ಮಂಡ್ಯದಲ್ಲಿ ಎಚ್​ಡಿಕೆ vs ಸುಮಲತಾ? ಮತ್ತೊಮ್ಮೆ ಜಿದ್ದಾಜಿದ್ದಿನ ಕಣವಾಗಲಿದೆಯಾ ಸಕ್ಕರೆ ನಾಡು?

HDK vs Sumalatha
Published on

ಮಂಡ್ಯ: ಸಕ್ಕರೆ ನಾಡು ಮಂಡ್ಯ ವಿಧಾನಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಚನ್ನಪಟ್ಟಣದ ಜತೆಗೆ ಮಂಡ್ಯ ಕ್ಷೇತ್ರದಿಂದಲೂ ಚುನಾವಣ ಕಣಕ್ಕೆ ಇಳಿಯಲು ಮಾಜಿ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಮತ್ತೊಂದು ಸ್ಫೋಟಕ ಬೆಳವಣಿಗೆಯೊಂದು ನಡೆದಿದ್ದು, ಮಂಡ್ಯ ಮತ್ತೊಮ್ಮೆ ಜಿದ್ದಾಜಿದ್ದಿನ ಕಣವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಹೌದು, ಎಚ್​.ಡಿ. ಕುಮಾರಸ್ವಾಮಿ ಅವರು ಮಂಡ್ಯದಿಂದ ಚುನಾವಣಾ ಕಣಕ್ಕೆ ಇಳಿದರೆ, ಅವರ ವಿರುದ್ಧ ಸಂಸದೆ ಸುಮಲತಾ ಅಂಬರೀಷ್​ ಪಕ್ಷೇತರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಸುಮಲತಾ ಅವರ ಆಪ್ತ ಹಾನಗೆರೆ ಶಿವಕುಮಾರ್​ ಅವರು ಸುಳಿವು ನೀಡಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಸಿದ್ಧತೆ

ಸುಮಲತಾ ಅವರು ಪಕ್ಷೇತರವಾಗಿ ನಿಲ್ಲಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ತೆರೆಮರೆಯಲ್ಲಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಯುತ್ತಿದೆ ಎಂದು ಚರ್ಚೆಯಾಗುತ್ತಿದೆ. ಎಚ್​ಡಿಕೆ ತೀರ್ಮಾನದ ಮೇಲೆ ಸುಮಲತಾ ಸ್ಪರ್ಧೆಯ ನಿರ್ಧಾರ ನಿಂತಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಎಚ್​ಡಿಕೆ ಸ್ಪರ್ಧಿಸಿದ್ದೇ ಆದಲ್ಲಿ ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸಲಿದ್ದಾರೆ.

ಮಂಡ್ಯ ಕ್ಷೇತ್ರ ರಾಷ್ಟ್ರದ ಗಮನ ಸೆಳೆಯಲಿದೆ

ಸುಮಲತಾ ಮತ್ತು ಎಚ್​ಡಿಕೆ ಸ್ಪರ್ಧೆ ಮಾಡಿದರೆ, ಮತ್ತೊಮ್ಮೆ ಮಂಡ್ಯ ಕ್ಷೇತ್ರ ರಾಷ್ಟ್ರದ ಗಮನ ಸೆಳೆಯಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಚ್​ಡಿಕೆ ಪುತ್ರ ನಿಖಿಲ್​ ವಿರುದ್ಧ ನಿಂತು ಸುಮಲತಾ ಅವರು ಗೆಲುವು ದಾಖಲಿಸಿದ್ದಾರೆ. ಈ ಬಾರಿ ಮಾಜಿ ಸಿಎಂ ಎಚ್​ಡಿಕೆ ವಿರುದ್ಧವೇ ಸ್ಪರ್ಧಿಸಲು ಸುಮಲತಾ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಸ್ಪರ್ಧೆ ಖಚಿತ

ಮಾಜಿ ಸಿಎಂ ಎಚ್​ಡಿಕೆ ಮಂಡ್ಯದಿಂದ ಸ್ಪರ್ಧಿಸುವುದು ಖಚಿತ ಎಂದು ಹೇಳಲಾಗುತ್ತಿದೆ. ನಾಮಪತ್ರ ಸಲ್ಲಿಕೆಗಾಗಿ ಮಂಡ್ಯ ನಗರದ ಬ್ಯಾಂಕ್‌ನಲ್ಲಿ ಖಾತೆ ಓಪನ್ ಮಾಡಿದ್ದಾರೆ ಎನ್ನಲಾಗಿದೆ. ಕುಮರಸ್ವಾಮಿ ಹೆಸರಿನಲ್ಲಿ ಕಳೆದ ಶನಿವಾರ ಮಂಡ್ಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಖಾತೆ ತೆರೆದಿರುವುದಾಗಿ ಮಾಹಿತಿ ಸಿಕ್ಕಿದೆ. ನಾಮಪತ್ರ ಸಲ್ಲಿಸಬೇಕು ಎಂದರೆ ಸ್ಥಳೀಯ ಬ್ಯಾಂಕ್ ಶಾಖೆಯಲ್ಲಿ ಖಾತೆ ಇರಬೇಕು. ಈ‌ ನಿಟ್ಟಿನಲ್ಲಿ ಮಂಡ್ಯದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎಚ್​ಡಿಕೆ ಖಾತೆ ಓಪನ್‌ ಮಾಡಿದ್ದಾರೆಂದು ತಿಳಿದುಬಂದಿದೆ. ಇಂದಿನ ಸಭೆಯಲ್ಲಿ ಎಚ್​ಡಿಕೆ ತಮ್ಮ ಅಂತಿಮ ನಿರ್ಧಾರ ಹೇಳಲಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net