ಮಕ್ಕಳ ಬೆಳವಣಿಗೆಗೆ ಬೇಸಿಗೆ ಶಿಬಿರ ಪೂರಕ

summer camp
ಬೇಸಿಗೆ ಶಿಬಿರದ ಸಮಾರೋಪವನ್ನು ಎಂ.ಎಸ್.ಸಂತೋಷ್ ಉದ್ಘಾಟಿಸಿದರು. ಬಿ.ಎಚ್.ಕೃಷ್ಣಪ್ಪ, ಸುಜಾತಾ, ಎಚ್.ಉಮೇಶ್ ಇತರರಿದ್ದರು.
Published on

ಶಿವಮೊಗ್ಗ: ಮಕ್ಕಳು ತಮ್ಮ ಬೆಳವಣಿಗೆ ಪೂರಕವಾದ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಅವರ ಬೆಳವಣಿಗೆಗೆ ಬೇಸಿಗೆ ಶಿಬಿರಗಳು ಸಹಕಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಅಭಿಪ್ರಾಯಪಟ್ಟರು.

ಬಾಲಭವನ ಸೊಸೈಟಿ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಸಹಯೋಗದಲ್ಲಿ ಕಾಶಿಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5 ರಿಂದ 16 ವರ್ಷದೊಳಗಿನ ಮಕ್ಕಳಿಗೆ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರದ ಸಮಾರೋಪವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಸಮರ್ಪಕವಾಗಿ ದಿನನಿತ್ಯದ ಕಾರ್ಯಗಳನ್ನು ನಿರ್ವಹಿಸಬೇಕು. ಸಮಯಪ್ರಜ್ಞೆ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಉನ್ನತಿ ಸಾಧಿಸಲು ಸಾಧ್ಯ. ಮಕ್ಕಳಿಗೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಮುಂತಾದ ಮಹನೀಯರು ಮಾದರಿ ಆಗಬೇಕು ಎಂದರು.

ಜಿಪಂ ಉಪಕಾರ್ಯದರ್ಶಿ ಸುಜಾತಾ ಮಾತನಾಡಿ, ಮಕ್ಕಳ ಮನೋವಿಕಾಸಕ್ಕೆ ಬೇಸಿಗೆ ಶಿಬಿರ ಅಗತ್ಯ. ಮೊದಲೆಲ್ಲ ಬೇಸಿಗೆ ರಜೆ ಬಂದ ಕೂಡಲೇ ಅಜ್ಜಿ ಮನೆಗೆ ಹೋಗಿ ಅಲ್ಲಿನ ವಾತಾವರಣದಲ್ಲಿ ಮಕ್ಕಳು ಇರುತ್ತಿದ್ದರು. ಇಂದು ಮೊಬೈಲ್, ಟಿವಿ ಮುಂತಾದವುಗಳ ವೀಕ್ಷಣೆಯಲ್ಲಿ ಕಾಲ ಕಳೆಯುವ ಮಕ್ಕಳು ಮಾನಸಿಕ ಸಮಸ್ಯೆ ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬೇಸಿಗೆ ಶಿಬಿರದಲ್ಲಿ ಯೋಗ, ಧ್ಯಾನ, ಶ್ಲೋಕ, ಚಿತ್ರಕಲೆ, ಕರಕುಶಲ ಕಲೆ, ಸಮೂಹ ನೃತ್ಯ, ಸಂಗೀತ, ರಂಗಕಲೆ, ಅಬಾಕಸ್‌ನಂತಹ ಸಕಾರಾತ್ಮಕ ಕಲಿಕೆಗಳು ಇರುವುದರಿಂದ ಮಕ್ಕಳ ಮನಸ್ಸು ವಿಕಾಸವಾಗುತ್ತದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಕೃಷ್ಣಪ್ಪ ಮಾತನಾಡಿ, ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ಉಪಯೋಗವಾಗುವ ಐದು ಚಟುವಟಿಕೆಗಳನ್ನು 15 ದಿನಗಳ ಕಾಲ ನಡೆಸಲಾಯಿತು. ಶಿಬಿರದಲ್ಲಿ 108 ಮಕ್ಕಳು ನೋಂದಣಿ ಮಾಡಿಕೊಂಡಿದ್ದರು ಎಂದು ತಿಳಿಸಿದರು.

ಜಿಲ್ಲಾ ಬಾಲ ಭವನ ಸಮಿತಿಯ ಕಾರ್ಯಕ್ರಮ ಸಂಯೋಜಕಿ ಆರ್.ಮಂಜುಳಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾ ನಾಯ್ಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಮೈತ್ರಿ ಕುಮಾರಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net