವುದು ಗಮನಾರ್ಹ.

ಸಂಘದ ಉದ್ದೇಶವೇನು?

ಕನ್ನಡ ಭಾಷೆ ಮತ್ತು ಸಂಸೃತಿಯನ್ನು, ಕರ್ನಾಟಕದ ಹಿರಿಮೆಯನ್ನು ಟೊರೊಂಟೊ ಪ್ರದೇಶದಲ್ಲಿ ಪ್ರೋತ್ಸಾಹಿಸಿ, ಬೆಳೆಸುವುದು ಈ ಕನ್ನಡ ಸಂಘದ ಮುಖ್ಯಧ್ಯೇಯವಾಗಿದೆ. (ಕೆಎಸ್‌ಟಿ) ಗ್ರೇಟರ್ ಟೊರೊಂಟೊ ಪ್ರದೇಶದಲ್ಲಿ ಕನ್ನಡ ಮತ್ತು ಕರ್ನಾಟಕದ ಸಾಂಸ್ಕೃತಿಕ ಮತ್ತು ಭಾಷಾ ಪರಂಪರೆಯನ್ನು ಉತ್ತೇಜಿಸಲು, ಸಂರಕ್ಷಿಸಲು ಮತ್ತು ಆಚರಿಸಲು ಶ್ರಮಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net